​ಸೆಲೂನ್‌ಗೆ ಹೋಗಿದ್ದ ಆರು ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Update: 2020-04-26 04:04 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಕ್ಷೌರ ಮತ್ತು ಗಡ್ಡ ಬೋಳಿಸಲು ಸೆಲೂನ್‌ಗೆ ಹೋಗಿದ್ದ ಆರು ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವ ಘಟನೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದಿದ್ದು, ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಧ್ಯಪ್ರದೇಶದ ಖರಗಾಂವ್ ಜಿಲ್ಲೆಯ ಬಾರಗಾಂವ್ ಎಂಬ ಗ್ರಾಮದ ಕ್ಷೌರಿಕನೊಬ್ಬ ಆರೂ ಮಂದಿ ಗ್ರಾಹಕರಿಗೆ ಕಟಿಂಗ್ ಮತ್ತು ಶೇವಿಂಗ್‌ನ ಒಂದೇ ಬಟ್ಟೆಯನ್ನು ಬಳಸಿದ್ದ ಎನ್ನಲಾಗಿದೆ. ಇಂದೋರ್‌ನಲ್ಲಿ ಹೋಟೆಲ್ ಕೆಲಸ ಮಾಡುತ್ತಿದ್ದ ಈ ಗ್ರಾಮದ ವ್ಯಕ್ತಿಯೊಬ್ಬ ಎ. 5ರಂದು ಇದೇ ಸೆಲೂನ್‌ಗೆ ಆಗಮಿಸಿದ್ದ. ಆತನಿಗೆ ಕೋವಿಡ್-19 ಸೋಂಕು ತಗುಲಿರುವುದು ಬಳಿಕ ದೃಢಪಟ್ಟಿತ್ತು ಎಂದು ಮುಖ್ಯ ವೈದ್ಯಕೀಯ ಮತ್ತು ಅರೋಗ್ಯಾಧಿಕಾರಿ ಡಾ. ದಿವ್ಯೇಶ್ ವರ್ಮಾ ಹೇಳಿದ್ದಾರೆ.

ಬಳಿಕ ಅದೇ ಸೆಲೂಗೆ ಹೋಗಿದ್ದ ಇತರ 12 ಮಂದಿಯ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಪೈಕಿ ಆರು ಮಂದಿಯ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ಅವರು ವಿವರಿಸಿದ್ದಾರೆ.

ಆದರೆ ಕ್ಷೌರಿಕನ ಫಲಿತಾಂಶ ನೆಗೆಟಿವ್ ಬಂದಿದೆ. ಖರಗಾಂವ್ ಜಿಲ್ಲೆಯಲ್ಲಿ ಇದುವರೆಗೆ 60 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News