ಹಿರಿಯ ಪತ್ರಕರ್ತರ ಹೆಸರಿನಲ್ಲಿ ಕೋಮುದ್ವೇಷ ಸಂದೇಶ ಹಬ್ಬಿದ ಕಿಡಿಗೇಡಿಗಳು : ಎಫ್ ಐಆರ್ ದಾಖಲು

Update: 2020-04-26 11:00 GMT

ಬೆಂಗಳೂರು, ಎ. 26: ಹಿರಿಯ ಪತ್ರಕರ್ತ ವಿಖಾರ್ ಅಹ್ಮದ್ ಸಯೀದ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರೆದು ಕೋಮುದ್ವೇಷದ  ಸಂದೇಶ ಹಬ್ಬಿದ ಕಿಡಿಗೇಡಿಗಳ ವಿರುದ್ಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ಹಿರಿಯ ಪತ್ರಕರ್ತ ವಿಖಾರ್ ಅಹ್ಮದ್ ಸಯೀದ್ ಅವರು ನೀಡಿದ ದೂರಿನನ್ವಯ ಆರೋಪಿಗಳ ವಿರುದ್ಧ ಐಟಿ ಆಕ್ಟ್ ಅಡಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ ?

ಪತ್ರಕರ್ತ ವಿಖಾರ್ ಅಹ್ಮದ್ ಸಯೀದ್ ಅವರು ಟ್ವಿಟ್ಟರ್ ನಲ್ಲಿ @VAsayeed ಹೆಸರಿನ ಖಾತೆ ಹೊಂದಿದ್ದಾರೆ. ಆದರೆ, ಇದೇ ರೀತಿ ಹೋಲಿಕೆ ಆಗುವಂತೆ ಕಿಡಿಗೇಡಿಯೊರ್ವ Sayeed Ahmed.V ಹೆಸರಿನಲ್ಲಿ ಖಾತೆ ಆರಂಭಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮತ್ತು ಕೋಮುದ್ವೇಷಯುಳ್ಳ ಸಂದೇಶಗಳನ್ನು ಹಬ್ಬಿಸಿದ್ದಾನೆ. ಅಷ್ಟೇ ಅಲ್ಲದೆ, ಫೇಸ್‌ಬುಕ್  ಮತ್ತು ವಾಟ್ಸ್ಆ್ಯಪ್ ಗುಂಪುಗಳಿಗೂ ರವಾನಿಸಿ ಪತ್ರಕರ್ತ ವಿಖಾರ್ ಅಹ್ಮದ್ ಸಯೀದ್ ಅವರೇ ಈ ರೀತಿ ಮಾಡಿದಂತೆ ಬಿಂಬಿಸಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ವಿಖಾರ್ ಅಹ್ಮದ್ ಸಯೀದ್ ಅವರು ಕಿಡಿಗೇಡಿಗಳ ವಿರುದ್ಧ ಇಲ್ಲಿನ ಪಶ್ವಿಮ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಇದರನ್ವಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಕ್ಷಮೆ ಕೇಳಿದ ಕಿಡಿಗೇಡಿ: ಸುಳ್ಳು ವದಂತಿ ಹಬ್ಬಿಸಿದ ಕುರಿತು ವಿಖಾರ್ ಅಹ್ಮದ್ ಸಯೀದ್ ಅವರು ದೂರು ನೀಡುತ್ತಿದ್ದಂತೆಯೇ, ಕೆಲವರು ಅವರ ಬಳಿ ಕ್ಷಮೆ ಕೇಳಿದ್ದಾರೆ. ಆದರೆ, ಈ ಬಗ್ಗೆ ಪೊಲೀಸರು ತಪ್ಪಿತಸ್ಥರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಬೇಕೆನ್ನುವುದು ವಿಖಾರ್ ಅಹ್ಮದ್ ಸಯೀದ್ ಅವರ ಒತ್ತಾಯ.

ಕಾನೂನು ಕ್ರಮ ಕೈಗೊಳ್ಳಿ

''ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಕೋಮು ಭಾವನೆ ಕೆರಳಿಸುವ ಸಂದೇಶಗಳನ್ನು ಸೃಷ್ಟಿಸಿ ಹಂಚಿಕೆ ಮಾಡುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

-ವಿಖಾರ್ ಅಹ್ಮದ್ ಸಯೀದ್, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News