ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಯೊಂದೇ ಪರಿಹಾರ

Update: 2020-04-28 07:06 GMT

ನಟ್ಟ ಬೇಸಿಗೆ ಕಾಲವಿದು. ಕೊರೋನ ಇಲ್ಲದೇ ಇದ್ದರೂ, ನೂರಾರು ಕಾರಣಗಳಿಗಾಗಿ ಈ ಕಾಲ ಸುದ್ದಿಯಲ್ಲಿರುತ್ತಾ ಬಂದಿದೆ. ಮುಖ್ಯವಾಗಿ ಈ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರುತ್ತದೆ. ಮೇ ತಿಂಗಳಲ್ಲಿ ಬೆಂಗಳೂರಿನಂತಹ ನಗರಗಳ ಮುಖ್ಯ ಸಮಸ್ಯೆಯೇ ಬಾಯಾರಿಕೆ. ಒಂದೆಡೆ ರೈತರ ಕೃಷಿಗೆ ನೀರು ಒದಗಿಸಬೇಕು. ಇನ್ನೊಂದೆಡೆ ನಗರದ ಜನರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಬೇಕು. ವಿಪರ್ಯಾಸವೆಂದರೆ, ಈ ಬಾರಿ ಕೊರೋನವನ್ನು ಮುಂದಿಟ್ಟುಕೊಂಡು ಉಳಿದೆಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಸರಿಸಲಾಗಿದೆ. ಕೊರೋನ ಹೊರತು ಪಡಿಸಿ ಇನ್ನಾವುದೇ ಸಮಸ್ಯೆಗಳ ಬಗ್ಗೆ ಮಾತನಾಡದಂತೆ ಮಾಧ್ಯಮಗಳ ಬಾಯಿಗೆ ‘ಲಾಕ್‌ಡೌನ್’ ಜಡಿಯಲಾಗಿದೆ. ಆದುದರಿಂದ, ಈ ಬಾರಿ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲವೆಂದು ನಾವು ಭಾವಿಸಬೇಕಾಗುತ್ತದೆ. ಜನರ ಅತ್ಯಗತ್ಯ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ವಿವಿಧ ಕಚೇರಿಗಳು, ಅಧಿಕಾರಿಗಳು ‘ಲಾಕ್‌ಡೌನ್’ನ ಲಾಭವನ್ನು ಗರಿಷ್ಠ ಪ್ರಮಾಣದಲ್ಲಿ ತಮ್ಮದಾಗಿಸುತ್ತಿದ್ದಾರೆ. ಆದುದರಿಂದಲೇ ಕೋಲಾರ, ಚಿಕ್ಕಬಳ್ಳಾಪುರದಂತಹ ಪ್ರದೇಶಗಳ ನೀರಿನ ಸಮಸ್ಯೆ ಮುನ್ನೆಲೆಗೆ ಬರುತ್ತಿಲ್ಲ. ರಾಜ್ಯದ ಎಲ್ಲಾದರೂ ಒಬ್ಬನಲ್ಲಿ ಕೊರೋನ ಸೋಂಕು ಕಂಡು ಬಂದರೆ, ತಕ್ಷಣವೇ ಮಾಧ್ಯಮಗಳ ‘ರಣಕೇಕೆ’ ಆರಂಭವಾಗುತ್ತವೆ. ಆದರೆ ಕುಡಿಯುವ ನೀರಿನ ಕೊರತೆಯಿಂದ ತತ್ತರಿಸಿ ಕೂತ ಜನರು ಹಾಗೂ ಕೃಷಿ ಪ್ರದೇಶಗಳಿಗೆ ನೀರಿನ ಕೊರತೆಯಿಂದ ತಲೆ ಮೇಲೆ ಕೈಯಿಟ್ಟುಕೂತಿರುವ ರೈತರ ಸಂಕಟಗಳು ಯಾರಿಗೂ ಮುಖ್ಯವೆನಿಸುತ್ತಿಲ್ಲ. ಹಾಗಾದರೆ, ಕೊರೋನ ಮುಗಿಯುವವರೆಗೆ ಜನರು ತಮ್ಮ ಸದ್ಯದ ಮತ್ತು ಭವಿಷ್ಯದ ಇತರ ಯಾವುದೇ ಸಮಸ್ಯೆಗಳನ್ನು ರಾಜ್ಯದ ಮುಂದೆ ಇಡುವ ಅವಕಾಶವೇ ಇಲ್ಲವೇ? ಕೊರೋನ ಗದ್ದಲ ಮುಗಿಯಲು ಏನಿಲ್ಲ ಎಂದರೂ ಮೂರು ತಿಂಗಳು ಬೇಕಾಗಬಹುದು. ಆದರೆ ಪ್ರತಿ ವರ್ಷ ಬೇಸಿಗೆ ಮತ್ತು ಮಳೆಗಾಲದಲ್ಲಿ ಜನರು ಎದುರಿಸುತ್ತಾ ಬಂದಿರುವ ಇನ್ನಿತರ ಭೀಕರ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವವರು ಯಾರು?

ನಗರಗಳಲ್ಲಿ ಈ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ಗದ್ದಲ ಕೇಳಿಸದೇ ಇರುವಲ್ಲಿ ಮುಖ್ಯ ಕಾರಣವೊಂದಿದೆ. ‘ಲಾಕ್‌ಡೌನ್’ ಕಾರಣದಿಂದ ನಗರದ ಹೊಟೇಲ್‌ಗಳು, ಲಾಡ್ಜ್‌ಗಳು ಬಂದ್ ಆಗಿವೆ. ಈ ಉದ್ಯಮ ವಲಯ ಬಹುತೇಕ ನೀರನ್ನು ಕುಡಿದು ಬಿಡುವುದು ನೀರಿನ ಕೊರತೆಗೆ ಮುಖ್ಯ ಕಾರಣ. ನೀರನ್ನು ಅಕ್ರಮವಾಗಿ ದಾಸ್ತಾನಿಡುವ ವಲಯಗಳಲ್ಲಿ ಹೊಟೇಲ್ ಉದ್ಯಮ ಕೂಡ ಒಂದು. ಇದೇ ಸಂದರ್ಭದಲ್ಲಿ ಮಧ್ಯಮ ಕೈಗಾರಿಕೆಗಳೂ ಮುಚ್ಚಿರುವುದರಿಂದ ಈ ಬಾರಿ ಈ ಹಿಂದಿನಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿಕ್ಕಿಲ್ಲ. ಜೊತೆಗೆ, ಲಾಕ್‌ಡೌನ್ ಪರಿಣಾಮದಿಂದ ಪರಿಸರದ ಮೇಲೂ ಸಣ್ಣ ಮಟ್ಟಿನ ಪರಿಣಾಮಗಳಾಗಿವೆ. ಅಂತರ್ಜಲ ಹೆಚ್ಚಿರುವ ಬಗ್ಗೆ, ನದಿಗಳ ಮಾಲಿನ್ಯದಲ್ಲಿ ಇಳಿಕೆಯಾಗಿರುವ ಬಗ್ಗೆ ವರದಿಗಳು ಬರುತ್ತಿವೆ. ಇವೆಲ್ಲವೂ ಪರೋಕ್ಷವಾಗಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಆಶಾದಾಯಕ ಸುದ್ದಿಗಳಾಗಿವೆ. ಆದರೆ ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಕೃಷಿ ಚಟುವಟಿಕೆಗಳ ಕುರಿತಂತೆ ಅಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ.

ಇನ್ನೇನೂ ಒಂದು ತಿಂಗಳಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಬೇಕು. ನೀರು, ಗೊಬ್ಬರ, ಬೀಜ ಇತ್ಯಾದಿಗಳಿಗೆ ಸಿದ್ಧತೆ ನಡೆಸಬೇಕು. ಆದರೆ ಇದಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಬೇಕಾದ ಸರಕಾರದ ಬಹುತೇಕ ಕಚೇರಿಗಳು ಮತ್ತು ಅಧಿಕಾರಿಗಳು ಲಾಕ್‌ಡೌನ್ ಹೆಸರಿನಲ್ಲಿ ತಮ್ಮ ತಮ್ಮ ಮನೆಯೊಳಗೆ ತೆಪ್ಪಗಿದ್ದಾರೆ. ಇಡೀ ಆಡಳಿತ ಯಂತ್ರವೇ ತುಕ್ಕು ಹಿಡಿದು ನಿಂತಿರುವ ಈ ಸಂದರ್ಭದಲ್ಲಿ, ರೈತರು ಬೀದಿಗಿಳಿದು ಸರಕಾರದ ವಿರುದ್ಧ ಪ್ರತಿಭಟನೆಯೂ ಮಾಡುವಂತಿಲ್ಲ. ಮಾಡಿದ್ದೇ ಆದರೆ ಅವರ ಮೇಲೆ ಕೊರೋನ ಸಾಂಕ್ರಾಮಿಕ ರೋಗ ಹಬ್ಬಿಸಲು ಯತ್ನಿಸಿದ ಆರೋಪವನ್ನು ಹೊರಿಸಬಹುದು. ಮಾಧ್ಯಮಗಳು ‘ರೈತ ವೈರಸ್’ ಎಂದು ಕರೆದು ಅವರನ್ನು ಕ್ರಿಮಿನಲ್‌ಗಳನ್ನಾಗಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಸರಕಾರವನ್ನು ಎಚ್ಚರಿಸುವ ಬಗೆ ತಿಳಿಯದೇ ಗ್ರಾಮೀಣ ಪ್ರದೇಶದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ಜೂನ್-ಜುಲೈ ತಿಂಗಳು ಮಳೆಗಾಲಕ್ಕಾಗಿ ಮಾತ್ರವಲ್ಲ, ಬರಗಾಲಕ್ಕಾಗಿಯೂ ಸುದ್ದಿಯಲ್ಲಿರುತ್ತವೆ. ಈ ಹಿಂದೆ ಪ್ರಕೃತಿ ವಿಕೋಪದಿಂದ ನೂರಾರು ಕೃಷಿಕರು ನಾಶ, ನಷ್ಟ ಅನುಭವಿಸಿದ್ದಾರೆ. ಅವರಿಗೆ ಸಿಗಬೇಕಾದ ಪರಿಹಾರ ಇನ್ನೂ ಪೂರ್ಣವಾಗಿ ಬಿಡುಗಡೆಗೊಂಡಿಲ್ಲ. ಪ್ರಕೃತಿ ವಿಕೋಪದಿಂದಾದ ನಾಶದಿಂದ ಚೇತರಿಸಿಕೊಂಡು ಎದ್ದು ನಿಲ್ಲಬೇಕಾದರೆ ಸರಕಾರದ ಸಹಕಾರ ಅಗತ್ಯ. ವಿಪರ್ಯಾಸವೆಂದರೆ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಪರಿಹಾರ ಅತಿ ಕಡಿಮೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪರಿಹಾರವನ್ನು ಕೊರೋನ ವಿರುದ್ಧದ ಹೋರಾಟಕ್ಕೆ ಬಳಸಲು ಕೇಂದ್ರ ಸರಕಾರ ಸಲಹೆ ನೀಡಿದೆ.

ಈಗಾಗಲೇ ತೀವ್ರ ಹಣದ ಕೊರತೆ ಎದುರಿಸುತ್ತಿರುವ ರಾಜ್ಯ ಸರಕಾರ ಸಹಜವಾಗಿಯೇ ಈ ಹಣವನ್ನು ಕೊರೋನ ಕಾರ್ಯಕ್ರಮಗಳಿಗಾಗಿ, ಜನರ ಅತ್ಯಗತ್ಯ ವಸ್ತುಗಳ ಪೂರೈಕೆಗಳಿಗಾಗಿ ಬಳಸುತ್ತಿದೆ. ಪರಿಣಾಮವಾಗಿ, ಪ್ರಕೃತಿ ವಿಕೋಪದಿಂದ ತತ್ತರಿಸಿದ ಜನರ ನೆರವಿಗೆ ಹಣ ಒದಗಿಸಲು ಸರಕಾರಕ್ಕೆ ಕಷ್ಟವಾಗುತ್ತಿದೆ. ಇದು ಮುಂದಿನ ದಿನಗಳ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಲಾಕ್‌ಡೌನ್ ದೆಸೆಯಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿ ಬಿಟ್ಟಿದೆ. ಅದನ್ನು ತುಂಬುವ ಯಾವುದೇ ದಾರಿ ಸರಕಾರದ ಮುಂದಿಲ್ಲ. ಇದೀಗ, ಜೂನ್ ತಿಂಗಳಲ್ಲಿ ಕೃಷಿಕರಿಗೆ ನೆರವಾಗುವುದಕ್ಕೆ ಬೇಕಾದ ಆರ್ಥಿಕ ಶಕ್ತಿ ಸರಕಾರಕ್ಕೆ ಇಲ್ಲವಾಗಿದೆ. ಕರಾವಳಿ ಪ್ರದೇಶದಲ್ಲಿ ಮಳೆಗಾಲ ಆರಂಭವಾಯಿತು ಎಂದರೆ ಮಲೇರಿಯಾ, ಡೆಂಗ್ ಮೊದಲಾದ ರೋಗಗಳು ಜೀವ ಪಡೆಯುತ್ತವೆ. ಕೊರೋನದ ಜೊತೆ ಜೊತೆಗೇ ಇದರ ವಿರುದ್ಧವೂ ಹೋರಾಟ ನಡೆಸಲು ಸರಕಾರ ಸಿದ್ಧತೆ ನಡೆಸಬೇಕು. ಆದರೆ ಈಗಾಗಲೇ ಆಸ್ಪತ್ರೆಗಳು ಕೊರೋನಕ್ಕೆ ಹೆದರಿ ಕೂತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಮಲೇರಿಯಾ, ಡೆಂಗ್‌ನಂತಹ ರೋಗಗಳ ವಿರುದ್ಧ ಹೊಸದಾಗಿ ಸಿದ್ಧವಾಗುವ ಶಕ್ತಿ ಅದಕ್ಕಿದೆಯೇ ಎನ್ನುವ ಪ್ರಶ್ನೆಯೂ ನಮ್ಮನ್ನು ಆತಂಕಕ್ಕೆ ತಳ್ಳುತ್ತಿದೆೆ. ಮುಖ್ಯವಾಗಿ ಲಾಕ್‌ಡೌನ್ ಬೇರೆ ಬೇರೆ ರೀತಿಯಲ್ಲಿ ಹೊಸ ರೋಗಗಳೆಡೆಗೆ ನಾಡನ್ನು ಕೈ ಹಿಡಿದು ಮುನ್ನಡೆಸುತ್ತಿದೆ. ಭವಿಷ್ಯದಲ್ಲಿ ಈ ರೋಗಗಳು ಕೊರೋನಕ್ಕಿಂತಲೂ ಭೀಕರವಾಗಿ ಕಾಡಬಹುದು.

ಆದುದರಿಂದ, ಲಾಕ್‌ಡೌನ್‌ನ್ನು ಅಗತ್ಯಕ್ಕೆ ತಕ್ಕಂತೆ ಸಡಿಲಿಸುತ್ತಾ ಬರುವುದೇ ಸರಕಾರದ ಮುಂದಿರುವ ಏಕೈಕ ದಾರಿ. ಕೊರೋನ ಎದುರಿಸಲು ಲಾಕ್‌ಡೌನ್ ಒಂದೇ ಪರಿಹಾರ ಎನ್ನುವ ನಂಬಿಕೆಯನ್ನು ಕೈ ಬಿಟ್ಟು, ಇತರ ಪರ್ಯಾಯ ದಾರಿಗಳಿಗಾಗಿ ವೈದ್ಯರು, ಆರ್ಥಿಕ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಬೇಕು. ಮನೆಯೊಳಗೆ ಕೂತು ಮಾತ್ರವಲ್ಲ, ಮನೆಯೊಳಗಿಂದ ಹೊರ ಬಂದು ಕೊರೋನವನ್ನು ಎದುರಿಸುವ ದಾರಿಗಳನ್ನು ಕಂಡುಕೊಳ್ಳಬೇಕು. ಹಾಗೆಯೇ ಎಲ್ಲ ಸರಕಾರಿ ಇಲಾಖೆಗಳು ತೆರೆಯಲು, ಸರಕಾರಿ ಅಧಿಕಾರಿಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಹಾಜರಾಗಲು ಆದೇಶ ನೀಡಬೇಕು. ಲಾಕ್‌ಡೌನ್ ಸಡಿಲಿಕೆಗೆ ಹಂತಹಂತವಾಗಿ ಅನುಮತಿ ನೀಡುತ್ತಾ ಮತ್ತೆ ಆರ್ಥಿಕ, ಕೃಷಿ ಚಟುವಟಿಕೆಗಳು ಚಿಗುರುವಂತೆ ಮಾಡಬೇಕು. ಈ ಮೂಲಕ ಈ ಬಾರಿಯ ಮುಂಗಾರು ಕರ್ನಾಟಕದ ಜನರ ಬದುಕಿಗೆ ಹೊಸ ಭರವಸೆಯನ್ನು ನೀಡುವಂತಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News