ನೀವು ಮರಾಠ ರಾಜರ ಮೇಲೆ ಸುರಿಸುವ ಹೊಗಳಿಕೆ ಕರ್ನಾಟಕ, ಕೆಂಪೇಗೌಡರಿಗೆ ಮಾಡುವ ಅವಮಾನ

Update: 2020-05-05 09:42 GMT

ಪ್ರಸಕ್ತ ರಾಜಕಾರಣದ ಬಗ್ಗೆ, ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ, ಶತಮಾನಗಳಷ್ಟು ಹಿಂದಿನ ಘಟನೆಗಳ ಬಗ್ಗೆ, ಮೊಘಲರ ವಿರುದ್ಧ, ಬಹಮನಿ ಸುಲ್ತಾನರ ವಿರುದ್ಧ ಟ್ವೀಟ್ ಗಳನ್ನು ಮಾಡುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗಷ್ಟೇ ಇದೇ ರೀತಿಯ ಟ್ವೀಟ್ ಒಂದನ್ನು ಮಾಡಿದ್ದಾರೆ. ಯುವ ರಾಜಕಾರಣಿಯಾಗಿ ಕ್ಷೇತ್ರದ, ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕಾದ ಇವರು ಹಿಂದಕ್ಕೆ ಸಾಗುತ್ತಾ ಹಿಂದಿನ ವಿಚಾರಗಳ ಬಗ್ಗೆ ಟ್ವೀಟ್ ಮಾಡುತ್ತಿರುವುದು ಹಲವು ಬಾರಿ ಟ್ವಿಟರಿಗರ ಕಣ್ಣು ಕೆಂಪಾಗಿಸಿದೆ. ಈ ಬಾರಿ ಇದೇ ರೀತಿ ಮೊಘಲರ ಬಗ್ಗೆ ಟ್ವೀಟ್ ಮಾಡಿದ ತೇಜಸ್ವಿ ಸೂರ್ಯರಿಗೆ ರಕ್ಷಿತ್ ಪೊನ್ನಾಥಪುರ ಸರಣಿ ಟ್ವೀಟ್ ಗಳಲ್ಲಿ ನೀಡಿರುವ ಉತ್ತರ ಭಾರೀ ಮೆಚ್ಚುಗೆ ಪಡೆದುಕೊಂಡಿದೆ ಮತ್ತು ಇತಿಹಾಸಗಳನ್ನು ಹೇಗೆ ನೋಡಬೇಕು ಎನ್ನುವ ಪಾಠವನ್ನೂ ಸಂಸದರಿಗೆ ಕಲಿಸಿಕೊಟ್ಟಿದೆ.

ಸಂಸದರಾಗಿ ಮಾಡಬೇಕಾದ ಕರ್ತವ್ಯದ ಬದಲು ಮೊಘಲರ ಬಗ್ಗೆ ಇತ್ತೀಚೆಗೆ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, “ಶಿಕ್ಷಿತ, ಲಿಬರಲ್ ಹಾಗೂ `ಆಧುನಿಕ' ಮುಸ್ಲಿಮರು ಕೂಡ ಮೊಘಲರ ಆಡಳಿತವನ್ನು ವರ್ಣರಂಜಿತವಾಗಿ ಬಣ್ಣಿಸಿ ಆ ದೌರ್ಜನ್ಯಕಾರಿ ಯುಗವನ್ನು ಸುವರ್ಣ ಯುಗ ಎಂದು ಬಣ್ಣಿಸುತ್ತಿರುವುದನ್ನು ನೋಡಿದಾಗ ಈ  ಸಹಜವೆಂಬಂತೆ ಕಾಣುವ ಆಧುನಿಕತೆ, ವ್ಯವಹಾರ ಚಾತುರ್ಯತೆ ಹಾಗೂ ಮೆರುಗಿನ ಹಿಂದೆ 16ನೇ ಶತಮಾನದ  ಧರ್ಮಾಂಧತೆ ಅಡಗಿದೆ. ಅಫ್ಘಾನ್ ಖಾನ್ ಗಳನ್ನು ವರ್ಣರಂಜಿತವಾಗಿ ಬಣ್ಣಿಸುವ ತನಕ ಶಿವಾಜಿಯ ಕಾವಲು ಮುಂದುವರಿಯಬೇಕು'' ಎಂದು ಹೇಳಿದ್ದರು.

ಈ ಬಗ್ಗೆ ರಕ್ಷಿತ್ ಪೊನ್ನಾಥಪುರ ಅವರು ಸರಣಿ ಟ್ವೀಟ್ ಗಳ ನೀಡಿರುವ ತಿರುಗೇಟು ಈ ಕೆಳಗಿದೆ.

“ನೀವು ಸಂಸತ್ತಿನಲ್ಲಿ ಪ್ರತಿನಿಧಿಸುವ ಬೆಂಗಳೂರನ್ನು 2ನೆ ಕೆಂಪೇಗೌಡರಿಂದ ಶಿವಾಜಿಯ ತಂದೆ ಹಾಗೂ ಬಿಜಾರಪುರದ ರನಾದುಲ್ಲಾಹ್ ಖಾನ್  ಅವರ ಜಂಟಿ ಸೈನ್ಯವು ಸೆಳೆದಿತ್ತು. 60 ವರ್ಷಗಳ ನಂತರ ಮೊಘಲ್ ದೊರೆ ಔರಂಗ್‍ ಜೇಬ್‍ಗೆ 3 ಲಕ್ಷ ನೀಡಿ ಶಿವಾಜಿಯ ಸೋದರನಿಂದ ಒಡೆಯರ್ ಗಳು ಬೆಂಗಳೂರನ್ನು ಮರಳಿ ಪಡೆದಿದ್ದರು. ಯಾರ ಕಾವಲು ಮತ್ತೆ ?”

“ಕೆಂಪೇಗೌಡ ಅವರು ತಮ್ಮ ಜೀವ ಉಳಿಸಿಕೊಳ್ಳಲು ಬೆಂಗಳೂರಿನಿಂದ ಪರಾರಿಯಾಗಿ ಸ್ವಲ್ಪ ಸಮಯ ತಲೆಮರೆಸಿಕೊಳ್ಳಬೇಕಾಯಿತು. ಒಪ್ಪಂದಗಳಿಗೆ ಸಹಿ ಹಾಕಿ ಕೊನೆಗೆ ಸಣ್ಣ,  ಬರಡು ಭೂಮಿಯಾದ ಮಾಗಡಿಯಿಂದ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಆದುದರಿಂದ ಮಾಗಡಿ ಕೆಂಪೇಗೌಡ. ನಗರದ ಕುರಿತಾದ  ‘ಬೆಂಗಳೂರಿನ ಇತಿಹಾಸ' ಕೃತಿಯಲ್ಲಿ ಆಕ್ರಮಣದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಲಾಗಿದೆ”.

“ಇತಿಹಾಸ ಕ್ಲಿಷ್ಟಕರವಾಗಿದೆ. ನೀವು ಅನ್ವಯಿಸುವ ಕೇವಲ ಹಿಂದು-ಮುಸ್ಲಿಂ ವಿಚಾರದಷ್ಟು ಅದು ಸುಲಭವಲ್ಲ. ಮರಾಠರು ನಿಜಾಮರು, ಬಿಜಾಪುರ ಹಾಗೂ ಮೊಘಲರ ಜತೆ ಪರ್ಯಾಯವಾಗಿ ಸೇರಿ  ಕರ್ನಾಟಕದ ಹಿಂದು ಅರಸರು ಹಾಗೂ ಸಾಮ್ರಾಜ್ಯಗಳಿಗೆ ದೊಡ್ಡ ಆಘಾತ ನೀಡಿದ್ದರು. ನೀವು ಅದರ ಬಗ್ಗೆ ಮಾತನಾಡಬಲ್ಲಿರಾ ?, ಯಾರ ಇತಿಹಾಸಕ್ಕೆ ಕಾಮಾಲೆ ತಟ್ಟಿದೆ ?”

“@INCKarnataka & @JanataDal_S  ಏಕೆ ಇನ್ನೂ ಕರ್ನಾಟಕದಲ್ಲಿನ ಮರಾಠ ಆಡಳಿತಗಾರರ ಇತಿಹಾಸವನ್ನು ಬಯಲುಗೊಳಿಸಿಲ್ಲ ಎಂದು ಯೋಚಿಸುತ್ತಿದ್ದೇನೆ. ಮುಂದಿನ ಬಾರಿ ತೇಜಸ್ವಿ ಸೂರ್ಯ ಶಿವಾಜಿಯ ಬಗ್ಗೆ ಮಾತನಾಡಿದರೆ,  ಕೆಂಪೇಗೌಡ ಒಬ್ಬ ನಿಷ್ಠಾವಂತ ಹಿಂದುವಾಗಿದ್ದರೂ ಅವರಿಗೆ ಶಿವಾಜಿಯ ತಂದೆ ಹಾಗೇಕೆ ಮಾಡಿದರು ಎಂದು ಡಿಕೆಎಸ್ ಹಾಗೂ ಎಚ್‍ಡಿಕೆ  ಪ್ರಶ್ನಿಸಬೇಕು”.

“ಮರಾಠ ರಾಜರ ಮೇಲೆ @ಬಿಜೆಪಿ ಕರ್ನಾಟಕ  ಸುರಿಸುತ್ತಿರುವ  ಹೊಗಳಿಕೆ ರಾಜ್ಯಕ್ಕೆ ಮತ್ತು ಅದರ ಆತ್ಮಗೌರವಕ್ಕೆ, ಕರ್ನಾಟಕದ ಗತವೈಭವ ಹಾಗೂ ಇತಿಹಾಸಕ್ಕೆ ಅಪಮಾನಕಾರಿ. ಮರಾಠರನ್ನು ಮಹಾರಾಷ್ಟ್ರದಲ್ಲಿ  ಗೌರವಿಸಲಾಗುತ್ತದೆ. ಆ ಕೆಲಸವನ್ನು ಮಹಾರಾಷ್ಟ್ರದ ಜನರಿಗೇ ಬಿಟ್ಟು ಬಿಡಿ”.

“ಮರಾಠ ರಾಜರನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸುವ ಉದ್ದೇಶ ಈ ಥ್ರೆಡ್‍ ಗಿಲ್ಲ. ಇತಿಹಾಸದ ಅತಿ ಸರಳತೆಯನ್ನು ಬಯಲುಗೊಳಿಸುವುದೇ ಇದರ ಉದ್ದೇಶ. ಇದಕ್ಕಾಗಿ ಕೆಲವೊಂದು ಆಯ್ದ ವಿಚಾರಗಳನ್ನಷ್ಟೇ ಹೇಳಿದ್ದೇನೆ. ಒಂದು ವಿಧದಲ್ಲಿ ನಾನು ಕೂಡ ಅತೀ ಸರಳೀಕೃತಗೊಳಿಸಿದ್ದೇನೆ. ಹಿಂದೆ ಎಲ್ಲರೂ ಮಾಡಿದ್ದನ್ನೂ ಅವರೂ ಮಾಡಿದ್ದಾರೆ”.

“ತಮಗೆ ಬೇಕಿದ್ದವರ ಜತೆ ಮೈತ್ರಿ ಸಾಧಿಸಿ ತಮ್ಮ ಬಲವೃದ್ಧಿಸಿ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಗುತ್ತಿತ್ತು. ಸ್ನೇಹಿತರು ವೈರಿಗಳಾಗಿ ಮತ್ತೆ ಸ್ನೇಹಿತರಾಗುತ್ತಿದ್ದರು. ಎಲ್ಲಾ ಸಾಮ್ರಾಜ್ಯಗಳ ಕಥೆಯೂ ಇದೇ ಆಗಿದೆ. ಮುಸ್ಲಿಂ ಅರಸರ ಬಳಿ ಹಿಂದು ಸೇನಾಧಿಪತಿಗಳಿದ್ದರು ಹಾಗೂ ಹಿಂದು ಅರಸರ ಬಳಿ ಮುಸ್ಲಿಂ ಸೇನಾಧಿಪತಿಗಳಿದ್ದರು. ಮುಸ್ಲಿಂ ಹಾಗೂ ಹಿಂದು ಸಾಮ್ರಾಜ್ಯಗಳೂ ಜತೆಯಾಗಿ ಕೆಲಸ ಮಾಡಿದ್ದವು ಹಾಗೂ ಯುದ್ಧಗಳಲ್ಲೂ ಜತೆಯಾಗಿ ಭಾಗಿಯಾಗಿದ್ದವು”.

“ಒಟ್ಟಾರೆಯಾಗಿ ಆ ಕಾಲದ ರಾಜಕಾರಣ ಬಹಳ ಕ್ಲಿಷ್ಟಕರವಾಗಿತ್ತು. ಅದನ್ನೆಲ್ಲಾ ಹಿಂದು ವರ್ಸಸ್ ಮುಸ್ಲಿಂ ವಿಚಾರವನ್ನಾಗಿಸಿ ಇಸ್ಲಾಮಿಕ್ ದೌರ್ಜನ್ಯದ ವಿರುದ್ಧ ವೀರ ಹಿಂದುಗಳ ಒಗ್ಗಟ್ಟು ಎಂಬ ಒಂದು ದೋಷಪೂರಿತ ಚಿತ್ರಣವನ್ನು ನೀಡುವುದು ತಪ್ಪು. ಶಿವಾಜಿ ಹಾಗೂ ಶಿವಾಜಿಯ ಕುಟುಂಬದವರು ಹಲವು ಖಾನ್‍ ಗಳ ಜತೆ ಮೈತ್ರಿ ಮಾಡಿಕೊಂಡಿದ್ದರು”.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News