ವಿದೇಶಗಳಲ್ಲಿರುವ 10 ಸಾವಿರಕ್ಕೂ ಅಧಿಕ ಕನ್ನಡಿಗರು ಮೇ 8ರಿಂದ ರಾಜ್ಯಕ್ಕೆ: ಆರೋಗ್ಯ ಇಲಾಖೆ ಆಯುಕ್ತ

Update: 2020-05-05 16:37 GMT

ಬೆಂಗಳೂರು, ಮೇ.5: ವಿದೇಶಗಳಲ್ಲಿ ಸಿಲುಕಿರುವ 10 ಸಾವಿರಕ್ಕೂ ಹೆಚ್ಚು ಕನ್ನಡಿಗರು ಮೇ 8ರ ಬಳಿಕ ರಾಜ್ಯಕ್ಕೆ ಮರಳಲಿದ್ದು, ಅವರನ್ನು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಮಂಗಳೂರು ನಗರಗಳಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿವಿಧ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ 10,823 ಮಂದಿಯನ್ನು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಮಂಗಳೂರು ನಗರಗಳಲ್ಲೇ ಕ್ವಾರಂಟೈನ್‍ ಗೆ ಒಳಪಡಿಸಲಾಗುತ್ತದೆ. ವರದಿ ನೆಗೆಟಿವ್ ಬಂದ ನಂತರ ಅವರನ್ನು ಮನೆಗಳಿಗೆ ಕಳುಹಿಸಲಾಗುವುದು. ಮೊದಲ ಹಂತದಲ್ಲಿ 6,100 ಮಂದಿ ಆಗಮಿಸುತ್ತಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಕ್ಕೆ ಇಳಿದ ತಕ್ಷಣ ಕ್ವಾರಂಟೈನ್ ಮುದ್ರೆ ಒತ್ತಲಾಗುವುದು. ಸ್ಥಳೀಯ ದೂರವಾಣಿ ಸಂಖ್ಯೆ ಸಿಮ್ ಕಾರ್ಡ್ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಮಾಸ್ಕ್, ಸ್ಯಾನಿಟೈಸರ್ ಖರೀದಿಗೆ ಅಂಗಡಿಗಳ ವ್ಯವಸ್ಥೆ ಮಾಡಲಾಗುತ್ತದೆ. ವಿಮಾನ ನಿಲ್ದಾಣದಿಂದ ಇಳಿದು ಕ್ವಾರಂಟೈನ್‍ ಗೆ ಹೋಗುವ ವೇಳೆಗೆ ಎಲ್ಲರ ಮೊಬೈಲ್‍ಗೂ ಆರೋಗ್ಯ ಸೇತು ಆ್ಯಪ್ ಡೌನ್ ಮಾಡಿಕೊಳ್ಳಲು ಸೂಚಿಸಲಾಗುತ್ತದೆ ಎಂದು ಹೇಳಿದರು. 

ಸೋಂಕಿನ ಲಕ್ಷಣಗಳು ಇರುವವರನ್ನು ‘ಎ-ವರ್ಗ' ಎಂದು ವಿಗಂಡಿಸಿ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು. ಸೋಂಕು ಲಕ್ಷಣಗಳಿಲ್ಲದ ಹಿರಿಯ ನಾಗರಿಕರು, ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದವರನ್ನು ಬಿ-ವರ್ಗವಾಗಿ, ಸೋಂಕು ಲಕ್ಷಣಗಳಿಲ್ಲದವರನ್ನು ಸಿ-ವರ್ಗವಾಗಿ ವಿಂಗಡಿಸಿ ಸರಕಾರದ ಕ್ವಾರೆಂಟೈನ್ ಗೆ ಒಳಪಡಿಸಲಾಗುವುದು. ಬಿ ವರ್ಗದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟೈನ್ ಉಳಿದ 14 ದಿನ ನಿಗಾ ಅವಧಿ, ಸಿ ವರ್ಗದವರಿಗೆ 14 ದಿನ ಹೋಂ ಕ್ವಾರಂಟೈನ್ ಹಾಗೂ 14 ದಿನ ನಿಗಾ ಅವಧಿ ಎಂದು ಸೂಚಿಸಲಾಗಿದೆ.

ಎಲ್ಲರನ್ನೂ ಮೊದಲ ದಿನ ಪರೀಕ್ಷೆಗೆ ಒಳಪಡಿಸಲಾಗುವುದು. ‘ಎ’ ವರ್ಗದವರಿಗೆ ಹಾಗೂ ಬಿ- ವರ್ಗದವರಿಗೆ ಮೊದಲ ದಿನ, 5 ರಿಂದ 7 ದಿನಗಳ ನಡುವೆ ಹಾಗೂ 12ನೇ ದಿನ ಸೇರಿ ಮೂರು ಪರೀಕ್ಷೆಗಳನ್ನು ನಡೆಸಬೇಕು. ಸಿ-ವರ್ಗದವರಿಗೆ ಮೊದಲ ದಿನ ಹಾಗೂ 5-7 ದಿನ ಸೇರಿ ಎರಡು ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು. 

ವಿದೇಶಗಳಿಂದ ಆಗಮಿಸಲಿರುವ ಒಟ್ಟು ಪ್ರಯಾಣಿಕರು: 10,823

ಪ್ರವಾಸಿಗರು ಮತ್ತು ಸಂದರ್ಶಕರು: 4,408

ವಿದ್ಯಾರ್ಥಿಗಳು: 3.074

ವಲಸಿಗರು ಮತ್ತು ವೃತ್ತಿಪರರು: 2,784

ಹಡಗು ಸಿಬ್ಬಂದಿ: 557

ಬೇಗನೆ ಮರಳಲು ಕಿರು-ಪಟ್ಟಿ ಮಾಡಿದವರು: 6,100

ಪ್ರಮುಖ ದೇಶಗಳಲ್ಲಿರುವ ಕನ್ನಡಿಗರು

ಕೆನಡಾ: 328

ಯುಎಸ್‍ಎ: 927

ಯುಎಇ: 2,575

ಕತರ್: 414

ಸೌದಿ ಅರೇಬಿಯ: 927

ಮೇ 9ಕ್ಕೆ ದುಬೈಯಿಂದ ಮೊದಲ ವಿಮಾನ?

ಯುಎಇ ಎನ್ ಆರ್ ಐ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಹಿತ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಜ್ಯ ಹಾಗು ಕೇಂದ್ರ ಸರಕಾರದ ಸಚಿವರನ್ನು ಸಂಪರ್ಕಿಸಿ ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರ ಸಂಕಷ್ಟಗಳ ಬಗ್ಗೆ ತಿಳಿಸಿದ್ದರು. ತೀವ್ರ ಸಂಕಷ್ಟದಲ್ಲಿರುವ ಮಹಿಳೆಯರು, ತುರ್ತು ಚಿಕಿತ್ಸೆಗೆ ಹೋಗಲು ಕಾಯುತ್ತಿರುವವರಿಗೆ ಯುಎಇಯಿಂದ ಕನಿಷ್ಠ ಒಂದು ವಿಮಾನವನ್ನು ಕರ್ನಾಟಕಕ್ಕೆ ಮೊದಲ ಪಟ್ಟಿಯಲ್ಲಿ ಕಳುಹಿಸಲೇಬೇಕಾದ ತುರ್ತು ಅವಶ್ಯಕತೆ ಇದೆ ಎಂದು ಸಂಘಟನೆಗಳು ತಿಳಿಸಿದವು. ಈ ಬಗ್ಗೆ ಪ್ರವೀಣ್ ಶೆಟ್ಟಿ ಅವರು ರಾಜ್ಯ ಸರಕಾರ, ಕೇಂದ್ರ ಸಚಿವರಾದ ಡಿ ವಿ ಸದಾನಂದ ಗೌಡ, ಸುರೇಶ ಅಂಗಡಿ , ಹಾಗು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಮತ್ತಿತರರನ್ನು ಸಂಪರ್ಕಿಸಿ ಮನವಿ ಮಾಡಿದರು. ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಮಂಗಳವಾರ ಸಂಜೆ ಯುಎಇಯಲ್ಲಿರುವ ಭಾರತದ ಕಾನ್ಸುಲ್ ಜನರಲ್ ವಿಪುಲ್ ಅವರು ಮೇ 9ಕ್ಕೆ ದುಬೈಯಿಂದ ಮೊದಲ ವಿಮಾನ ಕನ್ನಡಿಗರನ್ನು ಕರೆದುಕೊಂಡು ಮಂಗಳೂರಿಗೆ ಹೋಗಲಿದೆ ಎಂದು ಮಾಹಿತಿ ನೀಡಿದರು ಎಂದು ಪ್ರವೀಣ್ ಶೆಟ್ಟಿ ಹಾಗು ಅನಿವಾಸಿ ಕನ್ನಡಿಗರು ದುಬೈ ಅಧ್ಯಕ್ಷ ಮುಹಮ್ಮದ್ ನವೀದ್, ಅನಿವಾಸಿ ಕನ್ನಡಿಗರು ದುಬೈ ಉಪಾಧ್ಯಕ್ಷ ಸುನಿಲ್ ಅಂಬಲವಳಿಲ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಹಿದಾಯತ್ ಅಡ್ಡೂರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಆದರೆ ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಇನ್ನಷ್ಟೇ ಅಧಿಕೃತ ಪ್ರಕಟನೆ ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News