ಈ ರಾಜ್ಯದಲ್ಲಿ ಮದ್ಯದ ಮೇಲೆ ಶೇ.70ರಷ್ಟು ‘ಕೊರೋನ ಶುಲ್ಕ’

Update: 2020-05-05 16:37 GMT

ಹೊಸದಿಲ್ಲಿ: ದಿಲ್ಲಿಯಲ್ಲಿ ಇಂದಿನಿಂದಲೇ ಆರಂಭವಾಗುವಂತೆ ಮಾರಾಟವಾಗುವ ಮದ್ಯದ ಮೇಲೆ ಶೇಕಡ 70ರಷ್ಟು ವಿಶೇಷ ಕೊರೋನ ಶುಲ್ಕ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ 40 ದಿನಗಳ ಬಳಿಕ ರಾಜ್ಯದಲ್ಲಿ 150 ಸರ್ಕಾರಿ ಮದ್ಯದ ಅಂಗಡಿಗಳನ್ನು ತೆರೆಯಲಾಗಿತ್ತು.

ಇದಕ್ಕೂ ಮುನ್ನ ಮದ್ಯ ಮಾರಾಟ ಮಳಿಗೆಗಳಲ್ಲಿ ಸಾಮಾಜಿಕ ಅಂತರದ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳನ್ನು ಅಧಿಕಾರಿಗಳು ಮುಚ್ಚಿಸಿದ್ದರು. ಕೆಲವೆಡೆ ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು. ಮದ್ಯದ ಅಂಗಡಿಗಳ ಮುಂದೆ ಜನ ಜಮಾಯಿಸಿದ್ದನ್ನು ಗಮನಿಸಿದ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕ ವರದಿ ನೀಡಿ ನೂಕುನುಗ್ಗಲು ತಪ್ಪಿಸಲು ಮದ್ಯ ಮಾರಾಟ ಅವಧಿಯನ್ನು ವಿಸ್ತರಿಸಬೇಕು ಎಂದು ಸಲಹೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6.30ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು.

ದೆಹಲಿ ಸರ್ಕಾರಕ್ಕೆ ಮದ್ಯ ಮಾರಾಟದಿಂದ ವಾರ್ಷಿಕ 5000 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಮದ್ಯ ಮಾರಾಟ ಮಳಿಗೆಗಳಲ್ಲಿ ಸಾಕಷ್ಟು ಮಾರ್ಷಲ್‍ಗಳನ್ನು ನಿಯೋಜಿಸುವಂತೆ ಎಲ್ಲ ಮಳಿಗೆಗಳಿಗೆ ಸರ್ಕಾರ ಸೂಚನೆ ನೀಡಿದೆ.

ದೆಹಲಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಮಳಿಗೆಗಳು ಸೇರಿ 850ಕ್ಕೂ ಹೆಚ್ಚು ಮದ್ಯ ಮಾರಾಟ ಮಳಿಗೆಗಳಿವೆ. ಗೃಹ ಸಚಿವಾಲಯದ ಷರತ್ತನ್ನು ಪಾಲಿಸುವ ನಿಟ್ಟಿನಲ್ಲಿ ಖಾಸಗಿ ಮಳಿಗೆಗಳನ್ನು (ಎಲ್-7 ಲೈಸೆನ್ ಗಳು) ಪತ್ತೆ ಮಾಡುವಂತೆ ಅಬ್ಕಾರಿ ಇಲಾಖೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News