ಬಿಬಿಎಂಪಿ ವ್ಯಾಪ್ತಿ ಮಾಸ್ಕ್ ಧರಿಸದವರಿಗೆ ವಿಧಿಸುವ ದಂಡದ ಮೊತ್ತ ಇಳಿಕೆ

Update: 2020-05-05 18:08 GMT

ಬೆಂಗಳೂರು, ಮೇ 5: ಮಾಸ್ಕ್ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ಬಿಬಿಎಂಪಿ ಮಾಸ್ಕ್ ಹಾಕದವರಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು ಕಡಿಮೆ ಮಾಡಿದೆ.

ರಾಜ್ಯ ಸರಕಾರದಿಂದ ಸುಗ್ರೀವಾಜ್ಞೆ ಜಾರಿ ಮಾಡಲಾಗಿದ್ದು, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ದಂಡ ವಿಧಿಸುವ ಕುರಿತು ಎಚ್ಚರಿಕೆ ನೀಡಿದೆ. ಇದರಲ್ಲಿ ಮಾಸ್ಕ್ ಹಾಕದವರಿಗೆ ದಂಡ ಎಷ್ಟು ವಿಧಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಏನು ಕ್ರಮ ಜರುಗಿಸಬೇಕು ಎಂಬುದನ್ನೂ ತಿಳಿಸಲಾಗಿದೆ. ಸುಗ್ರೀವಾಜ್ಞೆಯಲ್ಲಿ ದಂಡದ ಪ್ರಮಾಣವನ್ನು ನಮೂದಿಸಿದ್ದು, ಅದರಂತೆ ಬಿಬಿಎಂಪಿ ಸಹ ಕಡಿಮೆ ಮಾಡಿದೆ.

ಸಿಲಿಕಾನ್ ಸಿಟಿಯಲ್ಲಿ ಮಾಸ್ಕ್ ಹಾಕದಿದ್ದರೆ ಈ ಹಿಂದೆ ಮೊದಲ ಬಾರಿ 1 ಸಾವಿರ ರೂ. ಹಾಗೂ ಎರಡನೇ ಬಾರಿ 2 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ಇದೀಗ ಈ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ರಾಜ್ಯ ಸರಕಾರದ ಸುಗ್ರೀವಾಜ್ಞೆಯ ನಿಯಮದ ಪ್ರಕಾರ ನಗರ ಪ್ರದೇಶದಲ್ಲಿ 200 ರೂ, ಗ್ರಾಮೀಣ ಭಾಗದಲ್ಲಿ 100 ರೂ. ನಿಗದಿಪಡಿಸಲಾಗಿದೆ. ಅದರಂತೆ ಬಿಬಿಎಂಪಿ 200 ರೂ.ದಂಡ ವಿಧಿಸಲು ತೀರ್ಮಾನಿಸಿದ್ದು, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ದಂಡದ ಮೊತ್ತವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರಕಾರದ ಸುಗ್ರೀವಾಜ್ಞೆಯ ಪ್ರಕಾರ ಕನಿಷ್ಟ 1 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ದಂಡ ಕಟ್ಟಬೇಕು. ದಂಡ ವಿಧಿಸುವ ಅಧಿಕಾರವನ್ನು ಸಬ್‍ಇನ್ಸ್‍ಪೆಕ್ಟರ್, ಆರೋಗ್ಯಾಧಿಕಾರಿ, ಪಿಡಿಒ ಹಾಗೂ ಸರಕಾರ ನೇಮಕ ಮಾಡುವ ಅಧಿಕಾರಿಗಳಿಗೆ ವಹಿಸಲಾಗಿದೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ದಂಡ ವಿಧಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಇದೀಗ ರಾಜ್ಯ ಸರಕಾರ ಸಹ ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿಗೆ ತಂದಿದೆ.

ಸಿಲಿಕಾನ್ ಸಿಟಿಯಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಿಬಿಎಂಪಿ ದಂಡ ವಿಧಿಸುವ ನಿರ್ಧಾರ ಕೈಗೊಂಡಿದ್ದು, ಶುಕ್ರವಾರದಿಂದಲೇ ಈ ನಿಯಮ ಜಾರಿಯಲ್ಲಿದೆ. ಸಾರ್ವಜನಿಕವಾಗಿ ಮಾಸ್ಕ್ ಹಾಕದಿದ್ದರೆ, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ ಮೂತ್ರ ವಿರ್ಸಜನೆ ಮಾಡಿದರೆ, ಮಾಸ್ಕ್ ವಿಲೇವಾರಿ ಸರಿಯಾಗಿ ಮಾಡದಿದ್ದರೆ ದಂಡ ಬೀಳುವುದು ಖಚಿತ. ಮುಲಾಜಿಲ್ಲದೆ ದಂಡ ವಿಧಿಸಲು ಬಿಬಿಎಂಪಿ ಕ್ರಮಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News