ಸಿಲಿಕಾನ್ ಸಿಟಿಯಲ್ಲಿ ಅಧಿಕವಾಗುತ್ತಿರುವ ಚರ್ಮರೋಗದ ಸಮಸ್ಯೆ: ಅಧ್ಯಯನ ವರದಿ

Update: 2020-05-09 18:06 GMT

ಬೆಂಗಳೂರು, ಮೇ 9: ರಾಜ್ಯದ ರಾಜಧಾನಿ, ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಮಾಲಿನ್ಯದ ಪ್ರಮಾಣ ಅಧಿಕವಾಗುತ್ತಿದ್ದು, ಚರ್ಮರೋಗದ ಸಮಸ್ಯೆಗಳು ಹೆಚ್ಚಳವಾಗುತ್ತಿರುವುದು ವರದಿಯೊಂದರಿಂದ ಬಯಲಾಗಿದೆ.

ಹೆಚ್ಚಿನ ಸಂಖ್ಯೆಯ ನಗರ ನಿವಾಸಿಗಳು ಚರ್ಮದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಅನಾರೋಗ್ಯದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಮತ್ತು ಇದು ಅನೇಕ ರೀತಿಯ ಚರ್ಮದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

ಮುಂಬಯಿ ನಿವಾಸಿಯಾಗಿದ್ದ ಕರಿಷ್ಮಾ ಮಲ್ಲನ್ ಎಂಬುವವರು ಬೆಂಗಳೂರಿನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಾಗ ತುಂಬಾ ಸಂತೋಷಪಟ್ಟಿದ್ದರು. 2019ರ ಜುಲೈನಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ ತಿಂಗಳೊಳಗಾಗಿ ಆಕೆಗೆ ಚರ್ಮದ ಅಲರ್ಜಿಯು ಉಲ್ಬಣಿಸಿತು. ವೈದ್ಯರನ್ನು ಕಂಡು ಸಲಹೆ ಪಡೆದಾಗ ಆಕೆಗೆ ಅಟೋಪಿಕ್ ಡರ್ಮಟೈಟಿಸ್ ಇದೆಯೆಂದು ಮತ್ತು ಇದು ಧೂಳು ಮತ್ತು ವಾಯುಮಾಲಿನ್ಯದಿಂದಾಗಿ ಉಂಟಾಗುತ್ತದೆ ಎಂಬುದನ್ನೂ ತಿಳಿಸಲಾಯಿತು.

ಕರಿಷ್ಮಾ ತನ್ನ ಕಚೇರಿಗೆ ಹೋಗಿಬರುವುದಕ್ಕಾಗಿ ದಿನದಲ್ಲಿ ಕೇವಲ ಅರ್ಧಗಂಟೆಯಷ್ಟೇ ಪ್ರಯಾಣದಲ್ಲಿರುತ್ತಾರೆ. ಆದರೂ ಆಕೆಯಲ್ಲಿ ಒಣಚರ್ಮ, ಸೀನು, ಉಸಿರಾಟದ ಸಮಸ್ಯೆಗಳು, ಶೀತ, ಕಣ್ಣಿನಲ್ಲಿ ತುರಿಕೆ, ಉಸಿರಾಟದ ಸಮಸ್ಯೆಗಳು ಕಾಡತೊಡಗಿದೆ. ಬೆಂಗಳೂರು ನಗರದಲ್ಲಿ ಮಾಲಿನ್ಯ ಹೆಚ್ಚುತ್ತಿರುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಅಧ್ಯಯನವೊಂದು ಹೇಳಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ ‘ಭಾರತದಲ್ಲಿ 10 ಕೋಟಿಗೂ ಅಧಿಕ ಅಲರ್ಜಿಕ್ ರಿನಿಟಿಸ್(ಇದರಿಂದ ಕಣ್ಣಿನಲ್ಲಿ ನೀರು ಬರುತ್ತಲೇ ಇರುವುದು, ಸೀನುವಿಕೆ ಮತ್ತು ಇತರ ರೋಗ ಲಕ್ಷಗಳನ್ನು ಹೊಂದಿರುತ್ತದೆ) ರೋಗಿಗಳಿದ್ದಾರೆ. ಬೆಂಗಳೂರಿನಲ್ಲಿ ಈ ರೋಗತಪಾಸಣೆ ನಡೆಸಿದವರಲ್ಲಿ 68% ರೋಗಿಗಳಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಹೆಚ್ಚುತ್ತಿರುವ ಧೂಳು ಮಾಲಿನ್ಯವೇ ಇದಕ್ಕಿರುವ ಸಾಮಾನ್ಯ ಹಾಗೂ ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನ ತಿಳಿಸಿದೆ.

ಬೆಂಗಳೂರು ಮೂಲದ ಚರ್ಮರೋಗ ವೈದ್ಯ ಡಾ. ಕೆ. ಶ್ರೀನಿವಾಸಮೂರ್ತಿ ಅವರ ನೀಡುವ ಮಾಹಿತಿ ಪ್ರಕಾರ ಅವರಲ್ಲಿಗೆ ಬರುವ ಹೆಚ್ಚಿನ ರೋಗಿಗಳಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣವೇ ವಾಯುಮಾಲಿನ್ಯ. 2010ರಲ್ಲಿ ಈಗಿರುವ ಅಂತಹ ರೋಗಿಗಳ ಸಂಖ್ಯೆಯ ಶೇ.20 ರಷ್ಟಿದ್ದರು ಎಂಬುದಾಗಿ ಹೇಳಿದ್ದಾರೆ.

ವಾಯುಮಾಲಿನ್ಯದಿಂದಾಗಿ ದೇಹದ ಮೇಲೆ ಕೆಂಪು ದದ್ದುಗಳು ಬೀಳುವ ಮೂಲಕ ಅಲರ್ಜಿ ಉಂಟಾಗುತ್ತದೆ. ಅಟೊಪಿಕ್ ಎಸ್ಜಿಮಾದಲ್ಲಂತೂ ಕಣ್ಣಿನರೆಪ್ಪೆ ಹಾಗೂ ಕುತ್ತಿಗೆಯ ಭಾಗದಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ಗಾಳಿಯಲ್ಲಿ ಹರಡುವ ಪರಾಗಗಳಿಂದಾಗಿ ‘ಕಂಟಾಕ್ಟ್ ಡರ್ಮಟೈಟಿಸ್’ಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಚರ್ಮವು ಕಪ್ಪಾಗುವುದು, ತುರಿಕೆ, ದದ್ದುಂಟಾಗುವುದು ಹಾಗೂ ಕಣ್ಣಿನಲ್ಲಿ ನೀರು ಬರುವುದು ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಇಂಡಿಯನ್ ಇಸ್ಟಿಟ್ಯೂಟ್‍ನ ಪ್ರಾಧ್ಯಾಪಕ ಡಾ. ಹೆಚ್.ಪರಮೇಶ್ ಅವರ ಅಧ್ಯಯನ ಪ್ರಕಾರ `ಅಸ್ತಮಾ ರೋಗಿಗಳಲ್ಲಿ ಅಲರ್ಜಿಕ್‍ರಿನಿಟಿಸ್ ಸಂಭಾವ್ಯತೆಯು ಬೆಂಗಳೂರಿನ ಮಟ್ಟಿಗೆ 1999ರಲ್ಲಿ 75% ಇದ್ದಿದ್ದು, 2011ರಲ್ಲಿ ಅದು 99.6% ತಲುಪಿದೆ. ಜೊತೆಗೆ ಒಟಿಟಿಸ್ ಮೀಡಿಯಾ ಅಲರ್ಜಿಕ್‍ ರಿನಿಟಿಸ್(ಕಿವಿಯ ಸುತ್ತಲಿನ ಭಾಗದಲ್ಲಿ ಉಂಟಾಗುವ ಸೋಂಕು), ಸಿನುಸಿಟಿಸಿ ಅಲರ್ಜಿಕ್‍ರಿನಿಟಿಸ್(ಮೂಗಿನ ಸುತ್ತಲೂ ಹಬ್ಬುವ ಉಬ್ಬುವಿಕೆ), ಕರಕ್ಟಿವೀಸ್‍ಅಲರ್ಜಿಕ್‍ರಿನಿಟಿಸ್ (ಕಣ್ಣುಗುಡ್ಡೆಯ ಹೊರಪೊರೆ ಮತ್ತು ಒಳಕಣ್ಣುರೆಪ್ಪೆ ಉರಿಯೂತ) ಇವುಗಳು ಕೂಡಾ 22.5%, 34.8% ಮತ್ತು 27.5% ಕ್ರಮವಾಗಿ ದಾಖಲಾಗಿವೆ ಎಂದು 2011ರ ಅಧ್ಯಯನ ವರದಿ ಹೇಳುತ್ತಿದೆ ಎಂದು ತಿಳಿಸಿದ್ದಾರೆ.

ಅಲರ್ಜಿಗಳು ಕೇವಲ ಚರ್ಮವನ್ನಷ್ಟೇ ಬಾಧಿಸದೇ ಕಣ್ಣಿನಲ್ಲಿ ತುರಿಕೆ, ಕಫ, ಉಬ್ಬಸ ಮತ್ತು ಗೊರಕೆಗೂ ಕಾರಣವಾಗುತ್ತದೆ. ಮಕ್ಕಳು ಬಹುಬೇಗನೆ ಈ ಸೋಂಕುಗಳಿಗೆ ತುತ್ತಾಗುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ. ಅಲ್ಲದೆ, ನೇರಳಾತೀತ ವಿಕಿರಣ, ಕೆಲವು ಹೈಡ್ರೋಕಾರ್ಬನ್‍ಗಳು, ಸಾವಯವ ಸಂಯುಕ್ತಗಳು, ಓಝೋನ್, ಸಂಯುಕ್ತ ಸೂಕ್ಷ್ಮ ಕಣಗಳು ಹಾಗೂ ಧೂಮಪಾನದ ಹೊಗೆಯು ಚರ್ಮದ ಹೊರಪದರವನ್ನು ಬಾಧಿಸುತ್ತದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News