ವಲಸೆ ಕಾರ್ಮಿಕರಿಗೆ ಕೊಳೆತ ಅಕ್ಕಿ ವಿತರಿಸಿದ ಕೊಳೆತ ಮನಸ್ಸುಗಳು

Update: 2020-05-14 19:38 GMT

‘ಕೊಳೆತು ಹೋದರೂ, ಕೊಟ್ಟು ಹೋಗದು’ ಎನ್ನುವ ಗಾದೆಯೊಂದು ಕರಾವಳಿ ಪ್ರದೇಶದಲ್ಲಿದೆ. ಅಂದರೆ, ಜೀವನಾವಶ್ಯಕ ವಸ್ತುಗಳು ನಮ್ಮಲ್ಲಿ ಕೊಳೆಯುತ್ತಾ ಬಿದ್ದಿದ್ದರೂ ಅವನ್ನು ಅಗತ್ಯವಿರುವ ಇನ್ನೊಬ್ಬರಿಗೆ ಕೊಡದೇ ಇರುವ ಮನಸ್ಥಿತಿಯನ್ನು ವ್ಯಂಗ್ಯ ಮಾಡುವ ಗಾದೆಯಿದು. ಆದರೆ, ದಕ್ಷಿಣ ಕನ್ನಡದ ಜಿಲ್ಲಾಡಳಿತ ಈ ಮಟ್ಟಿಗೆ ಒಂದಿಷ್ಟು ಮಾನವೀಯತೆಯನ್ನು ಪ್ರದರ್ಶಿಸಿ ಗಾದೆಯನ್ನು ಸುಳ್ಳಾಗಿಸಿದೆ. ‘ಗೋದಾಮಿನಲ್ಲಿ ದಾಸ್ತಾನಿದ್ದ ಅಕ್ಕಿಯನ್ನು ಕೊಳೆತು ಹೋದ ಬಳಿಕ, ವಲಸೆ ಕಾರ್ಮಿಕರಿಗೆ ಹಂಚಿ’ ಕೊರೋನದಲ್ಲಿ ಕಂಗೆಟ್ಟ ಕಾರ್ಮಿಕರ ಹಸಿವನ್ನು ‘ಶಾಶ್ವತ’ವಾಗಿ ಇಲ್ಲವಾಗಿಸಲು ಹೊರಟಿತು. ಈಗಾಗಲೇ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ವಲಸೆ ಕಾರ್ಮಿಕರು ನಿರುದ್ಯೋಗ, ಹಸಿವಿನಿಂದ ತತ್ತರಿಸಿ ಕೂತಿದ್ದಾರೆ. ಮಂಗಳೂರಿನ ನಗರವೂ ಇದಕ್ಕೆ ಹೊರತಲ್ಲ. ಬೃಹತ್ ಉದ್ಯಮಗಳು ಮಂಗಳೂರಿಗೆ ಕಾಲಿಟ್ಟಿರುವ ಕಾರಣದಿಂದ ಈ ನಗರವನ್ನು ಸಾವಿರಾರು ವಲಸೆ ಕಾರ್ಮಿಕರು ಆಶ್ರಯಿಸಿದ್ದರು. ಇಲ್ಲಿನ ಜೋಕಟ್ಟೆ ವ್ಯಾಪ್ತಿಯ ಎಂಆರ್‌ಪಿಎಲ್, ಎಸ್‌ಇಝೆಡ್ ಕಾಮಗಾರಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ಬಿಹಾರದಿಂದ ಭಾರೀ ಸಂಖ್ಯೆಯ ಕಾರ್ಮಿಕರು ವಲಸೆ ಬಂದು, ಈ ನಗರದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದರು. ಲಾಕ್‌ಡೌನ್ ಘೋಷಣೆಯಾದ ದಿನದಿಂದ ನೂರಾರು ಕಾರ್ಮಿಕರು ತಮ್ಮ ತಮ್ಮ ಊರಿಗೆ ಹೋಗಲು ಹತ್ತು ಹಲವು ವಿಫಲ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದ್ದುದರಲ್ಲಿ ಉತ್ತರ ಕರ್ನಾಟಕದಿಂದ ಬಂದ ಕೆಲವು ಕಾರ್ಮಿಕರು ವಿವಿಧ ವಾಹನಗಳನ್ನು ಬಳಸಿ ಅಥವಾ ಕಾಲ್ನಡಿಗೆಯಿಂದ ತಮ್ಮ ಊರುಗಳನ್ನು ತಲುಪಿದ್ದಾರೆ. ಆದರೆ ಉತ್ತರ ಭಾರತದ ಕಾರ್ಮಿಕರು ಮಾತ್ರ ಯಾವುದೇ ನೆರವುಗಳು ಒದಗದೇ ಇರುವ ಕಾರಣದಿಂದ ಜೋಕಟ್ಟೆ ಪ್ರದೇಶದಲ್ಲೇ ಬೀಡು ಬಿಟ್ಟಿದ್ದಾರೆ. ಬೃಹತ್ ಕಂಪೆನಿಗಳೂ ಇವರನ್ನು ಸಂಪೂರ್ಣ ಕೈ ಬಿಟ್ಟಿವೆ. ಇಂತಹ ಸಂದರ್ಭದಲ್ಲಿ ಇವರಿಗೆ ನೆರವಾಗ ಬೇಕಾದ ಹೊಣೆಗಾರಿಕೆ ಕಾರ್ಮಿಕ ಇಲಾಖೆಯದು. ಕನಿಷ್ಠ ಅನ್ನವನ್ನಾದರೂ ಬೇಯಿಸಿ ಉಣ್ಣುವಂತಾಗಲು ಅವರಿಗೆ ಅಕ್ಕಿ ಮತ್ತು ಇತರ ಪದಾರ್ಥಗಳನ್ನು ಇಲಾಖೆ ಪೂರೈಸಬೇಕಾಗಿತ್ತು. ದುರಂತವೆಂದರೆ, ಇಂದು ಇಲಾಖೆ ಅಕ್ಕಿ ಪೂರೈಸಿದ ಕಾರಣಕ್ಕಾಗಿಯೇ ವಿವಾದದ ಕೇಂದ್ರ ಬಿಂದುವಾಗಿದೆ.

ತಕ್ಷಣದ ನೆರವಿನ ರೂಪದಲ್ಲಿ ಇಲಾಖೆಯು 10 ಕೆಜಿಯ 100 ಚೀಲ ಅಕ್ಕಿಯನ್ನು ಈ ಕಾರ್ಮಿಕರಿಗೆ ವಿತರಿಸಿದೆ. ಅಂದರೆ ಸುಮಾರು 10 ಕ್ವಿಂಟಾಲ್ ಅಕ್ಕಿಯನ್ನು ಅದು ವಿವಿಧ ಕಾರ್ಮಿಕರಿಗೆ ಒದಗಿಸಿದೆ. ಆದರೆ ಈ ಅಕ್ಕಿ ಕೊಳೆತು ಹುಳ ಹಿಡಿದು ದುರ್ವಾಸನೆ ಬೀರುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಡಳಿತ ಈ ಆರೋಪವನ್ನು ನಿರಾಕರಿಸಿದೆಯಾದರೂ, ಸ್ಥಳೀಯರು ಕೊಳೆತ ಅಕ್ಕಿಯನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ್ದಾರೆ. ಈ ಅಕ್ಕಿಯನ್ನು ಮನುಷ್ಯರು ಬಿಡಿ ಪ್ರಾಣಿಗಳೂ ತಿನ್ನುವುದಕ್ಕೆ ಅಸಾಧ್ಯ ಎನ್ನುವ ರೀತಿಯಲ್ಲಿದೆ. ಇಂತಹ ಅಕ್ಕಿಯನ್ನು ವಲಸೆ ಕಾರ್ಮಿಕರಿಗೆ ವಿತರಿಸಿದ ಅಧಿಕಾರಿಗಳು, ಆ ಮೂಲಕ ವಲಸೆ ಕಾರ್ಮಿಕರನ್ನು ಪ್ರಾಣಿಗಳಿಗಿಂತ ಕೀಳಾಗಿ ಕಂಡಿದ್ದಾರೆ. ಒಂದು ವೇಳೆ, ಹಸಿವಿನ ಕಾರಣದಿಂದ ಅನಿವಾರ್ಯವಾಗಿ ಈ ಅಕ್ಕಿಯನ್ನು ಅವರೇನಾದರೂ ಬೇಯಿಸಿ ತಿಂದಿದ್ದರೆ ನೂರಾರು ಕಾರ್ಮಿಕರು ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು. ಆ ಮೂಲಕ ಅವರ ಹಸಿವನ್ನು ‘ಶಾಶ್ವತವಾಗಿ ಇಲ್ಲವಾಗಿಸಿದ’ ಹೆಗ್ಗಳಿಕೆ ಕಾರ್ಮಿಕ ಇಲಾಖೆಯದಾಗಿರುತ್ತಿತ್ತು. ಅಷ್ಟೇ ಅಲ್ಲ, ಜಿಲ್ಲಾಡಳಿತದ ಗೋದಾಮಿನಲ್ಲಿ ಹೀಗೆ ಎಷ್ಟು ಟನ್ ಅಕ್ಕಿ ಕೊಳೆತು ಹೋಗಿವೆ ಎನ್ನುವ ಪ್ರಶ್ನೆ, ಈ ಹಸಿವಿನ ಕಾಲದಲ್ಲಿ ಮುನ್ನೆಲೆಗೆ ಬಂದಿದೆೆ. ಕೊಳೆತು ಹೋಗುವ ಮೊದಲೇ ಸರಕಾರ ಅದನ್ನು ಅರ್ಹ ಜನರಿಗೆ ತಲುಪಿಸಿದ್ದಿದ್ದರೆ ಆ ಅಕ್ಕಿಯ ಸದುಪಯೋಗವಾಗುತ್ತಿತ್ತು. ಅದನ್ನು ಬೆಳೆದ ರೈತರ ಶ್ರಮಕ್ಕೂ ಗೌರವ ಸಿಕ್ಕಂತಾಗುತ್ತಿತ್ತು. ಆದರೆ ಬಡವರ ಕಷ್ಟಕ್ಕೆ ಒದಗಬೇಕಾದ ಅಕ್ಕಿಯನ್ನು ಕೊಳೆಸಿದ ಆರೋಪ ಮಾತ್ರವಲ್ಲ, ಆ ಕೊಳೆತ ಅಕ್ಕಿಯನ್ನು ಕಾರ್ಮಿಕರಿಗೆ ಕೊಟ್ಟು ಅವರ ಬದುಕಿನ ಜೊತೆಗೆ ಚೆಲ್ಲಾಟವಾಡಿದ ಆಪಾದನೆಯನ್ನೂ ಇಲಾಖೆ ಎದುರಿಸುತ್ತಿದೆ. ಆರೋಪವನ್ನು ನಿರಾಕರಿಸುವುದರೊಂದಿಗೆ ಜಿಲ್ಲಾಡಳಿತದ ಹೊಣೆಗಾರಿಕೆ ಮುಗಿಯುವುದಿಲ್ಲ. ಈ ಬಗ್ಗೆ ಗಂಭೀರ ತನಿಖೆಯೊಂದು ನಡೆಯಬೇಕಾಗಿದೆ. ಈ ಕೊಳೆತ ಧಾನ್ಯಗಳನ್ನು ಜನರಿಗೆ ವಿತರಿಸಿರುವ ಆರೋಪ ನಿಜವೇ ಆಗಿದ್ದರೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ, ಈ ಕೊಳೆತ ಅಕ್ಕಿ ಭಾರೀ ದುರಂತವೊಂದಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ಇದೇ ಸಂದರ್ಭದಲ್ಲಿ, ಗೋದಾಮಿನಲ್ಲಿರುವ ಗುಣಮಟ್ಟದ ಅಕ್ಕಿಯನ್ನು ಅನಗತ್ಯವಾಗಿ ಕೊಳೆಸದೇ, ಅದನ್ನು ಈ ಸಂದರ್ಭದಲ್ಲಿ ಅರ್ಹ ಕಾರ್ಮಿಕರಿಗೆ ತಲುಪಿಸುವ ಕೆಲಸವೂ ನಡೆಯಬೇಕಾಗಿದೆ.

ಈ ಘಟನೆ ಮಂಗಳೂರಿಗಷ್ಟೇ ಸೀಮಿತವಲ್ಲ ಎನ್ನುವುದನ್ನು ನಾವು ಗಮನಿಸಬೇಕು. ದೇಶದ ಲಕ್ಷಾಂತರ ಬಡವರು ಲಾಕ್‌ಡೌನ್ ಕಾರಣದಿಂದ ತತ್ತರಿಸಿ ಕೂತಿರುವಾಗ ಕೇಂದ್ರ ಸರಕಾರ, ‘ಗೋದಾಮಿನಲ್ಲಿರುವ ಹೆಚ್ಚುವರಿ ಧಾನ್ಯಗಳನ್ನು’ ಸ್ಯಾನಿಟೈಸರ್ ಉತ್ಪಾದನೆಗೆ ಬಳಸುವುದಾಗಿ ಘೋಷಿಸಿತು. ದೇಶದ ಆಹಾರ ಸಚಿವರಂತೂ ‘‘ಬಡವರಿಗಾಗಿ ಸ್ಯಾನಿಟೈಸರ್ ಉತ್ಪಾದಿಸುವುದು ಬೇಡವೇ?’’ ಎಂದು ಟೀಕಾಕಾರರನ್ನು ಪ್ರಶ್ನಿಸಿದರು. ಒಂದು ಹೊತ್ತು ಊಟಕ್ಕೂ ತತ್ತರಿಸುತ್ತಿರುವ ಬಡವರು ಸ್ಯಾನಿಟೈಸರ್‌ಗಾಗಿ ಕಾಯುತ್ತಿದ್ದಾರೆ ಎಂದು ತಿಳಿದುಕೊಂಡಿರುವ ಸರಕಾರದಿಂದ ಕೊರೋನ ಮತ್ತು ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರವನ್ನು ನಿರೀಕ್ಷಿಸಲು ಸಾಧ್ಯವೇ? ದೇಶದ ಗೋದಾಮುಗಳಲ್ಲಿ ಇರುವ ಹೆಚ್ಚುವರಿ ಧಾನ್ಯಗಳನ್ನು ಶ್ರೀಮಂತರಿಗಾಗಿ ಸ್ಯಾನಿಟೈಸರ್ ತಯಾರು ಮಾಡಲು ಯಾವ ಸಮಸ್ಯೆಯೂ ಸರಕಾರಕ್ಕಿಲ್ಲ. ಆದರೆ ಅವುಗಳನ್ನು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಬಡವರಿಗೆ ಉಚಿತವಾಗಿ ವಿತರಿಸುವ ಸಂದರ್ಭದಲ್ಲಷ್ಟೇ ಸಮಸ್ಯೆ ಎದುರಾಗುತ್ತದೆ. ಅತ್ಯಂತ ದುರಂತದ ಅಂಶವೆಂದರೆ, ಪ್ರತಿ ವರ್ಷ ಈ ದೇಶದಲ್ಲಿ ಹಲವು ಲಕ್ಷ ಟನ್ ಧಾನ್ಯಗಳು ಗೋದಾಮಿನಲ್ಲಿ ಕೊಳೆತು ಹೋಗುತ್ತವೆ. ಸೂಕ್ತ ಗೋದಾಮಿನ ಕೊರತೆ, ಪ್ರಕೃತಿ ವಿಕೋಪ, ಆಧುನಿಕ ಗೋದಾಮುಗಳಿಲ್ಲದಿರುವುದು, ದಾಸ್ತಾನಿನ ಹೆಚ್ಚಳ ಇವೆಲ್ಲವೂ ಧಾನ್ಯಗಳು ಕೊಳೆಯುವುದಕ್ಕೆ ಕಾರಣ ಎಂದು ಸರಕಾರಿ ಮೂಲಗಳು ಹೇಳುತ್ತವೆ.

2019ರ ಅಂಕಿ ಅಂಶವೊಂದರ ಪ್ರಕಾರ 4,000 ಟನ್ನಿಗೂ ಅಧಿಕ ಧಾನ್ಯಗಳು ಪೋಲಾಗುತ್ತಿವೆ ಅಥವಾ ಕೊಳೆತು ಹಾಳಾಗುತ್ತಿವೆ. ಇದರಲ್ಲಿ ಅಕ್ಕಿ 2,831 ಟನ್ ಪೋಲಾದರೆ, ಗೋಧಿ 1,303 ಟನ್ ಪೋಲಾಗುತ್ತಿವೆ ಎಂದು ಸರಕಾರಿ ಅಂಕಿ ಅಂಶಗಳು ಹೇಳುತ್ತವೆ. ಈ ಪೋಲಾಗುತ್ತಿರುವ ಅಕ್ಕಿಯನ್ನು ಸರಕಾರ ಸದ್ಬಳಕೆ ಮಾಡಿದರೂ, ದೇಶದ ಶೇ. 50ರಷ್ಟು ಬಡವರ ಹಸಿವನ್ನು ತಣಿಸಬಹುದು. ಆದರೆ, ‘ಬಡವರಿಗೆ ಪುಕ್ಕಟೆ ಅಕ್ಕಿ ವಿತರಿಸಿದರೆ ಅವರು ಸೋಮಾರಿಗಳಾಗುತ್ತಾರೆ’ ಎನ್ನುವ ಮನಸ್ಥಿತಿಯನ್ನು ಹೊಂದಿದ ಜನರಿರುವ ದೇಶದಲ್ಲಿ , ಬಡವರ ಹಸಿವನ್ನು ತಣಿಸುವುದೇ ಅಪರಾಧವಾಗಿದೆ. ಆದುದರಿಂದಲೇ, ಒಂದು ರೂಪಾಯಿಗೆ ಅಕ್ಕಿ ವಿತರಿಸುವಾಗ ಏಳುವ ಆಕ್ಷೇಪ, ಅದೇ ಅಕ್ಕಿಯನ್ನು ಸ್ಯಾನಿಟೈಸರ್ ತಯಾರಿಗೆ ಬಳಸುವುದಕ್ಕೆ ಹೊರಟಾಗ ಇರುವುದಿಲ್ಲ. ಅಥವಾ ಅಕ್ಕಿ ಕೊಳೆತು ನಾಶವಾದರೂ ಅದು ಜನರಿಗೆ ಅಪರಾಧವಾಗಿ ಕಾಣುವುದಿಲ್ಲ. ಇಂತಹ ಮನಸ್ಥಿತಿಯನ್ನು ಹೊಂದಿರುವ ಅಧಿಕಾರಿಗಳೇ ಮಂಗಳೂರಿನಲ್ಲಿ ಕೊಳೆತು ಹೋಗಿರುವ ಅಕ್ಕಿಯನ್ನು ವಲಸೆ ಕಾರ್ಮಿಕರಿಗೆ ವಿತರಿಸಿ ತಮ್ಮ ಕೊಳೆತು ಹೋದ ಮನಸ್ಸನ್ನು ಸಾರ್ವಜನಿಕರಿಗೆ ಪ್ರದರ್ಶಿಸಿದ್ದಾರೆ. ಆ ಮೂಲಕ ಆಹಾರದ ಘನತೆಯನ್ನು, ಮನುಷ್ಯನ ಹಸಿವನ್ನು ಅವಮಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News