ಚುನಾವಣಾ ಬಾಂಡ್‌ಗಳ ಮುದ್ರಣ ವೆಚ್ಚ ಭರಿಸುತ್ತಿರುವುದು ತೆರಿಗೆದಾರರು ಹೊರತು ಪಕ್ಷಗಳಲ್ಲ!

Update: 2020-05-14 18:18 GMT

ಹೊಸದಿಲ್ಲಿ,ಮೇ 14: ದೇಶಾದ್ಯಂತ ಸಮಾಜದ ವಿವಿಧ ವರ್ಗಗಳು ಚುನಾವಣಾ ಬಾಂಡ್ ಯೋಜನೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನೆತ್ತಿವೆ. ಯೋಜನೆಯ ಶಾಸನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸರ್ವೋಚ್ಚ ನ್ಯಾಯಾಲಯದಲ್ಲಿ ಈಗಲೂ ಬಾಕಿಯಿದೆ. ಹೀಗಿದ್ದರೂ ನರೇಂದ್ರ ಮೋದಿ ಸರಕಾರವು ಯೋಜನೆಯನ್ನು ಮುಂದೊತ್ತುತ್ತಲೇ ಇದೆ.

ಈವರೆಗೆ 19,000 ಕೋ.ರೂ.ವೌಲ್ಯದ ಚುನಾವಣಾ ಬಾಂಡ್‌ಗಳನ್ನು ಮುದ್ರಿಸಲಾಗಿದ್ದು, ಈ ಪೈಕಿ 6,200 ಕೋ.ರೂ.ಗೂ ಅಧಿಕ ಮೌಲ್ಯದ ಬಾಂಡ್‌ಗಳನ್ನು ಒಟ್ಟು 13 ಹಂತಗಳಲ್ಲಿ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕಮೊಡೋರ್(ನಿವೃತ್ತ) ಲೋಕೇಶ ಬಾತ್ರಾ ಅವರು ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತಿಳಿಸಿದೆ. ಚುನಾವಣಾ ಬಾಂಡ್‌ಗಳ ಮುದ್ರಣ ವೆಚ್ಚವನ್ನು ಖರೀದಿದಾರ ಭರಿಸುತ್ತಿಲ್ಲ ಮತ್ತು ಸರಕಾರವೇ ಅದನ್ನು ಭರಿಸುತ್ತಿದೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ. ಅಂದರೆ ಮುದ್ರಣ ವೆಚ್ಚವನ್ನು ತೆರಿಗೆದಾರರು ಪರೋಕ್ಷವಾಗಿ ಭರಿಸುತ್ತಿದ್ದಾರೆ!

ಒಂದು ಚುನಾವಣಾ ಬಾಂಡ್ ಮುದ್ರಣಕ್ಕೆ 25 ರೂ.ವೆಚ್ಚವಾಗುತ್ತಿದ್ದು ಹೆಚ್ಚುವರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶೇ.6ರಷ್ಟು ಜಿಎಸ್‌ಟಿಯನ್ನು ವಿಧಿಸುತ್ತಿವೆ.

ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಅಧಿಕಾರವನ್ನು ಪಡೆದಿರುವ ಏಕೈಕ ಬ್ಯಾಂಕ್ ಆಗಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ವ್ಯಕ್ತಿಗಳು ಮತ್ತು ಸಂಸ್ಥೆಗಳು ಈ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ಸಂಬಂಧಿತ ಪಕ್ಷಗಳು ಬ್ಯಾಂಕ್‌ನಲ್ಲಿಯ ಧೃಢೀಕೃತ ಖಾತೆಯ ಮೂಲಕ ಈ ಬಾಂಡ್‌ಗಳನ್ನು ನಗದೀಕರಿಸಬಹುದು. ಈ ಒಟ್ಟಾರೆ ಪ್ರಕ್ರಿಯೆಗೆ ಎಸ್‌ಬಿಐ ಕಮಿಷನ್ ಅನ್ನು ಪಡೆಯುತ್ತದೆ ಮತ್ತು ಇದನ್ನೂ ತೆರಿಗೆದಾತರ ಹಣದಿಂದಲೇ ಪಾವತಿಸಲಾಗುತ್ತದೆ.

2018ರಲ್ಲಿ ಒಟ್ಟು 7,131.50 ಕೋ.ರೂ.ಮೌಲ್ಯದ 6,04,250 ಬಾಂಡ್‌ಗಳನ್ನು ಮತ್ತು 2019ರಲ್ಲಿ ಒಟ್ಟು 11,400 ಕೋ.ರೂ.ವೌಲ್ಯದ 60,000 ಬಾಂಡ್‌ಗಳನ್ನು ಮುದ್ರಿಸಲಾಗಿತ್ತು ಎಂದು ಎಸ್‌ಬಿಐ ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ.

ನಾಶಿಕ್‌ನಲ್ಲಿರುವ ಇಂಡಿಯನ್ ಸೆಕ್ಯುರಿಟಿ ಪ್ರೆಸ್ (ಐಎಸ್‌ಪಿ)ನಲ್ಲಿ ಈ ಚುನಾವಣಾ ಬಾಂಡ್‌ಗಳನ್ನು ಮುದ್ರಿಸಲಾಗುತ್ತದೆ. ಈ ಬಾಂಡ್‌ಗಳು 1,000 ರೂ.,10,000 ರೂ.,ಒಂದು ಲ.ರೂ.,10 ಲ.ರೂ. ಮತ್ತು ಒಂದು ಕೋ.ರೂ ಮುಖಬೆಲೆಗಳಲ್ಲಿವೆ. 1.86 ಕೋ.ರೂ.ವೆಚ್ಚದಲ್ಲಿ ಒಟ್ಟು 6,64,250 ಬಾಂಡ್‌ಗಳನ್ನು ಮುದ್ರಿಸಲಾಗಿತ್ತು. ಕೇಂದ್ರ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ಮುದ್ರಣ ವೆಚ್ಚವನ್ನು,ಅಂದರೆ ತೆರಿಗೆದಾರರ ಹಣವನ್ನು ಐಎಸ್‌ಪಿಗೆ ಪಾವತಿಸುತ್ತದೆ. ಬಾಂಡ್‌ಗಳ ಮುದ್ರಣ ವೆಚ್ಚವನ್ನು ಖರೀದಿದಾರ ಅಥವಾ ರಾಜಕೀಯ ಪಕ್ಷಗಳಿಂದ ವಸೂಲು ಮಾಡಲಾಗುತ್ತಿಲ್ಲ ಎನ್ನುವುದು ಅಚ್ಚರಿದಾಯಕವಾಗಿದೆ.

ಈವರೆಗಿನ 13 ಸುತ್ತುಗಳ ಮಾರಾಟದಲ್ಲಿ 6,64,250 ಮುದ್ರಿತ ಬಾಂಡ್‌ಗಳ ಪೈಕಿ ಒಟ್ಟು 6210.40 ಕೋ.ರೂ.ಮೌಲ್ಯದ 12,452 ಬಾಂಡ್‌ಗಳನ್ನು ಬಿಕರಿ ಮಾಡಲಾಗಿದೆ. ಕುತೂಹಲದ ವಿಷಯವೆಂದರೆ ಈ ಮೊತ್ತದಲ್ಲಿ ಶೇ.91.81ರಷ್ಟು ಸಿಂಹಪಾಲು ಗರಿಷ್ಠ ಮುಖಬೆಲೆಯಾದ ಒಂದು ಕೋ.ರೂ.ಬಾಂಡ್‌ನಿಂದಲೇ ಬಂದಿದೆ. ಉಳಿದ ಶೇ.7.91ರಷ್ಟು ಮೊತ್ತ 10 ಲ.ರೂ.ವರೆಗಿನ ಮೌಲ್ಯದ ಬಾಂಡ್‌ಗಳ ಮಾರಾಟದಿಂದ ಬಂದಿದೆ. 10,000 ರೂ. ಮತ್ತು 1,000 ರೂ.ವೌಲ್ಯದ ಬಾಂಡ್‌ಗಳ ಮಾರಾಟ ನಡೆದೇ ಇಲ್ಲವೆನ್ನುವಷ್ಟು ನಗಣ್ಯವಾಗಿದೆ.

ಕಡಿಮೆ ಮುಖಬೆಲೆಯ ಬಾಂಡ್‌ಗಳ ಮುದ್ರಣ ತೆರಿಗೆದಾರರ ಮೇಲೆ ಅನಗತ್ಯ ಹೊರೆಯಾಗಿದೆ ಎನ್ನುವುದನ್ನು ಇದು ಬೆಟ್ಟು ಮಾಡಿದೆ. ಹೀಗಿರುವಾಗ 1,000 ರೂ. ಮತ್ತು 10,000 ರೂ.ಮೌಲ್ಯದ ಬಾಂಡ್‌ಗಳ ಮುದ್ರಣವನ್ನು ಮುಂದುವರಿಸುವ ಕೇಂದ್ರದ ನಡೆಗೆ ತೆರಿಗೆದಾರರ ಹಣವನ್ನು ಪೋಲು ಮಾಡುವುದು ಬಿಟ್ಟರೆ ಬೇರೆ ಅರ್ಥವಿಲ್ಲ. ಕಡಿಮೆ ಮುಖಬೆಲೆಯ ಬಾಂಡ್‌ಗಳ ಮುದ್ರಣ ಬಿಜೆಪಿಯ ಪರಿಕಲ್ಪನೆಯಾಗಿತ್ತು. ಇದರ ಮೂಲಕ ಸಮಾಜದ ಎಲ್ಲ ವರ್ಗಗಳ ಜನರು ರಾಜಕೀಯ ಪಕ್ಷಗಳಿಗೆ ದೇಣಿಗೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅದು ಭಾವಿಸಿತ್ತು.

13 ಸುತ್ತುಗಳಲ್ಲಿ ಬಾಂಡ್ ಮಾರಾಟಕ್ಕಾಗಿ 3.48 ಕೋ.ರೂ.ಗಳ ಬಿಲ್ ಅನ್ನು ಎಸ್‌ಬಿಐ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಈ ಪೈಕಿ 77.44 ಲ.ರೂ.ಗಳನ್ನು ಕೇಂದ್ರವು ಈವರೆಗೆ ಎಸ್‌ಬಿಐಗೆ ಪಾವತಿಸಿದೆ. ಶೇ.18 ಜಿಎಸ್‌ಟಿಯೊಂದಿಗೆ 2.70 ಕೋ.ರೂ.ಗಳ ಬಾಕಿ ಮೊತ್ತವನ್ನು ಪಾವತಿಸುವಂತೆ ಎಸ್‌ಬಿಐ ಈಗ ಕೇಂದ್ರಕ್ಕೆ ಸೂಚಿಸಿದೆ.

ಚುನಾವಣಾ ಬಾಂಡ್ ಯೋಜನೆಯು ಜಾರಿಗೊಂಡ ಬಳಿಕ ಚೆಕ್ ಇತ್ಯಾದಿಗಳ ರೂಪದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಗೆ ದೇಣಿಗೆಯಲ್ಲಿ ತೀವ್ರ ಇಳಿಕೆಯಾಗಿದೆ ಮತ್ತು ಬಾಂಡ್‌ಗಳ ಮೂಲಕ ದೇಣಿಗೆಗಳಲ್ಲಿ ತೀವ್ರ ಏರಿಕೆಯಾಗಿದೆ. 2018-19ನೇ ಸಾಲಿನಲ್ಲಿ 1,450 ಕೋ.ರೂ.ಅಂದರೆ ಒಟ್ಟು ದೇಣಿಗೆಗಳ ಶೇ.60ರಷ್ಟು ಭಾಗ ಬಿಜೆಪಿಯ ಖಜಾನೆಗೆ ಸೇರಿತ್ತು. ಇದಕ್ಕೆ ವ್ಯತಿರಿಕ್ತವಾಗಿ 2017-18ರಲ್ಲಿ ಬಾಂಡ್‌ಗಳ ಮೂಲಕ 210 ಕೋ.ರೂ.ಗಳ ದೇಣಿಗೆಗಳನ್ನು ಸ್ವೀಕರಿಸಿದ್ದಾಗಿ ಬಿಜೆಪಿ ಘೋಷಿಸಿತ್ತು.

ಆರ್‌ಬಿಐ,ಚುನಾವಣಾ ಆಯೋಗ, ಕಾನೂನು ಸಚಿವಾಲಯ,ಆರ್‌ಬಿಐ ಗವರ್ನರ್, ಮುಖ್ಯ ಚುನಾವಣಾ ಆಯುಕ್ತರು ಮತ್ತು ಹಲವಾರು ರಾಜಕೀಯ ಪಕ್ಷಗಳು ಉದ್ದೇಶಿತ ಚುನಾವಣಾ ಬಾಂಡ್ ಯೋಜನೆಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿ ಸರಕಾರಕ್ಕೆ ಪತ್ರ ಬರೆದಿದ್ದರು ಎನ್ನುವುದನ್ನು ಕಳೆದ ವರ್ಷ ಹಲವಾರು ಆರ್‌ಟಿಐ ಉತ್ತರಗಳು ಬಹಿರಂಗಗೊಳಿಸಿದ್ದವು. ಆದರೂ ವಿತ್ತ ಸಚಿವಾಲಯವು ಈ ಆಕ್ಷೇಪಗಳನ್ನೆಲ್ಲ ಪಕ್ಕಕ್ಕೆ ತಳ್ಳಿ ಯೋಜನೆಯನ್ನು ಜಾರಿಗೊಳಿಸಿತ್ತು.

ಕೃಪೆ: Thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News