ಸೌದಿಯಿಂದ ಕರ್ನಾಟಕಕ್ಕೆ ಪ್ರತಿ ವಾರ 2ರಿಂದ 3 ವಿಮಾನಕ್ಕಾಗಿ ಒತ್ತಡ ಹೇರುತ್ತೇನೆ: ಸದಾನಂದ ಗೌಡ

Update: 2020-05-15 06:39 GMT

ಮಂಗಳೂರು,ಮೇ 15: ಸೌದಿ ಅರೇಬಿಯದಿಂದ ಕರ್ನಾಟಕಕ್ಕೆ ಕನ್ನಡಿಗರನ್ನು ವಾಪಸ್ ಕರೆ ತರಲು ಇನ್ನಷ್ಟು ವಾಪಸಾತಿ ವಿಮಾನವನ್ನು ಕಾರ್ಯಾಚರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಇನ್ನಷ್ಟು ಒತ್ತಡ ಹೇರುತ್ತೇನೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ.

ಸೌದಿ ಅರೇಬಿಯದಲ್ಲಿ ಕನ್ನಡಿಗ ನಿಯೋಗದೊಂದಿಗೆ coastaldigest.com ಆಯೋಜಿಸಿದ್ದ ವೀಡಿಯೊ ಸಂವಾದದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ನಾನು ಇಂದು ವಿದೇಶಾಂಗ ವ್ಯವಹಾರ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರನ್ನು ಸಂಪರ್ಕಿಸುವೆ. ಗಲ್ಫ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆ ತರಲು ಇನ್ನಷ್ಟು ವಿಮಾನವನ್ನು ಕಾರ್ಯಾಚರಿಸುವ ಅಗತ್ಯವಿದೆ ಎಂದು ಮನವರಿಕೆ ಮಾಡುವೆ ಎಂದರು.

ವೀಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ಕನ್ನಡಿಗ ನಿಯೋಗದ ಸಲಹೆಗಳು, ಕೋರಿಕೆಗಳು ಹಾಗೂ ಆತಂಕವನ್ನು ಗಮನಿಸಿದ ಕೇಂದ್ರ ಸಚಿವರು, ಎರಡು ಕೆಲಸ ಮಾಡುವ ಅಗತ್ಯವಿದೆ. ಮೊದಲಿಗೆ ಸೌದಿ ಅರೇಬಿಯದಿಂದ ಕರ್ನಾಟಕಕ್ಕೆ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎರಡನೇಯದಾಗಿ ಸೌದಿ ಅರೇಬಿಯದಲ್ಲಿರುವ ಹೆಚ್ಚಿನ ವಲಸೆ ಕನ್ನಡಿಗರು ಕರಾವಳಿ ಭಾಗದವರಾಗಿರುವ ಕಾರಣ ಹೆಚ್ಚಿನ ಎಲ್ಲ ವಿಮಾನಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವುದನ್ನು ಖಚಿತಪಡಿಸಬೇಕಾಗಿದೆ ಎಂದರು.

 ಸೌದಿ ಅರೇಬಿಯದಿಂದ ಕರ್ನಾಟಕದ ಮಂಗಳೂರು ಅಥವಾ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತಿ ವಾರ ಕನಿಷ್ಠ ಪಕ್ಷ ಎರಡರಿಂದ ಮೂರು ವಿಮಾನಗಳು ತೆರಳಬೇಕು. ಅದು ನನ್ನ ಉದ್ದೇಶ ಎಂದು ಸದಾನಂದ ಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News