ಮೆಕ್ಕೆಜೋಳ ಬೆಳೆಯುವ ರೈತರಿಗೆ 5 ಸಾವಿರ ರೂ. ಸಹಾಯಧನ: ಸಿಎಂ ಯಡಿಯೂರಪ್ಪ

Update: 2020-05-15 11:07 GMT

ಬೆಂಗಳೂರು, ಮೇ 15: ಕೊರೋನ ಸೋಂಕು ತಡೆಗಟ್ಟಲು ಹೇರಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ 10 ಲಕ್ಷ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕ್ಕೆಜೋಳ ಬೆಳೆಗಾರರಿಂದ ಕರ್ನಾಟಕ ಹಾಲು ಉತ್ಪಾದಕ ಮಹಾ ಮಂಡಳ(ಕೆಎಂಎಫ್)ದ ಮೂಲಕ ಮೆಕ್ಕೆಜೋಳ ಖರೀದಿಸಲು ಈಗಾಗಲೇ 4 ‘ಜಿ’ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರಕಾರ 1,760 ರೂ. ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ರೈತರಿಗೆ ಇಷ್ಟು ಮೊತ್ತದ ಬೆಲೆ ದೊರೆಯದ ಕಾರಣ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ನೆರವು ನೀಡಲಾಗುತ್ತಿದ್ದು, ಇದಕ್ಕೆ 500 ಕೋಟಿ ರೂ. ವೆಚ್ಚವಾಗಲಿದೆ ಎಂದರು.

ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗಾಗಿ ಘೋಷಿಸಿರುವ ಪ್ಯಾಕೇಜ್ ಮೊತ್ತ 2,272 ಕೋಟಿ ರೂಪಾಯಿಗಳು. ನೈಸರ್ಗಿಕ ವಿಕೋಪದಿಂದ ಕುರಿ, ಮೇಕೆಗಳು ಸಾವು ಸಂಭವಿಸಿದರೆ ಅವುಗಳಿಗೆ ‘ಅನುಗ್ರಹ’ ಯೋಜನೆಯಡಿ 5ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ: ರಾಜ್ಯದಲ್ಲಿ ಕೋವಿಡ್-19 ವಿರುದ್ಧ ಸಮರದಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 42,500 ಆಶಾ ಕಾರ್ಯಕರ್ತೆಯರ ವಿಶೇಷ ಸೇವೆಯನ್ನು ಗುರುತಿಸಿ, ತಲಾ 3 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದಕ್ಕೆ 12 ಕೋಟಿ ರೂ. ವೆಚ್ಚವಾಗಲಿದೆ. ಈ ಮೊತ್ತವನ್ನು ಸಹಕಾರ ಸಂಘ-ಸಂಸ್ಥೆಗಳಿಂದ ಕ್ರೋಢಿಕರಿಸಿ, ಸಹಕಾರ ಇಲಾಖೆ ವತಿಯಿಂದ ನೀಡಲಾಗುತ್ತದೆ ಎಂದು ಯಡಿಯೂರಪ್ಪ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News