ಕೊರೋನ ನಿಯಂಯತ್ರಣದಲ್ಲಿದೆ, ಸಾರ್ವಜನಿಕರು ಆತಂಕಪಡಬೇಕಿಲ್ಲ: ಸಚಿವ ಡಾ.ಸುಧಾಕರ್

Update: 2020-05-15 13:06 GMT

ಬೆಂಗಳೂರು, ಮೇ 15: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತರ ಪ್ರಕರಣಗಳ ಸಂಖ್ಯೆ ಹೆಚ್ಚಳದ ಭೀತಿ ಬೇಡ. ಸೋಂಕಿತ ಪ್ರದೇಶವೆಂದು ಗುರುತಿಸಿಕೊಂಡಿರುವ 'ಕಂಟೈನ್ಮೆಂಟ್ ಝೋನ್' ಮತ್ತು ಪ್ರಯಾಣಿಕರಿಂದ ಸೋಂಕು ಹರಡುತ್ತಿದೆಯೇ ಹೊರತು ಸಮುದಾಯಕ್ಕೆ ಸೋಂಕು ಹಬ್ಬಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕಂಡು ಬಂದಿರುವ ಒಟ್ಟು ಸೋಂಕಿತರ ಪ್ರಕರಣಗಳ ಪೈಕಿ ಶೇ.64ರಷ್ಟು ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಿತರಾಗಿದ್ದಾರೆ. ಶೇ.25ರಷ್ಟು ಪ್ರಯಾಣಿಕರಿಂದ ಸೋಂಕು ತಗುಲಿದೆ. (ಶೇ.7 ವಿದೇಶಿ ಮತ್ತು ಶೇ.18 ದೇಶಿಯ) ಶೇ.7ರಷ್ಟು ಪ್ರಕರಣಗಳು ಉಸಿರಾಟ ಮತ್ತು ಇತರೆ ಸೋಂಕುಗಳಿಂದ ನರಳುತ್ತಿದ್ದ ಪ್ರಕರಣಗಳಾಗಿವೆ.

ರಾಜ್ಯದಲ್ಲಿ ದೃಢಪಟ್ಟ ಪ್ರಕರಣಗಳ ಪ್ರಮಾಣ ಶೇ.1 ಮಾತ್ರ. ಒಟ್ಟು ನೂರು ಪರೀಕ್ಷೆಗಳ ಪೈಕಿ ಒಂದು ಪ್ರಕರಣ ಮಾತ್ರವೇ ಕೊರೋನ ವೈರಸ್ ಸೋಂಕು ದೃಢ ಪಡುತ್ತಿದೆ ಎಂಬುದು ಸಮಾಧಾನಕರ. ದೇಶದಲ್ಲಿ ಕೊರೋನ ಸೋಂಕು ದೃಢಪಟ್ಟ ಪ್ರಕರಣಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳು ಕಡಿಮೆ. ದೇಶದ ಸರಾಸರಿ ಪ್ರಮಾಣ ಶೇ.5ರಷ್ಟಿದೆ ಎಂದು ಅವರು ಅಂಕಿ-ಅಂಶಗಳನ್ನು ನೀಡಿದರು.

ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ ಎಂಬುದು ಆತಂಕಕಾರಿ ಎಂದು ಮಾಧ್ಯಮಗಳ ವಿಶ್ಲೇಷಣೆ. ಆದರೆ, ನಗರದಲ್ಲಿ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಪ್ರತಿ ಮನೆ ಮನೆಯ ಹಿರಿಯ ನಾಗರಿಕರ ಸ್ವ್ಯಾಬ್ ಟೆಸ್ಟ್ ಗೆ ಸೂಚಿಸಲಾಗಿದೆ. ಇತ್ತೀಚೆಗೆ ಪಾದರಾಯನಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರ‍್ಯಾಪಿಡ್ ಟೆಸ್ಟ್ ಗೆ ಸೂಚಿಸಲಾಗಿತ್ತು ಎಂದರು.

ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೊರೋನ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ 38 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೇ ಅಂತ್ಯದೊಳಗೆ 60 ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ ಪೂರ್ಣಗೊಂಡರೆ ಪರೀಕ್ಷಾ ಸಾಮರ್ಥ್ಯ ದಿನಕ್ಕೆ 13ರಿಂದ 15 ಸಾವಿರಕ್ಕೆ ಏರಿಕೆಯಾಗಲಿದೆ ಎಂದರು.

ರಾಜ್ಯದಲ್ಲಿ ಕೊರೋನ ವಿರುದ್ಧದ ಹೋರಾಟದಲ್ಲಿ ಎಲ್ಲ ರೀತಿಯ ಮುನ್ನಚ್ಚರಿಕೆ ಕ್ರಮಗಳನ್ನು ಕೊಂಡಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದ ಅವರು, ಕೊರೋನ ಸೋಂಕು ಅಷ್ಟು ಸುಲಭವಾಗಿ ಹೋಗುವುದಿಲ್ಲವೆಂದು ವಿಶ್ವಸಂಸ್ಥೆ ಖಚಿತ ಪಡಿಸಿದೆ. ಹೀಗಾಗಿ ನಾವು ಕೊರೋನ ಸೋಂಕಿನ ಜೊತೆಗೆ ಬದುಕುವುದನ್ನು ಕಲಿಯಬೇಕು ಎಂದರು.

ವೈರಾಣುವಿನ ಜೊತೆ ಜೊತೆಗೇ ನಾವು ಇರಬೇಕಾಗುತ್ತದೆ. ಶುಚಿತ್ವ ಮಾಡಿಕೊಳ್ಳುವ ಮೂಲಕ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದ ಅವರು, ವಿದೇಶ ಹಾಗೂ ಹೊರ ರಾಜ್ಯದಿಂದ ನಾವು ನಮ್ಮ ರಾಜ್ಯದವರನ್ನು ಕರೆತರುತ್ತಿದ್ದೇವೆ. ಸೋಂಕು ಹೆಚ್ಚಿರುವ ದೇಶದಿಂದಲ್ಲೂ ಬಂದಿದ್ದಾರೆ. ಅದರಿಂದಾಗಿಯೇ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ರಾಜ್ಯದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಕೇರಳ ರಾಜ್ಯದ ಜೊತೆ ಅನೇಕ ವಿಚಾರಗಳ ಬಗ್ಗೆ ವಿನಮಯ ಮಾಡಿಕೊಳ್ಳಲಾಗಿದೆ. ಜನವರಿಯಿಂದ ಪ್ರಾರಂಭವಾಗಿ ಮೇ ವರೆಗೆ ಬಂದಿದ್ದು, ಇದೀಗ ಸೋಂಕಿತರ ಸಂಖ್ಯೆ ಸಾವಿರಕ್ಕೆ ಬಂದಿದೆ. ಬೇರೆ ರಾಷ್ಟ್ರ ಮತ್ತು ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಕಡಿಮೆ ಇದೆ ಎಂದರು.

ಮೈಸೂರು ದೇಶಕ್ಕೆ ಮಾದರಿ: ಕೆಂಪು ವಲಯದಲ್ಲಿದ್ದ ಮೈಸೂರು ಕೊರೋನ ಸೋಂಕು ಮುಕ್ತವಾಗಿದ್ದು ದೇಶಕ್ಕೆ ಮಾದರಿಯಾಗಿದೆ. ಯಾವುದೇ ಪ್ರಾಣಹಾನಿ ಇಲ್ಲದೇ ಎಲ್ಲ 90 ಸೋಂಕಿತರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಹೀಗಾಗಿ ಕಂಟೈನ್ಮೆಂಟ್ ಝೋನ್‍ನಲ್ಲಿದ್ದ ಮೈಸೂರು ಹಸಿರು ವಲಯದತ್ತ ಹೆಜ್ಜೆ ಹಾಕಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.

ರಾಜ್ಯ ಸರಕಾರದ ಪರಿಣಾಮಕಾರಿ ಕ್ರಮ, ಜಿಲ್ಲಾಡಳಿತದ ಪರಿಶ್ರಮ ಹಾಗೂ ಮೈಸೂರು ಜನತೆ ಸಹಕಾರದಿಂದ ಇದು ಸಾಧ್ಯವಾಗಿದೆ. ಆರಂಭದಲ್ಲಿ ಸೋಂಕಿತರ ಸಂಖ್ಯೆ ಆತಂಕ ಮೂಡಿಸಿತ್ತು. ಮಾರ್ಚ್ 21ಕ್ಕೆ ಮೊದಲ ಪ್ರಕರಣ ಪತ್ತೆಯಾಗಿತ್ತು. ನಂತರ ನಂಜನಗೂಡಿನ ಜ್ಯುಬಿಲಿಯಂಟ್ ಮೂಲದ ಸೋಂಕಿತರಿಂದ 74 ಮಂದಿಗೆ ಮತ್ತು ಹೊಸದಿಲ್ಲಿ ಪ್ರವಾಸಕ್ಕೆ ತೆರಳಿದ್ದ 10 ಮಂದಿಗೆ ಸೋಂಕು ದೃಢಪಟ್ಟಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದರು.

ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜನತೆಯ ಸಹಕಾರ ಸಿಕ್ಕರೆ ಕೊರೋನ ವೈರಸ್ ಸೋಂಕು ಹರಡದಂತೆ ಹೆಡೆಮುರಿ ಕಟ್ಟಬಹುದು ಎಂಬುದಕ್ಕೆ ಮೈಸೂರು ಜಿಲ್ಲೆ ಒಂದು ನಿದರ್ಶನವಾಗಿದೆ. ಇದು ದೇಶಕ್ಕೆ ಮಾದರಿಯಾಗಿದೆ. ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು ಅಭಿನಂದನಾರ್ಹರು'

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News