ಶಿವಾಜಿನಗರದ 11 ಪ್ರಕರಣಗಳು ಸೇರಿ ಬೆಂಗಳೂರಲ್ಲಿಂದು 13 ಮಂದಿಗೆ ಕೊರೋನ ದೃಢ

Update: 2020-05-15 16:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ.15: ನಗರದಲ್ಲಿ ಶುಕ್ರವಾರ ಹೊಸದಾಗಿ 13 ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ ಶಿವಾಜಿನಗರದಲ್ಲಿ ಪಿ-653 ಸೋಂಕಿತನಿಂದ 11 ಜನರಿಗೆ ಹಾಗೂ ಮಂಗಮ್ಮನಪಾಳ್ಯದ ಪಿ- 911 ನಿಂದ ಇಬ್ಬರಿಗೆ ಕೊರೋನ ಸೋಂಕು ಹರಡಿದೆ.

ನಗರದ ಕಂಟೈನ್ಮೆಂಟ್ ಜೋನ್ ಆಗಿರುವ ಶಿವಾಜಿನಗರ ಹಾಗೂ ಮಂಗಮ್ಮನಪಾಳ್ಯ ವಾರ್ಡ್‍ನಲ್ಲಿ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಒಟ್ಟು 13 ಜನರಿಗೆ ಕೊರೋನ ಸೋಂಕು ಹರಡಿದೆ. ಶಿವಾಜಿನಗರದ ರಿಜೆಂಟ್ ಹೊಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದ ಪಿ- 653 ವ್ಯಕ್ತಿಯಿಂದ ನಾಲ್ವರು ಪ್ರಥಮ ಸಂಪರ್ಕಿತರಿಗೆ ಕೊರೋನ ಬಂದಿತ್ತು. ಇದೀಗ ಈತನ ದ್ವಿತೀಯ ಸಂಪರ್ಕದಲ್ಲಿದ್ದ 11 ಜನರಿಗೆ ಕೊರೋನ ಸೋಂಕು ಹರಡಿದೆ. ಪ್ರಥಮ ಬಾರಿ ಸೋಂಕು ಪತ್ತೆಯಾದ ಬಳಿಕ ಆ ಕಟ್ಟಡದ 73 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಜೊತೆಗೆ ರಿಜೆಂಟ್ ಹೊಟೇಲ್‍ನಲ್ಲಿದ್ದವರನ್ನೂ ಸೇರಿ ಒಟ್ಟು 105 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ ಈಗ ದ್ವಿತೀಯ ಸಂಪರ್ಕದಲ್ಲಿದ್ದ 11 ಜನರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ.

ಮಂಗಮ್ಮನಪಾಳ್ಯದ ಮದೀನಾನಗರದ ನಿವಾಸಿಯಾಗಿದ್ದ ಪಿ- 911 ರ ಸಂಪರ್ಕದಿಂದ ಆತನ ಹೆಂಡತಿ ಮತ್ತು ಮಗುವಿಗೂ ಕೊರೋನ ಹರಡಿದೆ. 6 ವರ್ಷದ ಹೆಣ್ಣು ಮಗು ಹಾಗೂ 32 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಈ ಇಬ್ಬರು ಕ್ವಾರಂಟೈನ್‍ನಲ್ಲಿದ್ದರೂ ಈಗ ಸೋಂಕು ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News