ಪಾದರಾಯನಪುರ ಘಟನೆ: ಸ್ವತಂತ್ರ ತನಿಖೆಗೆ ಸ್ವರಾಜ್ ಅಭಿಯಾನ್, ಆಲ್ ಇಂಡಿಯಾ ಪೀಪಲ್ಸ್ ಫೋರಂ ಒತ್ತಾಯ

Update: 2020-05-16 17:05 GMT
ಫೈಲ್ ಚಿತ್ರ

ಬೆಂಗಳೂರು, ಮೇ 16: ಬೆಂಗಳೂರಿನ ಪಾದರಾಯನಪುರದಲ್ಲಿ ಎಪ್ರಿಲ್ 10ರ ಅನಂತರದ ಘಟನೆ ಮತ್ತು ಸೀಲ್‌ಡೌನ್ ಬಗ್ಗೆ ಸ್ವತಂತ್ರ ತನಿಖೆಯೊಂದನ್ನು ನಡೆಸಬೇಕು ಎಂದು ಸ್ವರಾಜ್ ಅಭಿಯಾನ್ ಮತ್ತು ಆಲ್ ಇಂಡಿಯಾ ಪೀಪಲ್ಸ್ ಫೋರಂ ಸರಕಾರವನ್ನು ಒತ್ತಾಯಿಸಿದೆ.

ಎಪ್ರಿಲ್ 19ರಂದು ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ವಿಧ್ವಂಸಕ ಘಟನೆಯ ಕುರಿತಂತೆ ಅಧ್ಯಯನ ನಡೆಸಿ ಸುಮಾರು 40 ಪುಟಗಳ ವಿಸ್ತೃತ ವರದಿಯೊಂದನ್ನು ಬಿಡುಗಡೆ ಮಾಡಿರುವ ಸಂಘಟನೆ, ಸೀಲ್‌ಡೌನ್‌ನ್ನು ಯಾಕೆ, ಹೇಗೆ ಜಾರಿಗೊಳಿಸಲಾಯಿತು, ಎಲ್ಲ ವ್ಯಕ್ತಿಗಳಿಗೂ ಆಹಾರ ಮತ್ತು ಇತರ ಅವಶ್ಯಕ ವಸ್ತುಗಳನ್ನು ಒದಗಿಸಲು ಈ ಸಂದರ್ಭದಲ್ಲಿ ಕೈಗೊಂಡ ಕ್ರಮಗಳೇನು ಹಾಗೂ ಸಮುದಾಯದ ಸದ್ಯರೊಂದಿಗೆ ಸೂಕ್ತ ಸಂವಹನವನ್ನಿಟ್ಟುಕೊಳ್ಳುವ ಕುರಿತು ಕೈಗೊಂಡ ಕ್ರಮಗಳೇನು ಎಂಬುದನ್ನು ತನಿಖೆಯು ಪರಿಶೀಲಿಸಬೇಕು ಎಂದು ಆಗ್ರಹಿಸಿದೆ.

ಯಾವ ಸುರಕ್ಷತಾ ಕ್ರಮವನ್ನು ಕೈಗೊಳ್ಳದೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರಕಾರದ ಆದೇಶವನ್ನು ಉಲ್ಲಂಘಿಸಿ ಪಾದರಾಯನಪುರವನ್ನು ಸೀಲ್ ಮಾಡುವಂತಹ ಗಂಭೀರ ಕ್ರಮವನ್ನು ಜಾರಿಗೊಳಿಸಲಾಯಿತು. ಯಾವುದೇ ಕಡ್ಡಾಯ ಸಾಂಸ್ಥಿಕ ಅವಶ್ಯಕತೆಗಳನ್ನೂ ಬಿಬಿಎಂಪಿ ಪೂರೈಸಿಲ್ಲ. ನ್ಯಾಯಯುತವಾದ ಮುನ್ನೆಚ್ಚರಿಕೆ ಕ್ರಮವಿಲ್ಲದೆ ಜಾರಿಗೊಳಿಸಿದ ಸೀಲ್‌ಡೌನ್ ಉಂಟುಮಾಡಿದ ಭಯಾನಕ ಪರಿಣಾಮವೇ ಪಾದರಾಯನಪುರ ಪ್ರಕರಣ. ಆಹಾರ ಮತ್ತು ರೇಷನ್ ಕುರಿತ ಅಭದ್ರತೆ, ರೋಗ ವ್ಯಾಪಕತೆಗೆ ಕೋಮುವಾದಿ ಬಣ್ಣ ಬಳಿಯುವ ಮೂಲಕ ಅಲ್ಲಿನ ನಿವಾಸಿಗಳ ಮನಸ್ಸಿನಲ್ಲಿ ಹುಟ್ಟಿಸಿದ ಆತಂಕ, ಸಂಪರ್ಕ ನಿಷೇಧ ಕುರಿತು ತನ್ನ ಯೋಜನೆಯನ್ನು ಬಿಬಿಎಂಪಿಯು ಸರಿಯಾಗಿ ಜನರಿಗೆ ತಿಳಿಸದೇ ಇದ್ದುದು ಸಂಘರ್ಷಕ್ಕೆ ಕಾರಣವಾಯಿತು ಎಂದು ವರದಿ ಆರೋಪಿಸಿದೆ.

ಐಸಿಎಂಆರ್ ಮಾರ್ಗದರ್ಶಿಗಳ ಅನುಸಾರವೇ ಕ್ವಾರನ್‌ಟೈನ್ ಕೇಂದ್ರಗಳಿಗೆ ಸಾಗಿಸಬೇಕು. ಇದನ್ನು ಪಾರದರ್ಶಕ ವಿಧಾನದಲ್ಲಿ ಮಾಡಬೇಕು. ಆದರೆ ಸರಕಾರಿ ಅಧಿಕಾರಿಗಳು ಇದರಲ್ಲಿ ವಿಫಲವಾಗಿದ್ದಾರೆ ಎಂದು ಎಂದು ವರದಿ ದೂರಿದೆ.

ಪಾದರಾಯನ ಪುರದಲ್ಲಿ ಬಡಕಾರ್ಮಿಕರ ಜನಸಂಖ್ಯೆ ಹೆಚ್ಚಿರುವುದರಿಂದ ಆಹಾರವು ಬಹುಮುಖ್ಯ ಅವಶ್ಯಕತೆಯಾಗಿತ್ತು. ಸೀಲ್‌ಡೌನ್ ಮಾಡುವಂತಹ ನಿರ್ಧಾರ ತೆಗೆದುಕೊಳ್ಳುವುದೆಂದರೆ, ಆ ಸಮುದಾಯದ ಅಗತ್ಯಗಳನ್ನು ಪೂರೈಸುವ ಸಂಪೂರ್ಣ ಜವಾಬ್ದಾರಿಯನ್ನು ಸರಕಾರ ಹೊತ್ತುಕೊಳ್ಳುವುದು. ಲಾಕ್‌ಡೌನ್ ಅಥವಾ ಸೀಲ್‌ಡೌನ್ ಮಾಡಿದ ಕೂಡಲೇ ತೆಗೆದುಕೊಳ್ಳಬೇಕಾಗಿದ್ದ ಬಹುಮುಖ್ಯ ಜವಾಬ್ದಾರಿಯನ್ನು ನಿರ್ವಹಿಸಲು ಸರಕಾರ ವಿಫಲವಾದುದು ಕ್ಷೋಭೆಗೆ ಕಾರಣವಾಯಿತು. ಈ ಕ್ಷೋಭೆಗೆ ರಾಜಕಾರಣಿಗಳು ಒಂದು ನಿರ್ದಿಷ್ಟ ಸಮುದಾಯವನ್ನು ಹೊಣೆಯಾಗಿಸಿರುವುದು ಅನುಚಿತವಾದುದು ಎಂದು ವರದಿಯು ಆಕ್ಷೇಪಿಸಿದೆ.

‘ಪೊಲೀಸರ ಮೇಲೆ ಯಾವುದೇ ದಾಳಿ ನಡೆದಿಲ್ಲ’ ಎಂದು ಪೊಲೀಸ್ ಆಯುಕ್ತರು ಸ್ಪಷ್ಟ ಪಡಿಸಿದ್ದರೂ, ಘಟನೆಗೆ ಸಂಬಂಧಿಸಿ 7 ಮಕ್ಕಳ ಸಹಿತ ಒಟ್ಟು 126 ಮಂದಿಯನ್ನು ಬಂಧಿಸಲಾಗಿದೆ. ಬಂಧನದ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನ ಮಾರ್ಗದರ್ಶಿ ಸೂತ್ರಗಳ ಸ್ಪಷ್ಟ ಉಲ್ಲಂಘಟನೆಯಾಗಿದೆ ಎಂದು ವರದಿ ಆರೋಪಿಸಿದೆ. ಯಾವ ಆಧಾರದ ಮೇಲೆ ಬಾಪೂಜಿ ನಗರ ಮತ್ತು ಪಾದರಾಯನ ಪುರವನ್ನು ಸೀಲ್ ಮಾಡಲಾಯಿತು? ಸೂಕ್ತ ಮೂಲಸೌಕರ್ಯವನ್ನು ಕಲ್ಪಿಸದೇ ಸೀಲ್ ಮಾಡಿರುವುದು ಎಷ್ಟು ಸರಿ? ಭೀತಿ ಮತ್ತು ತಪ್ಪು ಮಾಹಿತಿಯನ್ನು ತಡೆಗಟ್ಟುವುದನ್ನು ಖಾತ್ರಿ ಪಡಿಸಲು ಕೈಗೊಂಡ ಕ್ರಮಗಳೇನು? ಪೊಲೀಸ್ ಆಯುಕ್ತರು ‘ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ’ ಎಂಬ ಹೇಳಿಕೆ ನೀಡಿದ ಮೇಲೂ ಪೊಲೀಸರು ‘ಪೊಲೀಸರಿಗೆ ಹಾನಿಯಾಗಿದೆ’ ಎಂದು ಯಾಕೆ ಪ್ರಥರ್ಮ ಮಾಹಿತಿ ವರದಿಯನ್ನು ನೋಂದಾಯಿಸಿದರು? ಎಂಬ ಏಳು ಪ್ರಶ್ನೆಗಳನ್ನು ಸರಕಾರಕ್ಕೆ ಕೇಳಿರುವ ವರದಿ, ಈ ಎಲ್ಲ ಘಟನೆಗಳ ಕುರಿತು ನಿಷ್ಪಕ್ಷವಾದ, ಪೂರ್ವಗ್ರಹವಿಲ್ಲದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News