ಮನ್ರೇಗಾ ಯೋಜನೆಗೆ 40,000 ಕೋ.ರೂ. ಹೆಚ್ಚಿನ ಅನುದಾನ : ನಿರ್ಮಲಾ ಸೀತಾರಾಮನ್

Update: 2020-05-17 17:35 GMT

ಹೊಸದಿಲ್ಲಿ, ಮೇ 17: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೋದಿ ಸರಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಮೊತ್ತದ ‘ಆತ್ಮನಿರ್ಭರ್ ಪ್ಯಾಕೇಜ್’ನ ಕೊನೆಯ ಹಂತದ ವಿವರಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವಿವಾರ ಪ್ರಕಟಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ಯಾಕೇಜ್‌ನ ಅಂತಿಮ ಹಾಗೂ 5ನೇ ಹಂತದ ವಿವರಗಳನ್ನು ನಿರ್ಮಲಾ ನೀಡಿದರು. ಲಾಕ್‌ಡೌನ್‌ನಿಂದಾಗಿ ನಿರುದ್ಯೋಗದ ಸಮಸ್ಯೆಯನ್ನೆದುರಿಸುತ್ತಿರುವ ವಲಸೆ ಕಾರ್ಮಿಕರಿಗೆ ಎಂನರೇಗಾದಲ್ಲಿ ಉದ್ಯೋಗಾವಕಾಶ ಒದಗಿಸಲು 40 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ಅವರು ಘೋಷಿಸಿದರು.

ಎಲ್ಲಾ ಉದ್ಯಮ ವಲಯಗಳಲ್ಲಿ ಖಾಸಗಿ ಕಂಪೆನಿಗಳ ಪಾಲುದಾರಿಕೆಗೆ ಅವಕಾಶ ನೀಡುವಂತಹ ನೂತನ ಸಾರ್ವಜನಿಕ ವಲಯ ನೀತಿಯನ್ನು ಕೂಡಾ ನಿರ್ಮಲಾ ಅವರು ಪ್ರಕಟಿಸಿದರು. ಎಲ್ಲಾ ಜಿಲ್ಲೆಗಳಲ್ಲಿ ಸೋಂಕು  ರೋಗಗಳ ಆಸ್ಪತ್ರೆ ಬ್ಲಾಕ್‌ಗಳ ಸ್ಥಾಪನೆ, ಆನ್‌ಲೈನ್ ಶಿಕ್ಷಣದಲ್ಲಿ ಸುಧಾರಣೆಗಳು, ಕಂಪೆನಿ ಕಾಯ್ದೆಗಳಡಿ ಸುಸ್ತಿದಾರರಾದವರನ್ನು ಕ್ರಿಮಿನಲ್ ಆರೋಪಿಗಳೆಂದು ಪರಿಗಣಿಸದಿರುವುದು, ಐಬಿಸಿ ಸಂಬಂಧಿತ ಕ್ರಮಗಳ ಮೂಲಕ ಉದ್ಯಮ ನಿರ್ವಹಣೆ ಸರಳಗೊಳಿಸುವಿಕೆ ಇತ್ಯಾದಿ ಕ್ರಮಗಳನ್ನು ಅವರು ಪ್ರಕಟಿಸಿದ್ದಾರೆ.

ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ಕೂಡಾ ವಿತ್ತ ಸಚಿವೆ ಅವರು 2020-21ರ ಸಾಲಿನಲ್ಲಿ ಒಟ್ಟು ಜಿಎಸ್‌ಡಿಪಿಯ ಶೇ.3ರಿಂದ ಶೇ.5ಕ್ಕೆ ಏರಿಕೆ ಮಾಡಿದ್ದು, ಇದರಿಂದಾಗಿ ರಾಜ್ಯಗಳಿಗೆ 4.28 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಂಪನ್ಮೂಲ ಲಭ್ಯವಾಗಲಿದೆ.

ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ, ಒಂದರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಟಿವಿ ಚಾನೆಲ್‌ಗಳು ಆರಂಭ, 100 ವಿವಿಗಳಲ್ಲಿ ಆನ್‌ಲೈನ್ ಶಿಕ್ಷಣ ಸೇರಿದಂತೆ ಶಿಕ್ಷಣವಲಯದಲ್ಲಿಯೂ ಮಹತ್ವದ ಸುಧಾರಣೆಗಳನ್ನು ಅವರು ಘೋಷಿಸಿದ್ದಾರೆ.

ಕೋವಿಡ್-19 ಹಾವಳಿಯಿಂದಾಗಿ ಹಲವಾರು ಉದ್ಯಮಗಳು ತೀವ್ರವಾಗಿ ಬಾಧಿತವಾಗಿರುವುದನ್ನು ಒಪ್ಪಿಕೊಂಡ ನಿರ್ಮಲಾ ಅವರು, ಕೋವಿಡ್-19ನಿಂದಾಗಿ ಪಾವತಿಗೆ ಬಾಕಿಯುಳಿದಿರುವ ಸಾಲಗಳನ್ನು ದಿವಾಳಿತನ ಸಂಹಿತೆಯಡಿ ಸುಸ್ತಿ ಸಾಲಗಳೆಂದು ಪರಿಗಣಿಸಲಾಗುವುದಿಲ್ಲವೆಂದು ತಿಳಿಸಿದರು. ಅಂತಹ ಸಂಸ್ಥೆಗಳ ವಿರುದ್ಧ ಸುಮಾರು ಒಂದು ವರ್ಷದವರೆಗೆ ದಿವಾಳಿತನಕ್ಕೆ ಸಂಬಂಧಿಸಿದ ಕ್ರಮಗಳನು ಕೈಗೊಳ್ಳಲಾಗುವುದಿಲ್ಲವೆಂದು ತಿಳಿಸಿದರು.

ರಾಜ್ಯಗಳ ಸಾಲ ಪಡೆಯುವ ಮಿತಿ ಹೆಚ್ಚಳ

ರಾಜ್ಯಗಳು ಇನ್ನು ಮುಂದೆ ತಮ್ಮ ಒಟ್ಟು ರಾಜ್ಯದ ಆಂತರಿಕ ಉತ್ಪನ್ನ (ಜಿಎಸ್‌ಡಿಪಿ)ಯ ಶೇ.5ರವರೆಗೆ ಸಾಲವನ್ನು ಪಡೆಯಬಹುದಾಗಿದೆ. ಕೆಲವೊಂದು ನಿರ್ದಿಷ್ಟ ಗುರಿಗಳನ್ನು ಈಡೇರಿಸುವ ಶರತ್ತಿನೊಂದಿಗೆ ರಾಜ್ಯಗಳು 4.28 ಕೋಟಿ ರೂ.ವರೆಗೆ ಹೆಚ್ಚುವರಿ ಸಾಲದ ಪ್ಯಾಕೇಜ್ ಕೂಡಾ ಪಡೆಯಬಹುದಾಗಿದೆ.

ಖಾಸಗಿ ಪಾಲುದಾರಿಕೆಗೆ ಗ್ರೀನ್ ಸಿಗ್ನಲ್

ಇನ್ನು ಮುಂದೆ ಎಲ್ಲಾ ಉದ್ಯಮ ವಲಯಗನ್ನು ಖಾಸಗಿ ಕಂಪೆನಿಗಳಿಗೆ ತೆರೆದಿಡಲಾಗುವುದು. ಆಯಕಟ್ಟಿನ ಉದ್ಯಮಗಳಲ್ಲಿ ಮಾತ್ರವೇ ಕನಿಷ್ಠ ಒಂದಾದರೂ ಸಾರ್ವಜನಿಕ ವಲಯದ ಉದ್ಯಮ ಸಂಸ್ಥೆಯನ್ನು ಉಳಿಸಿಕೊಳ್ಳಲಾಗುವುದು. ಉಳಿದ ಎಲ್ಲಾ ಸಾರ್ವಜನಿಕ ವಲಯದ ಉದ್ಯಮಗಳನು ಖಾಸಗೀಕರಣಗೊಳಿಸಲಾಗುವುದು.

ಡಿಜಿಟಲ್ ಶಿಕ್ಷಣಕ್ಕೆ ಒತ್ತು

ಕೇಂದ್ರ ಸರಕಾರದಿಂದ ಶೀಘ್ರದಲ್ಲೇ ‘ಪ್ರಧಾನಮಂತ್ರಿ ಇ ವಿದ್ಯಾ’ ಡಿಜಿಟಲ್ ಶಿಕ್ಷಣ ಯೋಜನೆಗೆ ಚಾಲನೆ. ಈಗ ಚಾಲ್ತಿಯಲ್ಲಿರುವ ಕೇಂದ್ರ ಸರಕಾರದ ಶಾಲಾ ಶಿಕ್ಷಣಕ್ಕಾಗಿನ ದೀಕ್ಷಾ ಆ್ಯಪ್ ಅನ್ನು ಸುಧಾರಣೆಗೊಳಿಸಲಾಗುವುದು. 1ರಿಂದ 12ನೇ ತರಗತಿಯವರೆಗಿನ ಎಲ್ಲಾ ತರಗತಿಗಳಿಗೂ ತಲಾ ಒಂದು ಟಿವಿ ಚಾನೆಲ್ ಆರಂಭಗೊಳ್ಳಲಿದೆ. ಮೇ30ರಿಂದ ದೇಶದ ಉನ್ನತ ಮಟ್ಟದ 100 ವಿಶ್ವವಿದ್ಯಾನಿಲಯಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ನರೇಗಾಗೆ ಉತ್ತೇಜನ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ವಾಪಾಸಾಗುತ್ತಿರುವ ವಲಸೆ ಕಾರ್ಮಿಕರಿಗೆ ಎಂನರೇಗಾ ಯೋಜನೆಯಡಿ ಉದ್ಯೋಗ ನೀಡಲು 40 ಸಾವಿರ ಕೋಟಿ ರೂ. ಅನುದಾನ. ಇದರಿಂದಾಗಿ 300 ಕೋಟಿ ಮಾನವ ಉದ್ಯೋಗದ ದಿನಗಳು ಸೃಷ್ಟಿಯಾಗಲಿವೆ.

ಆರೋಗ್ಯವೇ ಭಾಗ್ಯ

ಆರೋಗ್ಯದ ಮೇಲಿನ ವೆಚ್ಚವನ್ನು ಹೆಚ್ಚಿಸಲಾಗುವುದು. ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳಲ್ಲಿ ಸೋಂಕು ರೋಗ ಚಿಕಿತ್ಸಾ ವಿಭಾಗ ಹಾಗೂ ಸಾರ್ವಜನಿಕ ಆರೋಗ್ಯ ಲ್ಯಾಬ್‌ಗಳ ಸ್ಥಾಪನೆ.

ಉದ್ಯಮಗಳಿಗೆ ಉದಾರತೆ

 ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ದಿವಾಳಿತನ ಪ್ರಕ್ರಿಯೆಗಳನ್ನು ಕೈಗಳ್ಳುವುದಕ್ಕೆ ಬೇಕಾದ ಕನಿಷ್ಠ ಮಿತಿಯನ್ನು 1 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಏರಿಸಲಾಗಿದೆ. ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಯಾವುದೇ ಕಂಪೆನಿಯ ದಿವಾಳಿತನ ಪ್ರಕ್ರಿಯೆಯನ್ನು 1 ವರ್ಷದ ವರೆಗೆ ಮುಂದೂಡಲಾಗುವುದು.

ಕಂಪೆನಿ ಕಾಯ್ದೆಗಳ ಸುಸ್ತಿಗಳ ಕ್ರಿಮೀನಲೀಕರಣ ರದ್ದು

ಕಂಪೆನಿ ಕಾಯ್ದೆಗಳಿಗೆ ಸಂಬಂಧಿಸಿದ ಎಲ್ಲಾ ಸಂಯೋಜಿತ ಅಪರಾಧಗಳನ್ನು ಕ್ರಿಮಿನಲ್ ಸ್ವರೂಪದ್ದೆಂದು ಪರಿಗಣಿಸದೆ ಪರ್ಯಾಯ ಕಾರ್ಯಚೌಕಟ್ಟಿನಡಿ ನಿಭಾಯಿಸಲಾಗುವುದು. ಕಾರ್ಪೊರೇಟ್ ಸಾಮಾಜಿಕ ಬಾಧ್ಯತೆ ಕಾರ್ಯಗಳ ಕುರಿತ ವರದಿ, ಆಡಳಿತ ಮಂಡಳಿ ವರದಿಯಲ್ಲಿ ಅಸಮರ್ಪಕತೆ, ಸುಸ್ತಿಗಳ ಕುರಿತ ವರದಿ ಸಲ್ಲಿಕೆ ಹಾಗೂ ವಾರ್ಷಿಕ ಸಾಮಾನ್ಯ ಸಭೆಯ ಏರ್ಪಡಿಸುವಲ್ಲಿ ವಿಳಂಬ ಇತ್ಯಾದಿಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ.

ಶ್ರಮಿಕ್ ರೈಲಿಗೆ ನೆರವು

ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಲು ಒಡಿಸಲಾಗುವ ಶ್ರಮಿಕ್ ರೈಲುಗಳ ಶೇ.85ರಷ್ಟು ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಲಿದೆ.

ಕೃಷಿ ಮೂಲ ಸೌಕರ್ಯ ಅಭಿವೃದ್ಧಿ

10 ಸಾವಿರ ಕೋಟಿ ರೂ. ವೌಲ್ಯದ ಕೃಷಿ ಮೂಲ ಸೌಕರ್ಯನಿಧಿ ಸ್ಥಾಪನೆ. ಅತಿ ಸಣ್ಣ ಆಹಾರ ಉತ್ಪಾದನಾ ಉದ್ಯಮ ಹಾಗೂ ಹೈನುಗಾರಿಕೆ ಮೂಲಸೌಕರ್ಯಗಳ ಅಭಿವೃದ್ಧಿಗೆ ತಲಾ 10 ಸಾವಿರ ಕೋಟಿ ರೂ. ಹಾಗೂ 15 ಸಾವಿರ ಕೋಟಿ ರೂ. ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News