ಬೆಂಗಳೂರಿನಲ್ಲಿ ಇನ್ನು 4 ತಿಂಗಳು ಖಾಸಗಿ ಬಸ್ ಸಂಚಾರ ಇಲ್ಲ !

Update: 2020-05-17 13:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 17: ಮುಂದಿನ ನಾಲ್ಕು ತಿಂಗಳವರೆಗೆ ಬಸ್‍ಗಳನ್ನು ಓಡಿಸದಿರಲು ಖಾಸಗಿ ಬಸ್‍ಗಳ ಮಾಲಕರು ತೀರ್ಮಾನಿಸಿದ್ದಾರೆ.

ಕೊರೋನ ಸೋಂಕು ನಿವಾರಣೆಗಾಗಿ ಎರಡು ತಿಂಗಳಿನಿಂದ ಲಾಕ್‍ಡೌನ್ ಜಾರಿಯಲ್ಲಿದೆ. ಆದರೆ, ಕಳೆದ 15 ದಿನಗಳ ಹಿಂದೆ ಲಾಕ್‍ಡೌನ್ ಸಡಿಲ ಮಾಡಿ ಕೆಲವು ಕಡೆಗಳಲ್ಲಿ ಬಸ್‍ಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟು, ಇಷ್ಟೇ ಪ್ರಯಾಣಿಕರಿಗೆ ಅವಕಾಶ ಎಂಬ ನಿಯಮ ಹೇರಿರುವುದರಿಂದ ಖಾಸಗಿ ಬಸ್ ಮಾಲಕರು ನಷ್ಟ ಮಾಡಿಕೊಳ್ಳಲು ಇಷ್ಟಪಡದೆ ಲಾಕ್‍ಡೌನ್ ಸಂಪೂರ್ಣವಾಗಿ ತೆರವಾಗುವವರೆಗೆ ಬಸ್‍ಗಳನ್ನು ರಸ್ತೆಗೆ ಇಳಿಸುವುದಿಲ್ಲ ಎಂದು ಹೇಳಿದ್ದರು. ಈಗ ಸೆಪ್ಟೆಂಬರ್ ವರೆಗೆ ಬಸ್‍ಗಳನ್ನು ಓಡಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಸ್ತುತ ಬಸ್‍ಗಳನ್ನು ರಸ್ತೆಗೆ ಇಳಿಸಿದರೆ ತೀರಾ ನಷ್ಟ ಅನುಭವಿಸಬೇಕಾಗುತ್ತದೆ. ಒಂದು ವೇಳೆ ಬಸ್‍ಗಳನ್ನು ಓಡಿಸಲೇಬೇಕು ಎಂದು ಸರಕಾರ ಹೇಳಿದರೆ, ಆರು ತಿಂಗಳವರೆಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು. ನಂತರ ಆರು ತಿಂಗಳ ಕಾಲ ಅರ್ಧ ತೆರಿಗೆ ಮಾತ್ರ ಸಂಗ್ರಹಿಸಬೇಕು ಎಂದು ಖಾಸಗಿ ಬಸ್‍ಗಳ ಮಾಲಕರ ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧವಾಗಿ ಸರಕಾರ ಮಾತುಕತೆಗೆ ಕರೆದರೆ ಭಾಗವಹಿಸಲು ಸಿದ್ಧ. ಆದರೆ, ನಮ್ಮ ಬೇಡಿಕೆಗೆ ಮನ್ನಣೆ ಸಿಕ್ಕರೆ ಮಾತ್ರ ಬಸ್‍ಗಳನ್ನು ರಸ್ತೆಗೆ ಇಳಿಸುತ್ತೇವೆ. ಇಲ್ಲವಾದಲ್ಲಿ ನಷ್ಟ ಮಾಡಿಕೊಂಡು ಬಸ್‍ಗಳನ್ನು ಓಡಿಸುವುದು ಸಾಧ್ಯವಿಲ್ಲ. ಈಗಾಗಲೇ ಡೀಸೆಲ್ ಬೆಲೆ ಹೆಚ್ಚಳವಾಗಿದೆ. ವಾಹನ ಬಿಡಿಭಾಗಗಳೂ ಕೂಡಾ ಹೆಚ್ಚಿದೆ. ಇನ್ನು ಸಿಬ್ಬಂದಿ ವೇತನ ಸೇರಿದರೆ ಹೆಚ್ಚು ಖರ್ಚು ಬರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ತೆರಿಗೆ ವಿನಾಯಿತಿ ನೀಡಿದಲ್ಲಿ ಮಾತ್ರ ಸರಕಾರದ ಮಾರ್ಗಸೂಚಿಗಳನ್ವಯ ಬಸ್‍ಗಳನ್ನು ಓಡಿಸಲು ಸಾಧ್ಯ ಎಂದು ಒಕ್ಕೂಟ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News