'ಆತ್ಮ ನಿರ್ಭರ್ ಭಾರತ್' 5ನೆ ಪ್ಯಾಕೇಜ್: ಆರ್ಥಿಕ ಸ್ಥಿತಿ ಸುಧಾರಣೆಗೆ ಅನುಕೂಲ- ಸಿಎಂ ಯಡಿಯೂರಪ್ಪ

Update: 2020-05-17 16:04 GMT

ಬೆಂಗಳೂರು, ಮೇ 17: 'ಆತ್ಮ ನಿರ್ಭರ್ ಭಾರತ್' ಐದನೆ ಪ್ಯಾಕೇಜ್ ಘೋಷಣೆಯಿಂದ ಕಾರ್ಮಿಕರಿಗೆ ಉದ್ಯೋಗ ಸೃಜನೆ, ಆರೋಗ್ಯ, ಶಿಕ್ಷಣ ಕ್ಷೇತ್ರದ ಸುಧಾರಣೆಗಳು, ಕೈಗಾರಿಕೆ ವಲಯದ ಕಾನೂನು ಸುಧಾರಣೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆಗೆ ಕೇಂದ್ರ ಸರಕಾರ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಣ್ಣಿಸಿದ್ದಾರೆ.

ಕೇಂದ್ರ ಸರಕಾರದ 'ಆತ್ಮ ನಿರ್ಭರ್ ಭಾರತ್' ಆಶಯ ಸಾಕಾರಗೊಳಿಸಲು ರಾಜ್ಯ ಸರಕಾರ ಎಲ್ಲ ರೀತಿಯಲ್ಲೂ ಶ್ರಮಿಸಲಿದೆ. ಟಿ.ವಿ.ಚಾನಲ್‍ಗಳನ್ನು ಪ್ರಾರಂಭಮಾಡಿ ಮಕ್ಕಳಿಗೆ ಪಾಠ ಹೇಳುವುದು ಒಳ್ಳೆಯ ನಿರ್ಧಾರ. ಇದರಿಂದ ಶಾಲಾ ದಿನಗಳನನು ಕಳೆದುಕೊಂಡ ಮಕ್ಕಳಿಗೆ ಒಳ್ಳೆಯದಾಗಲಿದೆ. ಪ್ರಧಾನ ಮಂತ್ರಿ ಇ-ವಿದ್ಯಾ ಯೋಜನೆ ಇಲ್ಲಿಯವರೆಗೆ ನಾವು ಅಳವಡಿಸಿಕೊಂಡು ಬಂದ ಔಪಚಾರಿಕ ಪದ್ಧತಿಯ ವಿದ್ಯಾರ್ಜನೆಯ ಮೇಲೆ ಇರುವ ಒತ್ತಡ ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇ-ಎಜುಕೇಷನ್ ಯೋಜನೆ ದೇಶದ ವಿದ್ಯಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿದೆ. ಕೊರೋನ ವೈರಸ್ ಸೋಂಕಿನ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಔದ್ಯೋಗಿಕ ಘಟಕಗಳು ಮತ್ತು ವ್ಯಕ್ತಿಗಳ ವಿರುದ್ಧ ಆರ್ಥಿಕ ದಿವಾಳಿತನದ ಕಾನೂನಿಗೆ ಒಳಪಡಿಸಲಾಗುವುದಿಲ್ಲ ಎಂದು ತೀರ್ಮಾನ ಆರ್ಥಿಕ ಸಂಕಷ್ಟದಲ್ಲಿರುವ ಎಂಎಸ್‍ಎಂಇ ಮಾಲಕರಿಗೆ ನೆಮ್ಮದಿ ತರಲಿದೆ ಮತ್ತು ಅವರಿಗೆ ಇನ್ನೊಮ್ಮೆ ಆರ್ಥಿಕ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಎಲ್ಲ ವಲಯಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಮುಕ್ತವಾಗಿವೆ ಎಂದು ಘೋಷಿಸಿದ್ದು, ಇದು ನಷ್ಟದಲ್ಲಿರುವ ಸರಕಾರಿ ವಲಯದ ಸಂಸ್ಥೆಗಳಿಗೆ ಹೊಸ ಜೀವ ಬಂದಂತಾಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ರಾಜ್ಯಗಳ ಜಿಡಿಪಿಯ ಶೇ.3ರಿಂದ ಶೇ.5ಕ್ಕೆ ಏರಿಸಿದ್ದು ರಾಜ್ಯಗಳು ಆರ್ಥಿಕವಾಗಿ ಉಸಿರಾಡುವಂತೆ ಮಾಡಿದೆ. ಕೊವಿಡ್-19ನಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯಗಳು ತಮ್ಮ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಪುನಶ್ಚೇತನಗೊಳಿಸುವಲ್ಲಿ ಸಹಾಯಕವಾಗಲಿದೆ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News