ಜೀವನ ಪೂರ್ತಿ ಕೊರೋನ ನಮ್ಮ ಜೊತೆಯಲ್ಲಿರುತ್ತದೆ: ಸಚಿವ ಶ್ರೀರಾಮುಲು

Update: 2020-05-17 16:22 GMT

ಬೆಂಗಳೂರು, ಮೇ 17: ಕೊರೋನ ಸೋಂಕು ಜೀವನ ಪೂರ್ತಿ ನಮ್ಮ ಜೊತೆಯಲ್ಲಿರುತ್ತದೆ. ಹಾಗಾಗಿ ನಾವು ಅದರ ಜೊತೆಗೇ ಪಯಣ ಬೆಳೆಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ರವಿವಾರ ನಗರದ ಮಿಲ್ಲರ್ ಪೇಟೆಯಲ್ಲಿಂದು ಮಾಜಿ ಮೇಯರ್ ಇಬ್ರಾಹೀಂ ಅವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರಿಗೆ ರೇಷನ್ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೊರೋನ ಮಹಾಮಾರಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅದರ ಜೊತೆ ನಾವು ಪ್ರಯಾಣ ಬೆಳೆಸಬೇಕಿದೆ. ಇನ್ನು, ಎರಡು-ಮೂರು ವರ್ಷ ನಾವು ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ರಾಜ್ಯಕ್ಕೆ ಬರುವವರನ್ನ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಆರು ತಿಂಗಳಲ್ಲಿ ರಾಜ್ಯದಲ್ಲಿ 82 ಸಾವಿರ ಮಹಿಳೆಯರಿಗೆ ಹೆರಿಗೆಯಾಗಲಿದೆ. ಅವರಿಗೆ ತೊಂದರೆ ಆಗದಂತೆ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಕಂಟೇನ್ಮೆಂಟ್ ಝೋನ್‍ನಿಂದ ಬಂದವರನ್ನು ಕಡ್ಡಾಯವಾಗಿ ಟೆಸ್ಟ್ ಮಾಡಲಾಗುವುದು. ರಾಜ್ಯ ಸರಕಾರ ಇಷ್ಟು ದಿನ ಜನರಿಗೆ ಏನು ಬೇಕೋ ಅದನ್ನೆಲ್ಲ ಮಾಡಿದೆ ಎಂದರು.

ಕೇಂದ್ರ ಸರಕಾರದಿಂದ ನಾಲ್ಕನೇ ಹಂತದ ಲಾಕ್‍ಡೌನ್ ನಿಯಮಗಳು ಇನ್ನೂ ಬರಬೇಕಿದ್ದು, ಕೆಲ ರಾಜ್ಯಗಳಲ್ಲಿ ಯಥಾಸ್ಥಿತಿ ಮುಂದುವರೆಸುವ ಚರ್ಚೆ ನಡೆದಿದೆ ಎಂದು ಶ್ರೀರಾಮುಲು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News