ವಲಸಿಗ ಕಾರ್ಮಿಕರಿಗೆ ಬಸ್: ಪ್ರಿಯಾಂಕಾಗೆ ಪತ್ರ ಬರೆದ ಆದಿತ್ಯನಾಥ್ ಸರಕಾರ ಹೇಳಿದ್ದು ಹೀಗೆ…

Update: 2020-05-19 09:47 GMT

ಹೊಸದಿಲ್ಲಿ: ವಲಸಿಗ ಕಾರ್ಮಿಕರನ್ನು ಮನೆಗೆ ತಲುಪಿಸಲು ಬಸ್ ವ್ಯವಸ್ಥೆ ಕುರಿತಂತೆ ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ನಡುವೆ ಪತ್ರ ಸಮರವೇರ್ಪಟ್ಟ ಬೆನ್ನಲ್ಲೇ ಪ್ರಿಯಾಂಕಾಗೆ ಇನ್ನೊಂದು ಪತ್ರ ಬರೆದಿರುವ ಉತ್ತರ ಪ್ರದೇಶ ಸರಕಾರ, ದಿಲ್ಲಿ ಗಡಿಯ ನೊಯ್ಡಾ ಮತ್ತು ಗಾಝಿಯಾಬಾದ್‍ಗೆ ತಲಾ 500 ಬಸ್‍ಗಳನ್ನು ಕಳುಹಿಸುವಂತೆ ಹೇಳಿದೆ.

ವಲಸಿಗ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಪ್ರಿಯಾಂಕ ಗಾಂಧಿ ಮಾಡಿದ 1,000 ಬಸ್‍ಗಳ ಆಫರ್ ಒಪ್ಪಿದ್ದ ರಾಜ್ಯ ಸರಕಾರ ಅದೇ ಸಮಯ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು ಇವುಗಳು ಅಸ್ವೀಕಾರಾರ್ಹ ಎಂದು ಕಾಂಗ್ರೆಸ್ ಹೇಳಿದೆ.

ತಡರಾತ್ರಿ ಪ್ರಿಯಾಂಕ ಗಾಂಧಿ ಕಚೇರಿಗೆ ಪತ್ರ ಬರೆದ ಉತ್ತರ ಪ್ರದೇಶ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಎಲ್ಲಾ ಬಸ್ಸುಗಳ ಫಿಟ್ನೆಸ್ ಪ್ರಮಾಣಪತ್ರ, ಜತೆಗೆ ಎಲ್ಲಾ ಚಾಲಕರ ವಾಹನ ಚಾಲನಾ ಪರವಾನಗಿಗಳನ್ನು ಲಕ್ನೋಗೆ ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ತಲುಪಿಸುವಂತೆ ಸೂಚಿಸಿದ್ದರು. ಈ ಪತ್ರಕ್ಕೆ ಕಾಂಗ್ರೆಸ್ ಪಕ್ಷ ಮುಂಜಾನೆ 2:10ಕ್ಕೇ ಉತ್ತರ ನೀಡಿದೆ.

ಪ್ರಿಯಾಂಕ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಸಂದೀಪ್ ಸಿಂಗ್ ಬರೆದಿರುವ ಈ ಪತ್ರದಲ್ಲಿ ಉತ್ತರ ಪ್ರದೇಶ ಸರಕಾರದ ಕ್ರಮ `ರಾಜಕೀಯ ಪ್ರೇರಿತ' ಎನ್ನಲಾಗಿದೆಯಲ್ಲದೆ ಬಸ್‍ಗಳು ಸದ್ಯ ಈಗಿರುವ ರಾಜ್ಯದ ಗಡಿಯಿಂದ ಖಾಲಿಯಾಗಿ ಲಕ್ನೋ ತನಕ ಸಂಚರಿಸುವಂತೆ ಮಾಡುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಲಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಬಸ್‍ಗಳನ್ನು ಆದಷ್ಟು ಬೇಗ ಬಳಸಿಕೊಳ್ಳುವಂತೆ ಉತ್ತರ ಪ್ರದೇಶ ಸರಕಾರ ಇದೀಗ ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News