ಕೇಂದ್ರದ ವಿಶೇಷ ಪ್ಯಾಕೇಜ್ ಸುಳ್ಳಿನ ಕಂತೆ; ಅಪಸ್ವರ ಎತ್ತಿದರೆ ದೇಶದ್ರೋಹಿಯ ಪಟ್ಟ: ಕುಮಾರಸ್ವಾಮಿ

Update: 2020-05-19 12:45 GMT

ಬೆಂಗಳೂರು, ಮೇ 19: ಸರಕಾರ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಹಲವರು ಸಲಹೆ ನೀಡುತ್ತಾರೆ. ಆ ಸಲಹೆಗಳ ಆಧಾರದ ಮೇಲೆಯೆ ಸರಕಾರ ತನ್ನ ನಿರ್ಧಾರಗಳನ್ನು ಪ್ರಕಟಿಸುತ್ತದೆ. ಆದರೆ, ಕೋವಿಡ್-19ಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೆಗೆದುಕೊಂಡಿರುವ ನಿರ್ಧಾರಗಳು ಪಾರದರ್ಶಕತೆಯಿಂದ ಕೂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಿವಿಯಲ್ಲಿ ಧಾರಾವಾಹಿ ವೀಕ್ಷಿಸಿದಂತೆ ನಾಲ್ಕು ದಿನಗಳ ಕಾಲ ವಿತ್ತ ಸಚಿವೆಯ ಸರಣಿ ಪತ್ರಿಕಾಗೋಷ್ಠಿಗಳನ್ನು ವೀಕ್ಷಿಸಿದ್ದೇನೆ. ಯಾರ ಸಲಹೆಯನ್ನು ಪಡೆದುಕೊಂಡು ಈ ರೀತಿಯ ಪ್ಯಾಕೇಜ್ ಘೋಷಿಸಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಯಾರಾದರೂ ಅಪಸ್ವರ ಎತ್ತಿದರೆ ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತದೆ ಎಂದು ಕಿಡಿಕಾರಿದರು.

500, 1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ನಂತರ ಸಣ್ಣ ಉದ್ದಿಮೆಗಳು ನೆಲ ಕಚ್ಚಿದವು. ಹಲವಾರು ಸಂಸ್ಥೆಗಳು ಆರ್ಥಿಕ ದಿವಾಳಿಗೊಳಗಾದವು. ಇದರ ಪರಿಣಾಮವಾಗಿ ಬ್ಯಾಂಕುಗಳು ಆರ್ಥಿಕವಾಗಿ ಕುಸಿದವು. ಅದನ್ನು ಸರಿಪಡಿಸಲು ಈ ಪ್ಯಾಕೇಜ್ ಘೋಷಿಸಿದಂತಿದೆ. ಇದರಲ್ಲಿ ಸಣ್ಣ ಉದ್ಯಮಗಳನ್ನು ಮೇಲೆತ್ತುವ ಯಾವ ಪ್ರಯತ್ನಗಳೂ ಕಂಡು ಬರುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸಂಪನ್ಮೂಲ ಕೊರತೆ ನೀಗಿಸಿಕೊಳ್ಳಲು ರಾಜ್ಯಗಳು ಶ್ರಮಪಡುತ್ತಿವೆ. ರಾಜ್ಯಗಳಿಗೆ ಆರ್ಥಿಕ ಶಕ್ತಿ ತುಂಬಿಸುವ ಪ್ರಯತ್ನ ಕೇಂದ್ರ ಸರಕಾರ ಮಾಡುತ್ತಿಲ್ಲ. ದೇಶದ ಜಿಡಿಪಿ ದರ 1.5/2.8 ಕ್ಕೆ ಬಂದು ನಿಲ್ಲಲಿದೆ ಎಂಬುದನ್ನು ವಿಶ್ವಸಂಸ್ಥೆಯೆ ಸ್ಪಷ್ಟವಾಗಿ ತಿಳಿಸಿದೆ. ಅಭಿವೃದ್ಧಿಯ ದರ ಸಂಪೂರ್ಣವಾಗಿ ಕುಸಿಯುತ್ತಿದೆ.  ಕೇಂದ್ರ ಇದನ್ನ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಹಣಕಾಸು ಸಂಸ್ಥೆಗಳು ಒತ್ತಾಯಿಸುತ್ತಿವೆ ಎಂದು ಅವರು ತಿಳಿಸಿದರು.

ದೇಶದಲ್ಲಿ 40 ಕೋಟಿ ಜನ ನಿರುದ್ಯೋಗಿಗಳಾಗುತ್ತಾರೆ ಎಂದು ಅಂದಾಜಿಸಲಾಗಿದೆ. 15ನೆ ಹಣಕಾಸು ಆಯೋಗವು ನಾಲ್ಕು ಅಂಶಗಳನ್ನು ಆಧರಿಸಿ ರಾಜ್ಯಗಳಿಗೆ ಆರ್ಥಿಕ ನೆರವು ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ, ಕೇಂದ್ರ ರಾಜ್ಯಗಳಿಗೆ ಯಾವ ರೀತಿ ಹಣ ಸಂದಾಯ ಮಾಡುತ್ತಿದೆ. 6.50 ಲಕ್ಷ ಕೋಟಿ ರೂ.ಗಳ ಮೊದಲ ವಿಶೇಷ ಪ್ಯಾಕೇಜ್‍ನಲ್ಲಿ ಕೇಂದ್ರದ ಪಾಲು ಕೇವಲ 2,500 ಕೋಟಿ ರೂ.ಮಾತ್ರ. ಇದರಿಂದ ಯಾವ ಚೇತರಿಕೆ ಕಾಣಲು ಸಾಧ್ಯ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ರಾಜ್ಯ ಸರಕಾರ 1,610 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದೆ. ರಾಜ್ಯದಲ್ಲಿ 7.5 ಲಕ್ಷ ಆಟೋ, ಕ್ಯಾಬ್ ಚಾಲಕರಿದ್ದಾರೆ. 20 ಕೋಟಿಯನ್ನ ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ತಲಾ ಒಬ್ಬ ಚಾಲಕನಿಗೆ 5 ಸಾವಿರ ರೂ.ಪರಿಹಾರ ಘೋಷಿಸಲಾಗಿದೆ. ಆಟೋ ಚಾಲಕರಿಗೆ ಇವತ್ತು ಪ್ರಯಾಣಿಕರಿಲ್ಲದೆ ಖಾಲಿ ಗಾಡಿಗಳು ಓಡಾಡುತ್ತಿವೆ. ಅವರಿಗೆ ಏನು ಕೊಡುತ್ತೀರಾ? ಇವತ್ತಿನಿಂದ ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್‍ಗಳಿಗೆ ಚಾಲನೆ ನೀಡಲಾಗಿದೆ. ಬಸ್‍ನಲ್ಲಿ ಸ್ಯಾನಿಟೈಸರ್ ಇಲ್ಲ ಅಂತ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಹಾಗಾದರೆ, ಇದಕ್ಕಾಗಿ ಕೊಟ್ಟಿರುವ ಹಣ ಯಾರ ಜೇಬು ಸೇರುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕೇಂದ್ರದ್ದು ಕೇವಲ 34 ಲಕ್ಷ ಕೋಟಿ ರೂ. ಬಜೆಟ್. ಆರ್ಥಿಕ ಹೊರೆ ಬೀಳುವುದು ಕೇಂದ್ರ ಸರಕಾರಕ್ಕಲ್ಲ, ಬ್ಯಾಂಕ್‍ಗಳು, ಹಣಕಾಸಿನ ಸಂಸ್ಥೆಗಳ ಮೇಲೆ. ವ್ಯಾಪಾರಿ, ಕಾರ್ಮಿಕರ ಪಿಎಫ್‍ಗೆ ಕೇಂದ್ರದ 2,500 ಕೋಟಿ ರೂ.ಬಳಕೆಯಾಗಲಿದೆ. ದಿಸ್ಕಾಂಗಳಿಗೆ 95 ಸಾವಿರ ಕೋಟಿ ರೂ.ಪ್ಯಾಕೇಜ್ ಘೋಷಿಸಲಾಗಿದೆ. ಆದರೆ, ಈ ಹಣವನ್ನ ಕೇಂದ್ರ ಸರಕಾರ ಕೊಡಲ್ಲ, ರಾಜ್ಯ ಸರಕಾರಗಳು ತುಂಬಬೇಕು. ಟಿಸಿಎಸ್‍ಗೆ 50 ಸಾವಿರ ಕೋಟಿ ರೂ.ಘೋಷಿಸಿದೆ. ಇದನ್ನೂ ಕೇಂದ್ರ ಸರಕಾರ ನೀಡುವುದಿಲ್ಲ. ರಾಜ್ಯ, ಹಣಕಾಸಿನ ಸಂಸ್ಥೆಗಳೇ ಭರಿಸಬೇಕು ಎಂದು ಕುಮಾರಸ್ವಾಮಿ ವಿವರಿಸಿದರು.

ಈ ಪ್ಯಾಕೇಜ್‍ನಲ್ಲಿ ಕೇಂದ್ರದ ಪಾಲು ಏನು ಅನ್ನೋದೆ ಗೊತ್ತಾಗುತ್ತಿಲ್ಲ. ಜನರನ್ನು ಮೂರ್ಖರನ್ನಾಗಿ ಮಾಡುವುದಷ್ಟೆ ಕೇಂದ್ರದ ಉದ್ದೇಶ. ಕೇಂದ್ರದ ಪ್ಯಾಕೇಜ್‍ನಲ್ಲಿ ಯಾವುದೆ ಹೊಸತನವಿಲ್ಲ. ಉದ್ಯಮಗಳಿಗೆ ಶಕ್ತಿ ತುಂಬುವ ಕೆಲಸವು ಆಗುತ್ತಿಲ್ಲ. ಕೇಂದ್ರ ಸರಕಾರದ ವಿಶೇಷ ಪ್ಯಾಕೇಜ್ ಸುಳ್ಳಿನ ಕಂತೆಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರಕಾರ ದೊಡ್ಡ ಮಟ್ಟದ ಪರಿಹಾರ ನೀಡಲಿದೆ ಎಂದು ಭಾವಿಸಿದ್ದೆ. ಆದರೆ, ನನಗೆ ನಿರಾಶೆಯಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News