ದೇಶದ ಜನತೆಯನ್ನು ಮೋದಿ ಸರಕಾರ ಸಾಲಗಾರರನ್ನಾಗಿಸುತ್ತಿದೆ: ಡಿಕೆಶಿ ವಾಗ್ದಾಳಿ

Update: 2020-05-19 14:18 GMT

ಬೆಂಗಳೂರು, ಮೇ 19: ಕೇಂದ್ರ ಸರಕಾರವು ಕೋವಿಡ್ ಹಿನ್ನೆಲೆಯಲ್ಲಿ 20+1 ಲಕ್ಷ ಕೋಟಿ ರೂ. ಬೃಹತ್ ಪ್ಯಾಕೇಜ್ ಘೋಷಿಸಿದೆ. ಆದರೆ, ಎಲ್ಲೂ ಅದರಲ್ಲಿ ಕೇಂದ್ರ ಸರಕಾರದ ನೆರವು ಕಾಣುತ್ತಿಲ್ಲ. ಬ್ಯಾಂಕುಗಳಿಂದ ಸಾಲ ನೀಡಿ ಬಡ್ಡಿ ಕಟ್ಟುವಂತೆ ಮಾಡುತ್ತಿದೆ. ಎಲ್ಲರನ್ನ ಮೋದಿ ಸರಕಾರ ಸಾಲಗಾರರನ್ನಾಗಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಇದೇ ಆರ್ಥಿಕ ನೆರವನ್ನು ಸಬ್ಸಿಡಿ, ಅನುದಾನದ ರೂಪದಲ್ಲಿ ಕೊಟ್ಟಿದ್ದರೆ ಒಪ್ಪಬಹುದಾಗಿತ್ತು ಎಂದರು.

ಮುಖ್ಯಮಂತ್ರಿ ಘೋಷಿಸಿರುವ 1,610 ಕೋಟಿ ರೂ.ಗಳ ಪ್ಯಾಕೇಜ್‍ನಲ್ಲಿ ಈವರೆಗೆ ಯಾರಿಗೂ ಒಂದು ರೂಪಾಯಿ ಸಿಕ್ಕಿಲ್ಲ. ಪೀಣ್ಯದಲ್ಲಿ ನಾಲ್ಕೂವರೆ ಲಕ್ಷ ಉದ್ಯಮಗಳಿವೆ. ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಅಲ್ಲಿ ಕೇವಲ ಮೂರುವರೆ ಸಾವಿರ ಕಿಟ್‍ಗಳನ್ನು ಹಂಚಿರುವುದು ನೋಡಿದರೆ ಇವರ ಜನಪರ ಕಾಳಜಿ ಎಂತದ್ದು ಎಂದು ಗೊತ್ತಾಗುತ್ತದೆ ಎಂದು ಶಿವಕುಮಾರ್ ಟೀಕಿಸಿದರು.

ದೇಶ ಕಟ್ಟುವ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗುತ್ತಿರಲಿಲ್ಲ. ಇವತ್ತು ಅವರು ಊರಿಗೆ ವಾಪಸ್ ಹೋಗುವಂತೆ ಮಾಡಿದ್ದೀರಾ. ದೇಶಕ್ಕೆ ದುಡಿದವರಿಗೆ ಅಪಮಾನಿಸಿದ್ದೀರ. ಲಾಕ್‍ಡೌನ್ ಸಡಿಲಿಕೆ ನಂತರ ನಾನು ರಾಜ್ಯ ಪ್ರವಾಸ ಮಾಡಿ, ನೊಂದವರಿಗೆ ಸಾಂತ್ವನ ಹೇಳಿ ಅವರ ಧ್ವನಿಯಾಗುತ್ತೇನೆ. ಎಲ್ಲ ವರ್ಗ, ಎಲ್ಲ ಧರ್ಮದ ಜನರನ್ನ ಭೇಟಿ ಮಾಡುತ್ತೇನೆ. ಈ ಸರಕಾರ ಯಾವ ವರ್ಗಕ್ಕೆ ನೋವು ಮಾಡಿದೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಪ್ರತಿ ಕ್ಷೇತ್ರದ ವಿಚಾರವನ್ನೂ ಗೌಪ್ಯವಾಗಿ ಪಡೆದುಕೊಂಡು, ನಂತರ ಜನರ ಧ್ಚನಿಯಾಗಿ ಕೆಲಸ ಮಾಡುತ್ತೇವೆ. ಅಲ್ಲಿಯವರೆಗೆ ಎಲ್ಲ ಮುಖಂಡರನ್ನ ಕರೆಸಿ ಚರ್ಚಿಸುತ್ತೇನೆ. ಅವರಿಗೆ ಜವಾಬ್ದಾರಿ ನೀಡುವ ಕೆಲಸ ಮಾಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

ಲಾಕ್‍ಡೌನ್ ಸಡಿಲಿಕೆಯಿಂದ ಸೋಂಕು ಹೆಚ್ಚಳವಾಗುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರದ ವಿರುದ್ಧವಾಗಿ ರಾಜ್ಯ ಸರಕಾರ ಮಾರ್ಗಸೂಚಿಗಳನ್ನು ಮಾಡುತ್ತಿದೆ. ಬೆಳಗ್ಗೆ ಮಂತ್ರಿ ಒಂದು ರೀತಿ, ಅಧಿಕಾರಿ ಒಂದು ರೀತಿ ಹೇಳುತ್ತಾರೆ. ಅವರಿಗೆ ಜವಾಬ್ದಾರಿ ನಿಭಾಯಿಸೋಕೆ ಬರುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರ ಕೊರೋನ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಟೀಕಿಸಿದರು.

ಒಂದು ಬೆಳೆ ಬೆಳೆಯಲು ಎರಡರಿಂದ ಮೂರು ಲಕ್ಷ ರೂ.ಗಳು ಬೇಕು. ಅಂತಹದರಲ್ಲಿ ಬೆಳೆ ಬೆಳೆಯುವವರಿಗೆ 5 ರಿಂದ 6 ಸಾವಿರ ರೂ., ಹೂ ಬೆಳೆಗಾರರಿಗೆ 10 ರೂ.ಸಾವಿರ ಪರಿಹಾರ ಸಾಕಾಗುತ್ತದೆಯೆ? ಈ ಸರಕಾರ ಯಾವ ರೈತರಿಗೆ ಏನು ಸಹಾಯ ಮಾಡಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ 26 ಸಾವಿರ ಕೋಟಿ ರೂ. ನಾವು ಇಟ್ಟಿದ್ದ ಯೋಜನಾ ಹಣವಿದೆ. ಅದನ್ನ ಬಳಸಿಕೊಂಡು ಆ ಜನರನ್ನ ಕಾಪಾಡಿ, ಕಾರ್ಮಿಕರನ್ನು ಉಳಿಸಿಕೊಳ್ಳೊಕೆ ಆಗುತ್ತಿಲ್ಲ. ನಾವು ಅಧಿಕಾರದಲ್ಲಿ ಇದ್ದಿದ್ದರೆ ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದೆವು ಎಂದು ಅವರು ಹೇಳಿದರು.

ಲಾಕ್‍ಡೌನ್ ಸಡಿಲಿಕೆಯಿಂದ ಅಪಾಯ

ಲಾಕ್‍ಡೌನ್ ಸಡಿಲಿಕೆಯಿಂದ ಅಪಾಯ ಹೆಚ್ಚಾಗುತ್ತದೆ. ರಾಜ್ಯ ಸರಕಾರಕ್ಕೆ ಯಾವುದೆ ಮುಂದಾಲೋಚನೆಯಿಲ್ಲ. ಸರಕಾರದಲ್ಲಿ ಜಾಗೃತಿ ಹಾಗೂ ಸಮನ್ವಯತೆ ಇಲ್ಲ. ಒಬ್ಬೊಬ್ಬರದ್ದೂ ಒಂದೊಂದು ನಿರ್ಧಾರ. ಪ್ರತಿ ರವಿವಾರ ಲಾಕ್‍ಡೌನ್ ಘೋಷಿಸಿರುವ ಅಗತ್ಯವೇನು? ಎಲ್ಲ ದಿನಗಳು ಬೇರೆ, ರವಿವಾರ ಬೇರೆಯೇ? ಎಂದು ಅವರು ಪ್ರಶ್ನಿಸಿದರು.

ಲಾಕ್ ಡೌನ್ ಸಡಿಲಿಕೆ ಬಗ್ಗೆ ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ. ಆದರೆ, ಈ ವಿಚಾರದಲ್ಲಿ ಪ್ರತಿಪಕ್ಷಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ನಮ್ಮಿಂದ ಯಾವ ಸಲಹೆಯನ್ನು ಪಡೆದಿಲ್ಲ, ತಜ್ಞರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಮುಂಜಾಗರೂಕತೆ ಇಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News