ಖಾಸಗಿ ಶಾಲೆಗಳಿಂದ ಹೆಚ್ಚುವರಿ ಹಣ ವಸೂಲಿ ಆರೋಪ: ಶಿಕ್ಷಣ ಇಲಾಖೆ ಸಹಾಯವಾಣಿಗೆ ದೂರುಗಳ ಸುರಿಮಳೆ

Update: 2020-05-19 16:25 GMT

ಬೆಂಗಳೂರು, ಮೇ 19: ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ಹಲವು ಖಾಸಗಿ ಶಾಲೆಗಳು ಪಾಲಕರಿಂದ ಹೆಚ್ಚುವರಿ ಹಣ ವಸೂಲಿಗೆ ಮುಂದಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ಸಂಬಂಧ ದೂರು ದಾಖಲಿಸಲು ಶಿಕ್ಷಣ ಇಲಾಖೆ ರೂಪಿಸಿದ ಸಹಾಯವಾಣಿಗೆ ಹಲವಾರು ದೂರುಗಳು ದಾಖಲಾಗಿವೆ.

ಸರಕಾರ ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಪಡೆಯುವ ಶುಲ್ಕದಲ್ಲಿ ಹೆಚ್ಚಳ ಮಾಡಬಾರದು ಎಂದು ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯನ್ನು ಲೆಕ್ಕಿಸದೆ ಶಾಲೆಗಳು ಶೇ.10 ರಿಂದ 15 ರಷ್ಟು ಅಧಿಕ ಶುಲ್ಕ ಹೆಚ್ಚಳ ಮಾಡಿಕೊಂಡು ನಿಗದಿತ ಸಮಯದಲ್ಲಿ ಪಾವತಿಸುವಂತೆ ಪಾಲಕರಿಗೆ ಸೂಚಿಸುತ್ತಿವೆ. ಖಾಸಗಿ ಶಾಲೆಗಳ ನಡೆಯಿಂದ ಬೇಸತ್ತಿರುವ ಪಾಲಕರು ದೂರು ದಾಖಲಿಸಲು ಶಿಕ್ಷಣ ಇಲಾಖೆ ರೂಪಿಸಿರುವ ಸಹಾಯವಾಣಿಗೆ ದೂರು ನೀಡಲು ಮುಂದಾಗಿದ್ದು, ಸುಮಾರು 50 ಕ್ಕೂ ಅಧಿಕ ಪಾಲಕರು ದೂರು ದಾಖಲಿಸಿದ್ದಾರೆ. ಸಹಾಯವಾಣಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಅನ್ವಯಿಸಲಿದ್ದು, ಈ ವ್ಯಾಪ್ತಿಗೆ ಮಾತ್ರ ಅನ್ವಯಿಸಲಿದೆ.

ಬೆಂಗಳೂರು ದಕ್ಷಿಣದಲ್ಲಿ 3,611, ಬೆಂಗಳೂರು ಪೂರ್ವದಲ್ಲಿ 2,632 ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲ 1,559 ಶಾಲೆ ಸೇರಿ 7,802 ಶಾಲೆಗಳಿವೆ. ಬಹುತೇಕ ಶಾಲೆಗಳು ಹೆಚ್ಚುವರಿ ಶುಲ್ಕ ಪಡೆಯುತ್ತಿಲ್ಲ. ಕೆಲವು ಪ್ರತಿಷ್ಠಿತ ಶಾಲೆಗಳಷ್ಟೇ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪ್ರತಿನಿತ್ಯ ದೂರವಾಣಿ ಕರೆ ಮಾಡಿ ಪಾಲಕರು ದೂರು ನೀಡುತ್ತಿದ್ದಾರೆ.

ದೂರು ಪರಿಶೀಲನೆ: ಶಿಕ್ಷಣ ಇಲಾಖೆಯು ಪಾಲಕರಿಂದ ದೂರು ಸ್ವೀಕರಿಸಿದ ಬಳಿಕ ಅದರ ನೈಜತೆಯ ಪರಿಶೀಲನೆಗಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪ ನಿರ್ದೇಶಕರಿಗೆ ದೂರು ರವಾನೆ ಮಾಡುತ್ತದೆ. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ದೂರಿನಲ್ಲಿನ ಅಂಶ ನಿಜವೆಂದು ರುಜುವಾದರೆ ನೋಟಿಸ್ ನೀಡಿ, ಏಳು ದಿನದೊಳಗೆ ಉತ್ತರಿಸುವಂತೆ ಆದೇಶಿಸುತ್ತಾರೆ.

ಸರಕಾರಿ ಶಾಲೆಗಳ ಕಡೆ ಪೋಷಕರ ನಡೆ: ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನರು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಿಲ್ಲ ಎಂದು ಅರಿತು ತಮ್ಮ ಮಕ್ಕಳ ವರ್ಗಾವಣೆ ಪತ್ರ ಪಡೆದು ಸರಕಾರಿ ಶಾಲೆಗಳಿಗೆ ದಾಖಲಿಸುತ್ತಿರುವುದು ಕಂಡುಬಂದಿದೆ.

ಸುಳ್ಳು ಮಾಹಿತಿ: ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದಾರೆ ಎಂದು ಆರೋಪ ಬಂದ ಹಿನ್ನೆಲೆಯಲ್ಲಿ ದಕ್ಷಿಣ ವಲಯ-3ರ ವ್ಯಾಪ್ತಿಯಲ್ಲಿ ಶಾಲೆಯೊಂದಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ನಾವು ಕಳೆದ ನಾಲ್ಕು ವರ್ಷದಿಂದ ಪಡೆಯುತ್ತಿದ್ದ ಶುಲ್ಕವನ್ನೇ ಈ ವರ್ಷವೂ ಪಡೆಯುತ್ತಿದ್ದೇವೆ. ದಾಖಲೆಗಳ ಸಮೇತ ನಾವು ಉತ್ತರ ನೀಡುತ್ತೇವೆ ಎಂದು ಆಡಳಿತ ಮಂಡಳಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News