ಭಾರತದ ಪ್ರದೇಶಗಳನ್ನು ತನ್ನದೆಂದು ತೋರಿಸುವ ಹೊಸ ನಕ್ಷೆಗೆ ನೇಪಾಳ ಸಚಿವ ಸಂಪುಟ ಅನುಮೋದನೆ !

Update: 2020-05-19 17:52 GMT

ಕಠ್ಮಂಡು, ಮೇ 19: ಭಾರತದೊಂದಿಗೆ ಗಡಿ ವಿವಾದದ ಮಧ್ಯೆಯೇ, ಲಿಪುಲೆಖ್, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ನೇಪಾಳದ ವ್ಯಾಪ್ತಿಯೊಳಗೆ ಗುರುತಿಸಿದ ಹೊಸ ನಕ್ಷೆಗೆ ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿದೆ.

ಹೊಸ ನಕ್ಷೆಯಲ್ಲಿ ಲಿಂಪಿಯಾಧುರ ಸೇರಿದಂತೆ ಭಾರತದ 335 ಕಿ.ಮೀ ಭೂಭಾಗವನ್ನು ನೇಪಾಳದ ಭೂ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.

ಪ್ರಧಾನಿ ಕೆಪಿ ಶರ್ಮ ಒಲಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದೇಶದ ಹೊಸ ರಾಜಕೀಯ ನಕ್ಷೆಯನ್ನು ಅನುಮೋದಿಸಲಾಗಿದೆ ಎಂದು ನೇಪಾಳದ ವಿತ್ತಸಚಿವ ಮತ್ತು ಸರಕಾರದ ವಕ್ತಾರ ಯುವರಾಜ್ ಖಟಿವಾಡ ಸೋಮವಾರ ಪ್ರಕಟಿಸಿದ್ದಾರೆ. ಹೊಸ ನಕ್ಷೆಯನ್ನು ಭೂನಿರ್ವಹಣೆ ಸಚಿವ ಪದ್ಮಾ ಕುಮಾರಿ ಅರ್ಯಾಲ್ ಸಭೆಯೆದುರು ಮಂಡಿಸಿದ್ದರು.

ಗಡಿಯ ತನ್ನ ಬದಿಯಲ್ಲಿ ಭಾರತವು ಏಕಪಕ್ಷೀಯವಾಗಿ ಇಟ್ಟುಕೊಂಡಿರುವ ಪ್ರದೇಶಗಳು ಸಂಯೋಜನೆಗೊಂಡಿರುವ ಹೊಸ ರಾಜಕೀಯ ನಕ್ಷೆಯನ್ನು ಶೀಘ್ರದಲ್ಲೇ ಸಾರ್ವಜನಿಕರ ಅವಗಾಹನೆಗೆ ತರಲಾಗುವುದು ಎಂದು ನೇಪಾಳ ಸರಕಾರ ಹೇಳಿದೆ. ಸಚಿವ ಸಂಪುಟದ ನಿರ್ಧಾರವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು ಎಂದು ನೇಪಾಳದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ನಾಗರಿಕ ವಾಯುಯಾನ ಸಚಿವ ಯೋಗೇಶ್ ಭಟ್ಟಾರರಿ ಪ್ರತಿಕ್ರಿಯಿಸಿದ್ದಾರೆ.

ಆದರೆ ಸರಕಾರದ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿರುವ ಆಡಳಿತ ಪಕ್ಷದ ಹಿರಿಯ ಸದಸ್ಯ, ನೇಪಾಳ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಸದಸ್ಯ ಗಣೇಶ್ ಶಾ , ದೇಶವು ಕೊರೋನ ವೈರಸ್ ಮಾರಿಯ ವಿರುದ್ಧ ಹೋರಾಡುತ್ತಿರುವ ಈ ಸಮಯದಲ್ಲಿ ತೆಗೆದುಕೊಂಡಿರುವ ನಿರ್ಧಾರವು ಭಾರತ-ನೇಪಾಳದ ಮಧ್ಯೆ ಅನಗತ್ಯ ಉದ್ವಿಗ್ನತೆಗೆ ಕಾರಣವಾಗುತ್ತದೆ ಎಂದಿದ್ದು, ಈ ವಿಷಯವನ್ನು ರಾಜಕೀಯ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಇತ್ಯರ್ಥಗೊಳಿಸಲು ಶೀಘ್ರ ಭಾರತದೊಂದಿಗೆ ಮಾತುಕತೆ ನಡೆಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಭಾರತದೊಂದಿಗಿನ ಗಡಿ ವಿವಾದವನ್ನು ರಾಜತಾಂತ್ರಿಕ ರೀತಿಯಲ್ಲಿ ಇತ್ಯರ್ಥಗೊಳಿಸಲು ಪ್ರಯತ್ನ ಮುಂದುವರಿದಿದೆ . ನೇಪಾಳದ ಅಧಿಕೃತ ನಕ್ಷೆಯನ್ನು ನೇಪಾಳದ ಭೂನಿರ್ವಹಣೆ ಇಲಾಖೆ ಅತೀ ಶೀಘ್ರದಲ್ಲಿ ಬಿಡುಗಡೆಗೊಳಿಸಲಿದೆ ಎಂದು ಕಳೆದ ವಾರ ನೇಪಾಳದ ವಿದೇಶ ವ್ಯವಹಾರ ಸಚಿವ ಪ್ರದೀಪ್ ಕುಮಾರ್ ಗ್ಯವಲಿ ಹೇಳಿಕೆ ನೀಡಿದ್ದರು.

ಅಲ್ಲದೆ ಕಾಲಾಪಾನಿ, ಲಿಪುಲೆಖ್ ಮತ್ತು ಲಿಫಿಯಾಧುರ ಪ್ರದೇಶಗಳನ್ನು ನೇಪಾಳಕ್ಕೆ ಮರಳಿಸಬೇಕು ಎಂಬ ನಿರ್ಣಯವನ್ನು ಕಳೆದ ವಾರ ಸಂಸತ್ತಿನಲ್ಲಿ ನೇಪಾಳದಲ್ಲಿ ಅಧಿಕಾರದಲ್ಲಿರುವ ನೇಪಾಳ ಕಮ್ಯುನಿಸ್ಟ್ ಪಕ್ಷದ ಸಂಸದರು ಮಂಡಿಸಿದ್ದರು. ಕಳೆದ ವಾರ ಸಂಸತ್ತನ್ನುದ್ದೇಶಿಸಿ ಭಾಷಣ ಮಾಡಿದ್ದ ನೇಪಾಳದ ರಾಷ್ಟ್ರಪತಿ ಬಿದ್ಯಾ ಭಂಡಾರಿ, ಲಿಂಪಿಯಾಧುರ, ಕಾಲಾಪಾನಿ ಮತ್ತು ಲಿಪುಲೆಖ್ ನೇಪಾಳದ ಭಾಗವಾಗಿದ್ದು ಈ ಬಗ್ಗೆ ಭಾರತದೊಂದಿಗೆ ಇರುವ ವಿವಾದವನ್ನು ಇತ್ಯರ್ಥಗೊಳಿಸಲು ಸೂಕ್ತ ರಾಜತಾಂತ್ರಿಕ ವಿಧಾನ ಅನುಸರಿಸಲಾಗುವುದು ಎಂದಿದ್ದರು.

ಈ ತಿಂಗಳ ಆರಂಭದಲ್ಲಿ ಲಿಪುಲೆಖ್ ಪಾಸ್ ಅನ್ನು ಉತ್ತರಾಖಂಡದ ಧರ್ಚುಲಾ ಜಿಲ್ಲೆಯ ಜೊತೆ ಸಂಪರ್ಕಿಸುವ , 80 ಕಿ.ಮೀ ಉದ್ದದ ಹೊಸ ರಸ್ತೆಯನ್ನು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನೇಪಾಳ, ಭಾರತದ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನಾ ಪತ್ರವನ್ನು ಹಸ್ತಾಂತರಿಸಿತ್ತು.

1816ರ ಸುಗೌಲಿ ಒಪ್ಪಂದ ಆಧಾರ 1816ರಲ್ಲಿ ನೇಪಾಳ ಮತ್ತು ಅಂದಿನ ಬ್ರಿಟಿಷ್ ಆಡಳಿತದ ಮಧ್ಯೆ ಸಹಿ ಹಾಕಲಾದ ಸುಗೌಲಿ ಒಪ್ಪಂದದ ಆಧಾರದಲ್ಲಿ ಈ ಹೊಸ ನಕ್ಷೆಯನ್ನು ನೇಪಾಳ ಸರಕಾರ ಅನುಮೋದಿಸಿದೆ ಎಂಬ ಕಠ್ಮಂಡು ಪೋಸ್ಟ್ ಪತ್ರಿಕೆಯ ವರದಿಯನ್ನು ಪಿಟಿಐ ಉಲ್ಲೇಖಿಸಿದೆ. ಈ ಒಪ್ಪಂದಕ್ಕೆ ಪೂರಕವಾಗಿ ಸಲ್ಲಿಸಿರುವ ದಾಖಲೆಯಲ್ಲಿ ಕಾಳಿ ನದಿ ಉಗಮಿಸುವ ಲಿಂಪಿಯಾಧುರವು ಭಾರತದೊಂದಿಗೆ ನೇಪಾಳದ ಗಡಿಯಾಗಿದೆ ಎಂದು ಉಲ್ಲೇಖಿಸಿರುವುದಾಗಿ ಪತ್ರಿಕೆಯ ವರದಿ ತಿಳಿಸಿದೆ.

ವಿವಾದಿತ ಗಡಿಭಾಗ ಲಿಪುಲೆಖ್ ಪಾಸ್

 ಕಾಲಾಪಾನಿ ಬಳಿಯಿರುವ ಲಿಪುಲೆಖ್ ಪಾಸ್ ಉಭಯ ದೇಶಗಳ ನಡುವಿನ ವಿವಾದಿತ ಗಡಿ ಪ್ರದೇಶವಾಗಿದೆ. ಇದು ತನ್ನ ಪ್ರದೇಶದ ಅವಿಭಾಜ್ಯ ಅಂಗ ಎಂದು ಎರಡೂ ರಾಷ್ಟ್ರಗಳು ಹೇಳಿಕೊಂಡಿವೆ. ಭಾರತವು ಉತ್ತರಾಖಂಡದ ಪಿಥೊರಗಢ ಜಿಲ್ಲೆಯ ಭಾಗವೆಂದು, ನೇಪಾಳವು ಧರ್ಚುಲಾ ಜಿಲ್ಲೆಯ ಭಾಗವೆಂದು ಹೇಳುತ್ತಿದೆ. ಪಿಥೊರಗಢ ಜಿಲ್ಲೆಯಲ್ಲಿ ಇತ್ತೀಚೆಗೆ ಉದ್ಘಾಟಿಸಿದ ಹೊಸ ರಸ್ತೆ ತನ್ನ ಭೂವ್ಯಾಪ್ತಿಯಲ್ಲೇ ಇದೆ ಎಂದು ಭಾರತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News