'ಜಲಜೀವನ್ ಮಿಷನ್' ಯೋಜನೆಯಡಿ ರಾಜ್ಯದ 15 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ: ಸಿಎಂ ಬಿಎಸ್‌ವೈ

Update: 2020-05-20 14:47 GMT

ಬೆಂಗಳೂರು, ಮೇ 20: ಕೇಂದ್ರ ಸರಕಾರದ 'ಜಲಜೀವನ್ ಮಿಷನ್ ಯೋಜನೆ'ಯಡಿ ಒಟ್ಟು 1,150 ಕೋಟಿ ರೂ.ವೆಚ್ಚದಲ್ಲಿ ರಾಜ್ಯದ 15 ಲಕ್ಷ ಕುಟುಂಬಗಳಿಗೆ ನಲ್ಲಿ(ನಳ) ನೀರಿನ ಸಂಪರ್ಕ ಕಲ್ಪಿಸಲು ಉದ್ದೇಶಿಸಿದ್ದು, ಮುಂದಿನ ಮೂರು ವರ್ಷಗಳಲ್ಲಿ ಈ ಗುರಿ ಸಾಧಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 'ಜಲಜೀವನ್ ಮಿಷನ್ ಯೋಜನೆ' ಅನುಷ್ಠಾನ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, 'ಜಲಜೀವನ್ ಮಿಷನ್ ಯೋಜನೆ' ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದ ಯೋಜನೆಯಾಗಿದ್ದು, ತಲಾ ಶೆ.50ರಷ್ಟು ಅನುದಾನ ಒದಗಿಸಲಾಗುತ್ತಿದೆ ಎಂದರು.

ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಮನೆಗಳ ಬಳಿಗೆ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದ್ದು, ಈ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ರಾಜ್ಯ ಸರಕಾರ ಕ್ರಮ ವಹಿಸಲಿದೆ ಎಂದ ಅವರು, ಜಲಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಶೇಷ ಆಸ್ಥೆ ವಹಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ಜಲಶಕ್ತಿ ಮಿಷನ್ ಯೋಜನೆಗೆ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ. ಉದ್ಯೋಗ ಖಾತರಿ ಯೋಜನೆ ಮತ್ತು 15ನೆ ಹಣಕಾಸು ಆಯೋಗದ ಅನುದಾನವನ್ನು ಸಂಯೋಜಿಸಿ 2022-23ರೊಳಗೆ ರಾಜ್ಯಾದ್ಯಂತ ಈ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದರು.

ಆರಂಭದಲ್ಲಿ ಈಗಾಗಲೇ ಜಲಸಂಪನ್ಮೂಲ ಲಭ್ಯವಿರುವ ಗ್ರಾಮಗಳಲ್ಲಿ 'ಜಲಜೀವನ್ ಮಿಷನ್ ಯೋಜನೆ' ಅನುಷ್ಠಾನಗೊಳಿಸಲಾಗುವುದು. ಆ ಬಳಿಕ ಹಂತ-ಹಂತವಾಗಿ ಗ್ರಾಮಗಳಿಗೆ ನೀರಿನ ಮೂಲವನ್ನು ನೋಡಿಕೊಂಡು ಎಲ್ಲ ಗ್ರಾಮಗಳಿಗೂ ನೀರು ಪೂರೈಕೆ ಮಾಡಲು ಕ್ರಮ ವಹಿಸಬೇಕಿದೆ. ಇದೊಂದು ಮಹತ್ವದ ಯೋಜನೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News