ಕೊರೋನ ಎಫೆಕ್ಟ್: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯೆ ಮೇಲೆ ಗಾಢ ಪರಿಣಾಮ ಸಾಧ್ಯತೆ

Update: 2020-05-20 17:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 20: ಎಲ್ಲೆಡೆ ಕೊರೋನ ಅಟ್ಟಹಾಸ ಮೆರೆಯುತ್ತಿದೆ. ಇದು ಕಡಿಮೆಯಾಗುತ್ತಿರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ, ವೈರಾಣು ಜತೆಯಲ್ಲಿಯೇ ಬದುಕಬೇಕಾದ ಅನಿವಾರ್ಯವಿದೆ. ಅದರ ಪರಿಣಾಮ ನೇರವಾಗಿ ನಗರದ ಸಂಚಾರದಟ್ಟಣೆಯ ಮೇಲೆ ಗಾಢವಾದ ಪರಿಣಾಮ ಉಂಟಾಗಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಲಾಕ್‍ಡೌನ್ ಸಡಿಲಿಕೆ ಬಳಿಕ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಸಾರ್ವಜನಿಕರು ಸಮೂಹ ಸಾರಿಗೆಯತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದು, ಸ್ವಂತ ವಾಹನಗಳಲ್ಲಿ ಓಡಾಡಲು ಆರಂಭಿಸುವ ನಿರೀಕ್ಷೆ ಇದೆ. ಇದು ಹೀಗೆ ಮುಂದುವರಿದರೆ ಮುಂದಿನ ಆರೇಳು ತಿಂಗಳು ನಗರದಲ್ಲಿ ಸಂಚಾರದಟ್ಟಣೆ ಅಧಿಕವಾಗಲಿದ್ದು, ಮಾಲಿನ್ಯವೂ ಅಧಿಕವಾಗುವ ಸಾಧ್ಯತೆಯಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕಷ್ಟವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

70-75 ಲಕ್ಷ ವಾಹನ ಸಂಚಾರ: ನಗರದಲ್ಲಿ ಎಲ್ಲ ಮಾದರಿಯ ಸುಮಾರು 85 ಲಕ್ಷ ವಾಹನಗಳಿದ್ದು, ನಿತ್ಯ 45-50 ಲಕ್ಷ ವಾಹನಗಳು ಸಂಚರಿಸುತ್ತಿದ್ದವು. ಕೋವಿಡ್-19 ಕಾಣಿಸಿದ ಬಳಿಕ ದಿನಂಪ್ರತಿ 20-25 ಸಾವಿರಕ್ಕೆ ಆ ಸಂಖ್ಯೆ ಇಳಿದಿತ್ತು. ಲಾಕ್‍ಡೌನ್ ಸಡಿಲಿಕೆ ಬಳಿಕ ಸಂಚಾರದಟ್ಟಣೆ ಕ್ರಮೇಣ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಆರೇಳು ತಿಂಗಳು ನಗರದಲ್ಲಿ 70-75 ಲಕ್ಷ ವಾಹನಗಳು ಓಡಾಡುವ ಸಾಧ್ಯತೆಯಿದೆ. ಆಗ ಅನಿವಾರ್ಯವಾಗಿ ನಗರದ ಸಿಬಿಡಿ ಹಾಗೂ ಹೈಡೆನ್ಸಿಟಿಕಾರಿಡಾರ್ ಪ್ರದೇಶಗಳು ಸೇರಿ ಎಲ್ಲೆಡೆ ಭಾರೀ ಸಂಚಾರದಟ್ಟಣೆ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸುರಕ್ಷತಾ ದೃಷ್ಟಿಯಿಂದ ಆದಷ್ಟು ಸಮೂಹ ಸಾರಿಗೆಯಲ್ಲೇ ಸಂಚರಿಸಲು ಮನವಿ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಖಾಸಗಿ-ಸರಕಾರಿ ನಿರ್ಧಾರ ಬಳಿಕ ತೀರ್ಮಾನ: ಖಾಸಗಿ ಕಂಪನಿಯ ವಾಹನಗಳ(ಉದ್ಯೋಗಿಗಳನ್ನು ಕರೆದೊಯ್ಯುವವರು ಹಾಗೂ ಇತರೆ ಮಾಲಕರು ಹಾಗೂ ಸಮೂಹ ಸಾರಿಗೆ ನಿಗಮಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಕರೆದೊಯ್ಯಬೇಕಿರುವುದರಿಂದ ಅನಿವಾರ್ಯವಾಗಿ ಹೆಚ್ಚಿನ ವಾಹನಗಳು ಕಾರ್ಯಾಚರಣೆ ನಡೆಸುತ್ತವೆ. ಹೀಗಾಗಿ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ತೆಗೆದುಕೊಳ್ಳುವ ನಿರ್ಧಾರದ ಬಳಿಕ ಸಂಚಾರ ವಿಭಾಗದಿಂದ ಸಂಚಾರ ನಿರ್ವಹಣೆಗೆ ಏನೆಲ್ಲಾ ಕ್ರಮಕೈಗೊಳ್ಳಬೇಕೆಂದು ನಿರ್ಧರಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.

ವಾಯುಮಾಲಿನ್ಯ ಹೆಚ್ಚಳ: ನಿರೀಕ್ಷೆಗೂ ಮೀರಿದ ವಾಹನಗಳಿಂದ ಸಂಚಾರದಟ್ಟಣೆ ಜತೆಗೆ ವಾಯುಮಾಲಿನ್ಯ ಕೂಡ ಹೆಚ್ಚಾಗುತ್ತದೆ. ಮಾರ್ಚ್ ಮತ್ತು ಎಪ್ರಿಲ್‍ನಲ್ಲಿ ನಗರದಲ್ಲಿ ವಾಯುಮಾಲಿನ್ಯ ಪರಿಣಾಮ ಶೇ.10-20ರಷ್ಟು ಇತ್ತು. ಸಮೂಹ ಸಾರಿಗೆ ಕಡಿಮೆಯಾಗಿ, ಸ್ವಂತ ವಾಹನಗಳು ಹೆಚ್ಚಾದರೆ ಅದು ಶೇ.100ಕ್ಕೆ ತಲುಪುವ ಸಾಧ್ಯತೆಯಿದೆ. ಈ ಕೂಡಲೇ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಕ್ರಮಕೈಗೊಳ್ಳದಿದ್ದರೆ ಸಂಚಾರ ನಿಯಂತ್ರಣ ಕಷ್ಟವಾಗಲಿದೆ ಎಂದು ಸಂಚಾರತಜ್ಞ ಎಂ.ಎನ್.ಶ್ರೀಹರಿ ತಿಳಿಸಿದರು.

ಡಿಜಿಟಲ್ ಪ್ರಕರಣ ದಾಖಲು: ನಗರದಲ್ಲಿ ನಿತ್ಯ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ 'ಡಿಜಿಟಲ್ ಮಾದರಿ'ಯಲ್ಲಿ  ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಲಾಕ್‍ಡೌನ್ ಜಾರಿಯಾದ ಸಂದರ್ಭದಲ್ಲಿ ವಾಹನಗಳ ದಟ್ಟಣೆಕಡಿಮೆ ಇತ್ತು. ಜತೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುತ್ತಿರಲಿಲ್ಲ. ಬಳಿಕ ಎಚ್ಚರಿಕೆಗಾಗಿ ವಾಹನ ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News