ರೈಲ್ವೆ ಕಾಯ್ದಿರಿಸುವಿಕೆ ಕೌಂಟರ್ ಇಂದು ಆರಂಭ

Update: 2020-05-22 04:07 GMT
ಫೈಲ್ ಫೋಟೊ

ಹೊಸದಿಲ್ಲಿ: ಲಾಕ್‌ಡೌನ್ ಪೂರ್ವದ ಸ್ಥಿತಿಗೆ ಮರಳುವ ಸೂಚನೆಯಾಗಿ, ರೈಲ್ವೆ ಸಚಿವಾಲಯ ಶುಕ್ರವಾರದಿಂದ ಹಂತ ಹಂತವಾಗಿ ರೈಲ್ವೆ ಟಿಕೆಟ್ ಕಾಯ್ದಿರಿಸುವಿಕೆ ಕೌಂಟರ್‌ಗಳನ್ನು ತೆರೆಯಲು ನಿರ್ಧರಿಸಿದೆ.

200 ಹೊಸ ರೈಲುಗಳಿಗೆ ಕಾಯ್ದಿರಿಸುವಿಕೆಗಾಗಿ ಐಆರ್‌ಸಿಟಿಸಿ ತನ್ನ ಗವಾಕ್ಷಿಯನ್ನು ಗುರುವಾರ ತೆರೆದ ಬಳಿಕ ಬುಕ್ಕಿಂಗ್ ಬಿರುಸಿನಿಂದ ಸಾಗಿರುವ ನಡುವೆಯೇ, ಹಲವು ನಗರಗಳಲ್ಲಿ ಕಾಯ್ದಿರಿಸುವಿಕೆ ರದ್ದುಪಡಿಸುವ ಕಾರ್ಯವೂ ಆರಂಭವಾಗಿದೆ. ಇದು ಜನ ಉದ್ಯೋಗಕ್ಕೆ ಮರಳಲು ಬಯಸಿದ್ದಾರೆ ಎನ್ನುವುದರ ಸೂಚಕ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.

ರೈಲು ಸೇವೆಗಳು ಸಹಜ ಸ್ಥಿತಿಯತ್ತ ಬರುತ್ತಿವೆ ಎನ್ನುವುದು ಧನಾತ್ಮಕ ಸೂಚಕ. ಇದು ಜನರು ತಮ್ಮ ಕೆಲಸದ ಸ್ಥಳಕ್ಕೆ ಹೋಗಲು ನೆರವಾಗಲಿದೆ. ಶುಕ್ರವಾರದಿಂದ 1.7 ಲಕ್ಷ ಸಾಮಾನ್ಯ ಸೇವಾ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಪ್ರಕಟಿಸಿದ್ದಾರೆ. ಇನ್ನಷ್ಟು ರೈಲು ಸೇವೆಗಳು ಆರಂಭವಾದ ಬಳಿಕ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ರೈಲು ನಿಲ್ದಾಣಗಳ ಕೌಂಟರ್‌ಗಳ ಜತೆಗೆ, ಅಂಚೆ ಕಚೇರಿಗಳಲ್ಲಿ, ಯಾತ್ರಿ ಟಿಕೆಟ್ ಸುವಿಧಾ ಕೇಂದ್ರಗಳ ಲೈಸನ್ಸ್ ಹೊಂದಿರುವವರಲ್ಲಿ ಮತ್ತು ಐಆರ್‌ಸಿಟಿಸಿ ಅಧಿಕೃತ ಏಜೆಂಟರಲ್ಲಿ ಟಿಕೆಟ್ ಕಾಯ್ದಿರಿಸಲು ಮತ್ತು ರದ್ದುಪಡಿಸಲು ಅವಕಾಶವಿದೆ. ಸ್ಥಳೀಯ ಸ್ಥಿತಿಗತಿ ಮತ್ತು ಜನರ ಬೇಡಿಕೆಯ ಆಧಾರದಲ್ಲಿ ರಿಸರ್ವೇಶನ್ ಕೌಂಟರ್‌ಗಳನ್ನು ಆರಂಭಿಸುವ ದಿನಾಂಕ ಘೋಷಿಸಲು ಆಯಾ ವಲಯಗಳಿಗೆ ಅಧಿಕಾರ ನೀಡಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News