ಸಂಗೀತ ವಿದುಷಿ ಶ್ಯಾಮಲಾ ಜಿ.ಭಾವೆ ನಿಧನ

Update: 2020-05-22 11:56 GMT

ಬೆಂಗಳೂರು, ಮೇ 22:  ಸುಗಮ ಸಂಗೀತ, ಕರ್ನಾಟಕ, ಹಿಂದೂಸ್ತಾನಿ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅದ್ಭುತ ಸಾಧನೆ ಮಾಡಿದ ಉಭಯ ಗಾನ ವಿದುಷಿ ಗಾಯಕಿ, ಸಂಗೀತ ಸಂಯೋಜಕಿ ಶಾಮಲಾ ಜಿ. ಭಾವೆ(79) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದು, ಇಲ್ಲಿನ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವುದಕ್ಕೆ ನಿರ್ಬಂಧವಿದ್ದುದರಿಂದ ಅವರ ಕುಟುಂಬ ವರ್ಗ ಹಾಗೂ ಕೆಲವು ಬಂಧುಗಳು, ಶಿಷ್ಯರು ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮೃತರು ಅವಿವಾಹಿತರಾಗಿದ್ದು, ಶೇಷಾದ್ರಿಪುರಂನಲ್ಲಿ ನೆಲೆಸಿದ್ದರು. ಇವರು ಮೂರು ವರ್ಷಗಳಿಂದ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ಒಬ್ಬ ಸಹೋದರಿ (ನಿರ್ಮಲಾ) ಇದ್ದು, ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಮಾರ್ಚ್‍ನಲ್ಲಿ ಸಹೋದರಿಯನ್ನು ನೋಡಲು ನಿರ್ಮಲಾ ಅವರ ಕುಟುಂಬ ವರ್ಗ ಬೆಂಗಳೂರಿಗೆ ಬಂದಿತ್ತು. ನಂತರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವರು ಇಲ್ಲಿಯೇ ಇದ್ದರು. ಹೀಗಾಗಿ ಶ್ಯಾಮಲಾ ಭಾವೆಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಶ್ಯಾಮಲಾ ಅವರ ಕುರಿತು: ಬೆಂಗಳೂರಿನಲ್ಲಿ ತಂದೆ ಆಚಾರ್ಯ ಪಂಡಿತ್ ಗೋವಿಂದ ವಿಠಲ್ ಭಾವೆ ಹಾಗೂ ವಿದುಷಿ ಲಕ್ಷ್ಮಿ ಜಿ.ಭಾವೆ ದಂಪತಿಗಳ ಮಗಳಾಗಿ 1941 ಮಾರ್ಚ್ 14 ರಂದು ಜನಿಸಿದರು. ಶ್ಯಾಮಲಾರದ್ದು ಮರಾಠಿ ಕುಟುಂಬವಾಗಿದ್ದರೂ ಕನ್ನಡವನ್ನು ಉಸಿರಾಗಿಸಿಕೊಂಡಿದ್ದರು. ತಂದೆ ಗೋವಿಂದ ವಿಠಲ್ ಭಾವೆ 1930 ರಲ್ಲಿ ಶೇಷಾದ್ರಿಪುರದ ನೆಹರು ವೃತ್ತದಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು.

ಶ್ಯಾಮಲಾ ಅವರದು ಸಂಗೀತ ಹಾಗೂ ರಂಗಭೂಮಿ ಪರಂಪರೆಯ ಮನೆತನ. ಅವರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯಲ್ಲಿ ಖ್ಯಾತಿ ಹೊಂದಿದ್ದವರು. ತಂದೆ ಗೋವಿಂದ ವಿಠಲ ಭಾವೆ ಗಾಯಕರಷ್ಟೇ ಅಲ್ಲದೆ ಹದಿನಾಲ್ಕು ವಾದ್ಯ ನುಡಿಸಬಲ್ಲ ಪ್ರತಿಭಾನ್ವಿತರಾಗಿದ್ದರು. ಶ್ಯಾಮಲಾ ತಾಯಿ ಲಕ್ಷ್ಮೀ ಭಾವೆ ಕೂಡ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದಿದ್ದರು.

ಇಂತಹ ಸಂಗೀತ ಮನೆತನದಲ್ಲಿ ಜನಿಸಿದ ಶ್ಯಾಮಲಾ ಅವರಿಗೆ 3ನೇ ವಯಸ್ಸಿನಲ್ಲಿ ಸಂಗೀತ ಕಲಿಕೆಗೆ ನಾಂದಿಯಾಯಿತು. 6ನೇ ವಯಸ್ಸಿನಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಇವರದು. 12ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನಡೆಸಿಕೊಟ್ಟ ಖ್ಯಾತಿ ಶ್ಯಾಮಲಾ ಜಿ ಭಾವೆ ಅವರದು. ತಂದೆ-ತಾಯಿಯರಿಂದ ಹಿಂದೂಸ್ಥಾನಿ ಸಂಗೀತವನ್ನೂ, ಬಿ. ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಲ್ಲಿ ಕರ್ನಾಟಕ ಸಂಗೀತದ ತಾಲೀಮು ಪಡೆದು ಉಭಯಗಾನ ವಿದುಷಿ ಎಂಬ ಖ್ಯಾತಿ ಗಳಿಸಿದರು.

ಶ್ಯಾಮಲಾ ಅವರ ಸಾಧನೆ: ಶ್ಯಾಮಲಾ ಭಾವೆ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಶಿಷ್ಯರು, ಅಭಿಮಾನಿಗಳು ‘ಸ್ವರ ಸಾಧನಾ’ ಎಂಬ ಅಭಿನಂದನಾ ಗ್ರಂಥ ಅರ್ಪಿಸಿದ್ದಾರೆ.

ಪ್ರಶಸ್ತಿ ಹಾಗೂ ಗೌರವ: ಉಭಯಗಾನ ವಿಶಾರದೆ, ಉಭಯ ಗಾನ ವಿದುಷಿ, ಕರ್ನಾಟಕ ರಾಜ್ಯೋತ್ಸವ, ಗಾನ ಮಾಧುರಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಅಮೆರಿಕಾದ ಹ್ಯೂಸ್ಟನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್(2007), ಭಾರತ ಗೌರವ್, ‘ವರ್ಷದ ಮಹಿಳೆ’(1997), ಗಾನ ಕೋಕಿಲ, ಕೃಷ್ಣಗಾನ ಮಾಧುರಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅನೇಕ ಚಲನಚಿತ್ರ, ಸಾಕ್ಷಚಿತ್ರ, ಗ್ರಾಮಫೋನ್ ಹಾಗೂ ಕ್ಯಾಸೆಟ್‍ಗಳಲ್ಲಿ ಧ್ವನಿ ನೀಡಿ, ಸಂಗೀತ ನಿರ್ದೇಶನ ಮಾಡಿದ್ದಾರೆ. ಒಂಭತ್ತು ಭಾಷೆಗಳ ಸುಮಾರು 1500ಕ್ಕೂ ಹೆಚ್ಚಿನ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News