ಮುಂಬೈನಿಂದ ಬಿಹಾರಕ್ಕೆ ಹೊರಟಿದ್ದ ಮೂವರು ವಲಸೆ ಕಾರ್ಮಿಕರು ಟ್ರಕ್ ನಡಿ ಸಿಲುಕಿ ಸಾವು

Update: 2020-05-22 18:31 GMT

ಮಿರ್ಜಾಪುರ (ಉತ್ತರಪ್ರದೇಶ): ಮುಂಬೈನಿಂದ ಬಿಹಾರಕ್ಕೆ ಹೊರಟಿದ್ದ ಮೂವರು ವಲಸೆ ಕಾರ್ಮಿಕರು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಡಂಪರ್ ಟ್ರಕ್ ಅಡಿ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿದೆ. ಶುಕ್ರವಾರ ಬೆಳಿಗ್ಗೆ ಲಾಲ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಹಿ ಕಾಳಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.

ಏಳು ಮಂದಿ ವಲಸೆ ಕಾರ್ಮಿಕರು ಮುಂಬೈನಿಂದ ಟೊಯೋಟಾ ಇನ್ನೋವಾ ಕಾರು ಬಾಡಿಗೆಗೆ ಪಡೆದು ಬಿಹಾರಕ್ಕೆ ಹೊರಟಿದ್ದರು. ಈ ಪೈಕಿ ರಾಜು ಸಿಂಗ್ (26), ಸೌರಭ್ ಸಿಂಗ್ (28) ಮತ್ತು ಅಮಿತ್ ಕುಮಾರ್ ಸಿಂಗ್ (23) ಬಿಹಾರದ ಗೋಪಾಲ್‌ಗಂಜ್ ನಿವಾಸಿಗಳಾಗಿದ್ದು, ವಿಶಾಲ್ ಕುಮಾರ್ ಪಾಸ್ವಾನ್ (27), ಮುನ್ನಾ ಸಿಂಗ್ (28), ವಿಕ್ರಮ್ ಕುಮಾರ್ (27) ಮತ್ತು ರೋಹಿತ್ ಪಾಸ್ವಾನ್ (23) ವೈಶಾಲಿಯವರು ಎಂದು ಪೊಲೀಸರು ಹೇಳಿದ್ದಾರೆ.

ಕಾರು ಚಾಲಕನಿಗೆ ದಣಿವಾದ್ದರಿಂದ ಶುಕ್ರವಾರ ನಸುಕಿನಲ್ಲಿ ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿದ್ದ. ಎಲ್ಲರೂ ಕಾರಿನಿಂದ ಇಳಿದು ರಸ್ತೆ ಬದಿ ನಿದ್ರಿಸಿದ್ದರು. ವೇಗವಾಗಿ ಬಂದ ಡಂಪರ್ ಟ್ರಕ್ ಅವರ ಮೇಲೆ ಹರಿದು ಹೋಗಿದೆ. ರಾಜು, ಅಮಿತ್ ಹಾಗೂ ಸೌರಭ್ ಸ್ಥಳದಲ್ಲೇ ಮೃತಪಟ್ಟರು. ಉಳಿದವರು ಗಾಯಗೊಂಡಿದ್ದಾರೆ. ಚಾಲಕ ಹಾಗೂ ಕಾರು ಸುರಕ್ಷಿತವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಟ್ರಕ್ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಅತಿವೇಗದ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಲಾಲ್‌ಗಂಜ್ ಠಾಣಾಧಿಕಾರಿ ಹರಿಶ್ಚಂದ್ರ ಹೇಳಿದ್ದಾರೆ.

ಮೂವರು ವಲಸೆ ಕಾರ್ಮಿಕರ ಧಾರುಣ ಸಾವಿಗೆ ಮುಖ್ಯಮಂತ್ರಿ ಆದಿತ್ಯನಾಥ್ ತೀವ್ರ ಸಂತಾಪ ಸೂಚಿಸಿದ್ದು, 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಿದ್ದಾರೆ. ಮೃತರ ದೇಹಗಳನ್ನು ಹುಟ್ಟೂರಿಗೆ ಒಯ್ಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News