ಉತ್ತರ ಪ್ರದೇಶದ ಗೋರಖ್ ಪುರ್ ಬದಲು ಒಡಿಶಾದ ರೂರ್ಕೆಲಾ ತಲುಪಿದ ವಲಸೆ ಕಾರ್ಮಿಕರಿದ್ದ ರೈಲು!

Update: 2020-05-23 10:39 GMT

ಗೋರಖಪುರ್: ಮೇ 21ರಂದು ಮಹಾರಾಷ್ಟ್ರದ ವಸಾಯ್ ರೋಡ್ ನಿಲ್ದಾಣದಿಂದ ಉತ್ತರ ಪ್ರದೇಶದ ಗೋರಖಪುರ್‍ಗೆ ವಲಸಿಗ ಕಾರ್ಮಿಕರನ್ನು ಹೊತ್ತು ಹೊರಟ ರೈಲು ಗೋರಖಪುರ್ ತಲುಪದೆ ಇಂದು ಬೆಳಿಗ್ಗೆ ಅಲ್ಲಿಂದ ಸುಮಾರು 750 ಕಿಮೀ ದೂರದ ಒಡಿಶಾದ ರೂರ್ಕೆಲಾ ರೈಲು ನಿಲ್ದಾಣ ತಲುಪಿದೆ.

ಇದರಿಂದ ಆಕ್ರೋಶಗೊಂಡ ರೈಲು ಪ್ರಯಾಣಿಕರು ಹೀಗೇಕಾಯಿತು ಎಂದು ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಯಾವುದೋ ಸಮಸ್ಯೆಯಿಂದ ರೈಲು ಚಾಲಕನಿಗೆ ದಾರಿ ತಪ್ಪಿದೆ ಎಂಬ ಸಬೂಬು ನೀಡಿದ್ದಾರೆ.

ಕೊನೆಗೆ ಈ ಪ್ರಮಾದದ ಕುರಿತಂತೆ ಸ್ಪಷ್ಟೀಕರಣ ನೀಡಿದ ರೈಲ್ವೆ ಸಚಿವಾಲಯ, “ಕೆಲ ಶ್ರಮಿಕ್ ರೈಲುಗಳನ್ನು ಬೇರೆ ಮಾರ್ಗಗಳಲ್ಲಿ ಕಳುಹಿಸಲಾಗಿದೆ. ದಟ್ಟಣೆ  ಕಡಿಮೆ ಮಾಡುವ ಉದ್ದೇಶದಿಂದ ಕೆಲ ರೈಲುಗಳನ್ನು ರೂರ್ಕೆಲಾ ಮೂಲಕ ಬಿಹಾರ ಕಡೆಗೆ ತೆರಳುವಂತೆ ಮಾಡಲಾಗಿದೆ'' ಎಂದು ಹೇಳಿದೆ.

ಆದರೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕರಿಗೆ ಈ ಮಾಹಿತಿ ಏಕೆ ನೀಡಲಾಗಿಲ್ಲ ಎಂಬ ಪ್ರಶ್ನೆಯಿದೆ. ಮತ್ತೆ ಗೋರಖಪುರ್‍ಗೆ ರೈಲು ಯಾವಾಗ ಹೊರಡುವುದೆಂಬುದರ ಕುರಿತೂ ಕಾರ್ಮಿಕರಿಗೆ ಸುಳಿವಿಲ್ಲ. ರೈಲಿನಲ್ಲಿ ನೀರಿನ ಕೊರತೆಯೂ ಇದೆ ಎಂದು ಕೆಲವರು ದೂರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News