ಮುಂಬೈಯ 1.75 ಲಕ್ಷ ಜನರಿಗೆ ಶೆಫ್ ವಿಕಾಸ್ ಖನ್ನಾರಿಂದ ‘ಈದ್ ಔತಣ’

Update: 2020-05-23 10:45 GMT

ನ್ಯೂಯಾರ್ಕ್ : ಮಿಷೆಲಿನ್-ಸ್ಟಾರ್ ಶೆಫ್ ವಿಕಾಸ್ ಖನ್ನಾ ಅವರು ಮುಂಬೈಯಲ್ಲಿ ಜಗತ್ತಿನ ಅತ್ಯಂತ ದೊಡ್ಡ ಈದ್ ಔತಣ ನೀಡಲು ಸಜ್ಜಾಗಿದ್ದು, ಕೋವಿಡ್-19ನಿಂದ ಕಂಗೆಟ್ಟಿರುವ ಮುಂಬೈಯ ಸುಮಾರು 1.75 ಲಕ್ಷ ಜನರಿಗೆ ಔತಣ ನೀಡುವ ಇಂಗಿತ ಹೊಂದಿದ್ದಾರೆ. ವಿಕಾಸ್ ಖನ್ನಾ ಅವರು ಈಗಾಗಲೇ ದೇಶದ 79 ನಗರಗಳ ಸಾವಿರಾರು ಬಡವರಿಗೆ  ಆಹಾರ ಸಾಮಗ್ರಿ ವಿತರಿಸಿದ್ದಾರೆ.

ಈದ್ ಔತಣಕ್ಕಾಗಿ ಆಹಾರವನ್ನು ಹಾಜಿ ಅಲಿ ದರ್ಗಾದಲ್ಲಿ ಸಂಗ್ರಹಿಸಿ ಅಲ್ಲಿಂದ ಟ್ರಕ್‍ಗಳಲ್ಲಿ ಸಾಗಿಸಿ ಮುಹಮ್ಮದ್ ಅಲಿ ರೋಡ್, ಧಾರಾವಿ ಹಾಗೂ ಮಾಹಿಮ್ ದರ್ಗಾ ಪ್ರದೇಶಗಳಲ್ಲಿ 200 ಸ್ವಯಂಸೇವಕರು  ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯ ಸಹಾಯದೊಂದಿಗೆ ಸುರಕ್ಷಿತ ಅಂತರ ಕಾಪಾಡುವುದರೊಂದಿಗೆ ವಿತರಿಸಲಾಗುವುದು.

ಒಂದು ಲಕ್ಷ ಕೆಜಿಗೂ ಅಧಿಕ ತೂಕದ ಆಹಾರ ಧಾನ್ಯಗಳು, ಒಣ ಹಾಗೂ ತಾಜಾ ಹಣ್ಣುಗಳು, ಸಾಂಬಾರ ಪದಾರ್ಥಗಳು, ಅಡುಗೆ ಪಾತ್ರೆಗಳು, ಸಿಹಿತಿಂಡಿಗಳು ಹಾಗೂ ಹಣ್ಣಿನ ರಸಗಳು ಈ ಔತಣಕೂಟ ಪ್ಯಾಕೇಜ್‍ನಲ್ಲಿ ಸೇರಿವೆ ಎಂದು ಖನ್ನಾ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಬೆನ್ನಲ್ಲೇ ಹಲವಾರು ಮಂದಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಅವರ ಈ  ಉದಾತ್ತ ಕಾರ್ಯಕ್ಕೆ ಈಗಾಗಲೇ ಹಲವು ಪ್ರಮುಖ ಆಹಾರ ಬ್ರ್ಯಾಂಡ್‍ಗಳು, ಸಂಸ್ಥೆಗಳು ಹಾಗೂ ಕಂಪೆನಿಗಳು ನೆರವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News