ಬೆಂಗಳೂರು: ಪೊಲೀಸ್ ಪೇದೆಗೆ ಕೊರೋನ ಸೋಂಕು ದೃಢ; ಠಾಣೆಯ ಸಿಬ್ಬಂದಿಗೆ ಹೆಚ್ಚಿದ ಆತಂಕ

Update: 2020-05-23 12:58 GMT

ಬೆಂಗಳೂರು, ಮೇ 23: ನಗರದ ಚಾಮರಾಜಪೇಟೆ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಠಾಣೆಯ ಸಿಬ್ಬಂದಿ ಅಲ್ಲದೆ ಪೇದೆಯ ಜತೆ ಸಂಪರ್ಕದಲ್ಲಿದ್ದವರಿಗೆ ಆತಂಕ ಎದುರಾಗಿದೆ.

ಕಂಟೈನ್ಮೆಂಟ್ ಪ್ರದೇಶವಾಗಿದ್ದ ಟಿಪ್ಪು ನಗರದಲ್ಲಿ ಪೇದೆಯು ಕರ್ತವ್ಯ ನಿರ್ವಹಿಸಿದ್ದು, ಅವರಿಗೆ ಕೊರೋನ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿರುವುದು ಠಾಣೆ ಸಿಬ್ಬಂದಿಗೆ ಆತಂಕ ತಂದೊಡ್ಡಿದೆ. ಸೋಂಕು ತಗಲಿದ ಪೇದೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಜತೆ ಮೊದಲ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 25ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‍ಗೆ ಕಳುಹಿಸಲಾಗಿದೆ.

ಮಹಾಲಕ್ಷ್ಮಿ ಲೇಔಟ್ ನಿವಾಸಿಯಾದ ಪೇದೆಯು 1,815ನೇ ಕೊರೋನ ಸೋಂಕಿತನಾಗಿದ್ದಾರೆ. ಪೇದೆಯು ಹಿಂದೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದು, ಅಲ್ಲಿ ಅವರ ಸಂಪರ್ಕದಲ್ಲಿದ್ದವರನ್ನು ಕೊರೋನ ಪರೀಕ್ಷೆಗೆ ಕಳುಹಿಸಲಾಗುತ್ತದೆ.

ಪೇದೆಗೆ ಕೊರೋನ ಸೋಂಕು ತಗುಲಿದ ಬೆನ್ನಲ್ಲೆ ಚಾಮರಾಜಪೇಟೆ ಪೊಲೀಸ್ ಠಾಣೆಯನ್ನು ರಾಸಾಯನಿಕಗಳಿಂದ ಸ್ವಚ್ಛಗೊಳಿಸಿ ಸ್ಯಾನಿಟೈಜ್ ಮಾಡಲಾಗಿದೆ. ಅಗತ್ಯ ಬಿದ್ದರೆ ಠಾಣೆಯನ್ನು ಸೀಲ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News