ವಲಸೆ ಕಾರ್ಮಿಕರ ಸ್ವಯಂಪ್ರೇರಿತ ವಿಚಾರಣೆಗೆ ಕೆಲವೇ ಗಂಟೆಗಳ ಮೊದಲು ಸುಪ್ರೀಂಗೆ ಬಂದಿತ್ತು ಹಿರಿಯ ವಕೀಲರ ಖಾರದ ಪತ್ರ

Update: 2020-05-27 14:07 GMT

ಹೊಸದಿಲ್ಲಿ, ಮೇ 27: ಮಂಗಳವಾರ ಸುಪ್ರೀಂ ಕೋರ್ಟ್ ವಲಸಿಗ ಕಾರ್ಮಿಕರ ಕುರಿತ ಸರಕಾರದ ಕ್ರಮಗಳಲ್ಲಿ ಕೆಲವು ಲೋಪದೋಷಗಳ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸಿತ್ತು. ಆದರೆ ಇದಕ್ಕೆ ಕೆಲವೇ ಗಂಟೆಗಳ ಮೊದಲು ಈ ‘ಬೃಹತ್ ಮಾನವೀಯ ದುರಂತ ಪ್ರಕರಣದ’ ವಿಷಯದಲ್ಲಿ ಸರಕಾರದ ಕಾರ್ಯವೈಖರಿಯನ್ನು ಒಪ್ಪಿಕೊಳ್ಳುವ ರೀತಿಯ ಸುಪ್ರೀಂ ಕೋರ್ಟ್ ನ ವಿನೀತ ವರ್ತನೆ, ಈ ಬಗ್ಗೆ ಅದರ ಹಿಂಜರಿಕೆ ಹಾಗು ನಿರ್ಲಕ್ಷ್ಯದ ಕುರಿತು ದಿಲ್ಲಿ ಹಾಗು ಮುಂಬೈಯ ತಲಾ ಹತ್ತು ಹಿರಿಯ ನ್ಯಾಯವಾದಿಗಳು ಟೀಕಾ ಪ್ರಹಾರ ಮಾಡಿರುವ ಪತ್ರ ಸುಪ್ರೀಂ ಕೋರ್ಟ್ ತಲುಪಿತ್ತು. 

ಪಿ ಚಿದಂಬರಂ, ಕಪಿಲ್ ಸಿಬಲ್, ಪ್ರಶಾಂತ್ ಭೂಷಣ್, ಇಂದಿರಾ ಜೈಸಿಂಗ್, ವಿಕಾಸ್ ಸಿಂಗ್, ಇಕ್ಬಾಲ್ ಚಾವ್ಲಾ, ನವರೋಝ್ ಸೀರ್ವಾಯಿ ಮತ್ತಿತರರು ಬರೆದ ಈ ಪತ್ರದಲ್ಲಿ ವಲಸಿಗ ಕಾರ್ಮಿಕರ ಕುರಿತ ವಿಷಯದಲ್ಲಿ ಕೇಂದ್ರ ಸರಕಾರ ನೀಡಿದ ತಪ್ಪು ಹೇಳಿಕೆಗಳು ಹಾಗು ಪ್ರತಿಪಾದನೆಗಳನ್ನು ಸುಲಭವಾಗಿ ನಂಬುವ ಸುಪ್ರೀಂ ಕೋರ್ಟ್ ನ ಧೋರಣೆ ತುರ್ತು ಪರಿಸ್ಥಿತಿ ಸಮಯದಲ್ಲಿ ಅದು ವರ್ತಿಸಿದ ರೀತಿಯನ್ನು ನೆನಪಿಸುತ್ತಿದೆ ಎಂದು ಹೇಳಲಾಗಿದೆ. 

ಆನಂದ್ ಮೋಹನ್, ಮೋಹನ್ ಕಾತರಕಿ, ಸಿದ್ಧಾರ್ಥ್ ಲೂತ್ರ , ಸಂತೋಷ್ ಪೌಲ್, ಮಹಾಲಕ್ಷ್ಮಿ ಪಾವನಿ, ಸಿ ಯು ಸಿಂಗ್, ಅಸ್ಪಿ ಚಿನಾಯ್ , ಮಿಹಿರ್ ದೇಸಾಯಿ, ಜನಕ್ ದ್ವಾರಕದಾಸ್, ರಜನಿ ಅಯ್ಯರ್, ಯೂಸುಫ್ ಮುಚ್ಚಾಲ, ರಾಜೀವ್ ಪಾಟೀಲ್ , ಗಾಯತ್ರಿ ಸಿಂಗ್ ಹಾಗು ಸಂಜಯ್ ಸಿಂಗ್ವಿ ಪತ್ರ ಬರೆದಿರುವ ಇತರರು. 

ಮೂಲಗಳ ಪ್ರಕಾರ ಈ ಟೀಕಾ ಪ್ರಹಾರದ ಪತ್ರ ಸುಪ್ರೀಂ ಕೋರ್ಟ್ ಗೆ ತಲುಪಿದ್ದು ಸೋಮವಾರ. ಅದು ವಲಸಿಗರ ಸಮಸ್ಯೆಗಳ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದು ಮಂಗಳವಾರ. ವಿಚಾರಣೆಯಲ್ಲಿ ಕೇಂದ್ರದ ಕ್ರಮಗಳಲ್ಲಿ ಲೋಪದೋಷಗಳು , ಅಸಮರ್ಪಕ ಕ್ರಮಗಳು ಇವೆ ಎಂದು ಅದು ಹೇಳಿದೆ. ಕಾರ್ಮಿಕರಿಗೆ ಆಹಾರ, ವಸತಿ ಹಾಗು ಸಾರಿಗೆ ವ್ಯವಸ್ಥೆಯನ್ನು ಉಚಿತವಾಗಿ ಕೊಡಬೇಕು ಎಂದು ಅದು ಹೇಳಿದೆ. ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು "ಯಾವುದೇ ವಲಸಿಗ ಕಾರ್ಮಿಕ ತನ್ನ ಮನೆಗೆ ಅಥವಾ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿಲ್ಲ" ಎಂದು ಹೇಳಿದಾಗ ಮಾರ್ಚ್ 31ಕ್ಕೆ "ತೃಪ್ತಿ" ವ್ಯಕ್ತಪಡಿಸಿದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ವಲಸಿಗರ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಹೊರಟಿರುವುದು ಸುಳ್ಳು ಸುದ್ದಿಗಳ ಪರಿಣಾಮ ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು.  ಮಾರ್ಚ್ ನಲ್ಲಿ ಲಕ್ಷಾಂತರ ಅಸಹಾಯಕ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್ ನ ವೈಫಲ್ಯ ಹಾಗು ಈ ಬಗ್ಗೆ ಕೇಂದ್ರದ ಕಾರ್ಯವೈಖರಿಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸದ ವೈಫಲ್ಯದಿಂದಾಗಿ ಈ ಕಾರ್ಮಿಕರು ಉದ್ಯೋಗವೂ ಇಲ್ಲದೆ, ವೇತನ ಹಾಗು ಆಹಾರವೂ ಇಲ್ಲದೆ ಅನಾರೋಗ್ಯಕರ ಪರಿಸ್ಥಿತಿಗಳಲ್ಲಿ ಗುಂಪು ಸೇರಿಕೊಂಡು ಬದುಕುತ್ತಿದ್ದಾರೆ. ಇದರಿಂದ ಅವರಿಗೆ ಕೊರೋನ ಸೋಂಕು ತಗಲುವ ಸಾಧ್ಯತೆಯೂ ಬಹಳ ಹೆಚ್ಚಾಗಿದೆ ಎಂದು ಪತ್ರದಲ್ಲಿ ಹೇಳಲಾಗಿತ್ತು.

ಮೇ ತಿಂಗಳ ಮಧ್ಯದಲ್ಲಿ ಮತ್ತೆ ಲಕ್ಷಾಂತರ ಕಾರ್ಮಿಕರು ನಡೆದುಕೊಂಡು ತಮ್ಮ ಮನೆಗಳಿಗೆ ಹೋಗಲು ಪ್ರಾರಂಭಿಸಿದಾಗಲೂ ಸುಪ್ರೀಂ ಕೋರ್ಟ್ ಈ ಬಗ್ಗೆ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಲು ವಿಫಲವಾಯಿತು ಎಂದಿರುವ ಪತ್ರ, ಇದು ನೀತಿ ನಿರೂಪಣೆಯ ವಿಷಯ ಎಂದು ಕೋರ್ಟು ಮುಖ ತಿರುಗಿಸಲು ಸಾಧ್ಯವಿಲ್ಲಎಂದು ಹೇಳಿತ್ತು. "ವಲಸಿಗ ಕಾರ್ಮಿಕರ ವಿಷಯ ನೀತಿ ನಿರೂಪಣೆಯ ವಿಷಯವಲ್ಲ, ಅದು ಸಾಂವಿಧಾನಿಕ ವಿಷಯ. ಕೋರ್ಟ್ ಗೆ  142ನೇ ಪರಿಚ್ಚೇದದಡಿ ನ್ಯಾಯ ಒದಗಿಸಲು ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರವಿದೆ. ಅಸಹಾಯಕತೆ ತೋರಿಸುವುದು ಕೋರ್ಟ್ ನ ಧ್ಯೇಯಕ್ಕೆ ನ್ಯಾಯ ಒದಗಿಸುವುದಿಲ್ಲ” ಎಂದು ಪತ್ರ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News