ಆರೋಗ್ಯವಂತ ಕರ್ನಾಟಕಕ್ಕಾಗಿ ಹೆಲ್ತ್ ರಿಜಿಸ್ಟರ್ ಯೋಜನೆ: ಸಚಿವ ಡಾ.ಕೆ.ಸುಧಾಕರ್

Update: 2020-05-27 16:36 GMT

ಬೆಂಗಳೂರು, ಮೇ 27: ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು. ಆ ಮೂಲಕ ಸದೃಢ, ಆರೋಗ್ಯವಂತ ಕರ್ನಾಟಕ ರೂಪಿಸಬೇಕು ಎಂಬುದು ನಮ್ಮ ಕನಸು. ಅದಕ್ಕಾಗಿ ಹೆಲ್ತ್ ರಿಜಿಸ್ಟರ್ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಇದನ್ನು ಸಾಕಾರಗೊಳಿಸಲು ತಜ್ಞರು ಕೈಜೋಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಸರಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಹೆಲ್ತ್ ರಿಜಿಸ್ಟರ್ ಯೋಜನೆ ಸಂಬಂಧ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕ್ಷೇತ್ರದ 18 ಮಂದಿ ತಜ್ಞರ ಜತೆ ಮೊದಲ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹೆಲ್ತ್ ರಿಜಿಸ್ಟರ್ ಯೋಜನೆ ಸಂಬಂಧ ಮೊದಲ ಸಭೆ ನಡೆಸಲಾಗಿದೆ. ಇದರಲ್ಲಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಪರಿಣಿತರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಯೋಜನೆ ರೂಪುರೇಷೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಸುಧಾಕರ್ ತಿಳಿಸಿದರು.

ಈಗಾಗಲೇ ಇಂತಹ ಯೋಜನೆ ಜಾರಿಗೊಳಿಸಿರುವ ದೇಶಗಳಲ್ಲಿ ಅಳವಡಿಸಿಕೊಂಡಿರುವ ಪದ್ಧತಿ, ಯೋಜನೆ ಜಾರಿಗೆ ರಾಜ್ಯದಲ್ಲಿ ಎದುರಾಗುವ ಸವಾಲು, ಅಡ್ಡಿ-ಆತಂಕಗಳು, ಯೋಜನೆಯ ಸ್ವರೂಪ, ಮನೆ ಮನೆ ಸಮೀಕ್ಷೆಗೆ ಅಳವಡಿಸಿಕೊಳ್ಳಬೇಕಿರುವ ಅಂಶಗಳು, ಅಗತ್ಯವಿರುವ ಮಾನವ ಸಂಪನ್ಮೂಲ, ಆರೋಗ್ಯ ಇಲಾಖೆಯ ನಾನಾ ವಿಭಾಗಗಳು ಈಗಾಗಲೇ ಹೊಂದಿರುವ ಮಾಹಿತಿ, ಖಾಸಗಿ ವಲಯದ ನೆರವು ಪಡೆಯುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಜ್ಞರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಂದು ಅವರು ಹೇಳಿದರು.

ರಾಜ್ಯದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬರಿಗೂ ಸರಕಾರ ವೆಚ್ಚ ಮಾಡುವ ಪ್ರತಿ ಪೈಸೆಯ ಪ್ರಯೋಜನ ಸಿಗಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಈ ಯೋಜನೆ ವಿವರ ತಿಳಿದು ಮುಂದುವರಿಯಲು ಸೂಚನೆ ನೀಡಿದ್ದಾರೆ. ದೇಶದಲ್ಲೆ ಮೊದಲ ಸಲ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದೇವೆ. ನಮಗೆ ಇದೊಂದು ದೊಡ್ಡ ಸವಾಲು, ಅಸಾಧಾರಣ ಪ್ರಯತ್ನ ಎಂಬ ಅಂಶವೂ ಗಮನದಲ್ಲಿದೆ ಎಂದು ಸುಧಾಕರ್ ತಿಳಿಸಿದರು.

ಇದು ಗಣತಿ ಮಾದರಿಯ ಮನೆ ಮನೆಗೂ ತೆರಳಿ ಮಾಹಿತಿ ಪಡೆಯಬೇಕಿರುವ ಕಾರ್ಯಕ್ರಮ. ಪ್ರಾಯೋಗಿಕವಾಗಿ ಬೆಂಗಳೂರಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಹೆಲ್ತ್ ರಿಜಿಸ್ಟರ್ ಯೋಜನೆಗೆ ಮೊದಲ ಹಂತದಲ್ಲಿ ಸಾರ್ವಜನಿಕ ಮಾಹಿತಿ ಪಡೆಯುವುದು ದೊಡ್ಡ ಸವಾಲು. ಇದನ್ನು ನಿಭಾಯಿಸಲು ಖಾಸಗಿ ರಂಗದ ತಜ್ಞರು ಜತೆಗೆ ತಾಂತ್ರಿಕತೆಯ ನೆರವು ಅಗತ್ಯ. ಇವತ್ತಿನ ಸಂದರ್ಭದಲ್ಲಿ ಅನುದಾನ ಒದಗಿಸುವುದು ಕೂಡ ತ್ರಾಸದಾಯಕ ಸಂಗತಿ. ಅದಕ್ಕಾಗಿ ಕೈಗಾರಿಕೆಯವರ ನೆರವು ಪಡೆಯಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯ ರೂಪು ರೇಷೆ ಇತ್ಯರ್ಥಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಒಮ್ಮೆ ನಮಗೆ ರಾಜ್ಯದ ಆರೂವರೆ ಕೋಟಿ ಜನರ ಮಾಹಿತಿ ಸಿಕ್ಕರೆ ಲಿಂಗ, ಪ್ರದೇಶ, ವಯೋಮಾನ ಆದಿಯಾಗಿ ಅನೇಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆಗಳನ್ನು ವಿನ್ಯಾಸಗೊಳಿಸಬಹುದು. ಕೊರೋನ ನಂತರದ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ ಮುನ್ನೆಲೆಗೆ ಬರವುದು ಅನಿವಾರ್ಯ ಎಂದು ಸುಧಾಕರ್ ಪ್ರತಿಪಾದಿಸಿದರು.

ಈಗಾಗಲೆ ಇಸ್ರೇಲ್ ಜಾರಿಗೊಳಿಸಿರುವ ಇಂಥದ್ದೆ ಕಾರ್ಯಕ್ರಮ ಯಶಸ್ವಿಯಾಗಿದ್ದು ಪರಿಣಾಮಕಾರಿ ಆರೋಗ್ಯ ಸೇವೆ ನೀಡುತ್ತಿದೆ. ಅದನ್ನು ಮಾದರಿಯಾಗಿ ಇಟ್ಟುಕೊಳ್ಳಬಹುದು. ನಮ್ಮಲ್ಲಿ ಈಗಾಗಲೆ ಲಭ್ಯವಿರುವ ದತ್ತಾಂಶವನ್ನು ಮೊದಲು ಬಳಕೆ ಮಾಡಿಕೊಳ್ಳಬಹುದು, ಅದರ ಜತೆಗೆ ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ಪಡೆಯಲು ಯಾವ ಕ್ರಮ ಅಳವಡಿಸಿಕೊಳ್ಳಬೇಕು ಎಂಬುದನ್ನು ತಜ್ಞರು ವಿವರಿಸಿದರು ಎಂದು ಅವರು ಹೇಳಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಡಾ.ಸಚ್ಚಿದಾನಂದ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಗಿರೀಶ್, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ಪ್ರಕಾಶ್, ಸಾರ್ವಜನಿಕ ಆರೋಗ್ಯ ವಿಭಾಗದ ತಜ್ಞ ಡಾ. ಎಂ.ಕೆ.ಸುದರ್ಶನ್, ಡಾ.ವಿವೇಕ್ ಜವಳಿ, ಡಾ.ಶರಣ್ ಪಾಟೀಲ್, ಡಾ.ರಾಮಚಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೆಲ್ತ್ ರಿಜಿಸ್ಟರ್ ಬಹು ವರ್ಷಗಳ ನನ್ನ ಕನಸಿನ ಕೂಸು. ಆರೂವರೆ ಕೋಟಿ ಕನ್ನಡಿಗರಿಗೂ ಅಂತರ್ ರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಇದು ಸಹಕಾರಿಯಾಗಲಿದೆ. ಜನರು ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವ ಮೂಲಕ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾಗಿಗಳಾಗಬೇಕು.

-ಡಾ. ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

ತಾಂತ್ರಿಕತೆ ಮತ್ತು ತಜ್ಞರ ಸಹಯೋಗದೊಂದಿಗೆ ಇಸ್ರೇಲ್‍ನಲ್ಲಿ ಜಾರಿಗೊಳಿಸಿರುವ ಆರೋಗ್ಯ ವ್ಯವಸ್ಥೆ ಜಗತ್ತಿಗೆ ಮಾದರಿ. ಅಂಥದ್ದೇ ಸಾಹಸಕ್ಕೆ ಕರ್ನಾಟಕ ಸರಕಾರ ಕೈ ಹಾಕಿರುವುದು ಮಹತ್ವದ ಬೆಳವಣಿಗೆ. ಸರಕಾರದ ಈ ಪ್ರಯತ್ನವನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಕೈಲಾದ ಎಲ್ಲ ಸಹಕಾರ ನೀಡಲಾಗುವುದು.

- ಡಾ. ಶರಣ್ ಪಾಟೀಲ್, ಮೂಳೆ ತಜ್ಞರು

ಖಾಸಗಿ ಮತ್ತು ಸರಕಾರಿ ಸಂಸ್ಥೆಗಳು ಈ ಮಹತ್ವಾಕಾಂಕ್ಷಿ ಯೋಜನೆಗೆ ಕೈಜೋಡಿಸಬೇಕಿದೆ. ಪ್ರತಿಯೊಬ್ಬರ ಆರೋಗ್ಯ ಮಾಹಿತಿ ಸಂಗ್ರಹ ಪೂರ್ಣಗೊಂಡರೆ ಆರೋಗ್ಯ ಸೇವೆಯಲ್ಲಿ ಅದ್ಭುತಗಳನ್ನು ಸೃಷ್ಟಿಸಬಹುದು.

- ಡಾ. ವಿವೇಕ್ ಜವಳಿ, ಹೃದ್ರೊಗ ತಜ್ಞರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News