ಮಾತೃಭೂಮಿ ಪತ್ರಿಕೆಯ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ವೀರೇಂದ್ರಕುಮಾರ್ ನಿಧನ

Update: 2020-05-29 03:43 GMT

ಕೋಝಿಕ್ಕೋಡ್, ಮೇ 29: ಮಾಜಿ ಕೇಂದ್ರ ಸಚಿವ, ಸಮಾಜವಾದಿ ಮುಖಂಡ, ರಾಜ್ಯಸಭಾ ಸದಸ್ಯ ಹಾಗೂ ಲೇಖಕ ಎಂ.ಪಿ.ವೀರೇಂದ್ರ ಕುಮಾರ್ ಗುರುವಾರ ರಾತ್ರಿ ನಿಧನರಾದರು.

ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ಅಲ್ಪಕಾಲದಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದರು. ಲೋಕತಾಂತ್ರಿಕ ಜನತಾದಳದ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದ ಅವರು, ಗುರುವಾರ ರಾತ್ರಿ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತಮ್ಮ ರಾಜಕೀಯ ಹಾಗೂ ಸಾಹಿತ್ಯಕ ಶಕ್ತಿಯಿಂದ ಹಲವು ಸ್ಥಾನಗಳನ್ನು ಅಲಂಕರಿಸಿದ್ದ ಅವರು, ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ), ಭಾರತೀಯ ವೃತ್ತಪತ್ರಿಕೆಗಳ ಸೊಸೈಟಿ (ಐಎನ್‌ಎಸ್) ಅಧ್ಯಕ್ಷರಾಗಿ, ಮಾತೃಭೂಮಿ ಪತ್ರಿಕೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ವಯನಾಡ್‌ನ ಕಲ್ಪೆತ್ತಾದ ಸಾಂಪ್ರದಾಯಿಕ ಜೈನ ಕುಟುಂಬದಲ್ಲಿ ಜನಿಸಿದ ಅವರು, ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ ಮೂಲಕ ಸಕ್ರಿಯ ರಾಜಕಾರಣ ಆರಂಭಿಸಿದರು.

ಬಳಿಕ ಎಲ್‌ಜೆಡಿ ಹುಟ್ಟುಹಾಕುವ ಮುನ್ನ ಜನತಾದಳ, ಜೆಡಿಎಸ್ ಮತ್ತು ಸೋಶಿಯಲಿಸ್ಟ್ ಜನತಾದಳ ಪಕ್ಷಗಳ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದರು. ರಾಜ್ಯ ವಿಧಾನಸಭೆಗೆ ಕಲ್ಪೆತ್ತಾ ಕ್ಷೇತ್ರದಿಂದ 1987ರಲ್ಲಿ ಆಯ್ಕೆಯಾಗಿದ್ದ ಅವರು, 1997ರವರೆಗೂ ಶಾಸಕರಾಗಿದ್ದರು. ಆಗ ರಾಜ್ಯದ ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಕೋಝಿಕ್ಕೋಡ್ ಕ್ಷೇತ್ರದಿಂದ 1996 ಮತ್ತು 1997ರಲ್ಲಿ ಸಂಸದರಾಗಿ ಆಯ್ಕೆಯಾದರು. ಕೇಂದ್ರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವರಾಗಿದ್ದ ಅವರು, ಕಾರ್ಮಿಕ ಮತ್ತು ಸಂಸದೀಯ ವ್ಯವಹಾರ ಖಾತೆಯನ್ನೂ ನಿಭಾಯಿಸಿದ್ದರು.

ಖ್ಯಾತ ವಾಗ್ಮಿಯಾಗಿದ್ದ ಅವರು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ವಯಲಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.

ವೀರೇಂದ್ರ ಕುಮಾರ್ ಅವರು ಪತ್ನಿ ಉಷಾ, ಮಗ ಎಂ.ವಿ.ಶ್ರೇಯಾಂಸ್ ಕುಮಾರ್, ಪುತ್ರಿಯರಾದ ಎಂ.ವಿ.ಆಶಾ, ಎಂ.ವಿ.ನಿಶಾ ಮತ್ತು ಎಂ.ವಿ.ಜಯಲಕ್ಷ್ಮಿ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News