​ವಿಶ್ವ ಕೊರೋನ ನಕ್ಷೆಯಲ್ಲಿ ಒಂಬತ್ತನೇ ಸ್ಥಾನ: ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿದ ಭಾರತ

Update: 2020-05-29 04:16 GMT

ಹೊಸದಿಲ್ಲಿ, ಮೇ 29: ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 1.6 ಲಕ್ಷದ ಗಡಿ ದಾಟುತ್ತಿದ್ದಂತೇ, ವಿಶ್ವದಲ್ಲಿ ಗರಿಷ್ಠ ಕೊರೋನ ಸೋಂಕಿತರಿರುವ ದೇಶಗಳ ಪೈಕಿ ಭಾರತ ಒಂಬತ್ತನೇ ಸ್ಥಾನಕ್ಕೇರಿದೆ. ಈ ಮಧ್ಯೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಭಾರತ, ಚೀನಾವನ್ನು ಹಿಂದಿಕ್ಕಿದೆ ಎಂದು ಅಮೆರಿಕದ ಜಾನ್ ಹಾಕಿನ್ಸ್ ವಿಶ್ವವಿದ್ಯಾನಿಲಯ ಕಲೆ ಹಾಕಿದ ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಚೀನಾದ ಒಟ್ಟು ಸೋಂಕಿತರ ಸಂಖ್ಯೆ (84,106)ಯ ಎರಡು ಪಟ್ಟು ಪ್ರಕರಣಗಳು ಅಂದರೆ 1,65,386 ಪ್ರಕರಣಗಳು ಭಾರತದಲ್ಲಿ ದೃಢಪಟ್ಟಿವೆ. ಭಾರತದಲ್ಲಿ ಸೋಂಕಿನಿಂದ 4,711 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ಚೀನಾ (4,638)ವನ್ನು ಮೀರಿಸಿದೆ.

ಡಿಸೆಂಬರ್‌ನಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ವೈರಸ್ ಐದು ತಿಂಗಳಲ್ಲಿ ಇಡೀ ವಿಶ್ವವನ್ನು ವ್ಯಾಪಿಸಿ 59 ಲಕ್ಷ ಮಂದಿಗೆ ಹರಡಿದೆ. 3.5 ಲಕ್ಷಕ್ಕೂ ಅಧಿಕ ಮಂದಿ ವಿಶ್ವಾದ್ಯಂತ ಈ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.

ಒಟ್ಟು 17 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಬ್ರೆಝಿಲ್, ರಶ್ಯ, ಬ್ರಿಟನ್, ಸ್ಪೇನ್, ಇಟೆಲಿ, ಫ್ರಾನ್ಸ್ ಮತ್ತು ಜರ್ಮನಿ ಭಾರತಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿವೆ. ಟರ್ಕಿ 10ನೇ ಸ್ಥಾನದಲ್ಲಿದ್ದು, ಇರಾನ್, ಪೆರು ಮತ್ತು ಕೆನಡಾ ಬಳಿಕ ಚೀನಾ 14ನೇ ಸ್ಥಾನದಲ್ಲಿದೆ.

ಸುಮಾರು ಒಂದು ಲಕ್ಷ ಮಂದಿ ಬಲಿಯಾಗಿರುವ ಅಮೆರಿಕ, ಸಾವಿನ ಸಂಖ್ಯೆಯಲ್ಲೂ ಅಗ್ರಸ್ಥಾನಿ. ಬ್ರಿಟನ್, ಫ್ರಾನ್ಸ್, ಸ್ಪೇನ್, ಬ್ರೆಝಿಲ್, ಬೆಲ್ಜಿಯಂ, ಮೆಕ್ಸಿಕೊ, ಜರ್ಮನಿ ಮತ್ತು ಇರಾನ್ ಅಗ್ರ 10ರ ಪಟ್ಟಿಯಲ್ಲಿವೆ. ಕೆನಡಾ ಹಾಗೂ ನೆದರ್‌ಲ್ಯಾಂಡ್ಸ್ ಬಳಿಕ ಭಾರತ 13ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News