ಕೋವಿಡ್-19 ಲಸಿಕೆಗಳ ಮೇಲೆ ಸಮಾನ ಹಕ್ಕು: 37 ದೇಶಗಳು, ಡಬ್ಲ್ಯುಎಚ್‌ಒ ಪ್ರತಿಪಾದನೆ

Update: 2020-05-30 16:56 GMT

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್), ಮೇ 30: ನೂತನ-ಕೊರೋನ ವೈರಸ್ ಕಾಯಿಲೆಯ ಚಿಕಿತ್ಸೆಗೆ ಸಂಬಂಧಿಸಿದ ಸಂಭಾವ್ಯ ಲಸಿಕೆಗಳು, ಔಷಧಗಳು ಮತ್ತು ಇತರ ಪರೀಕ್ಷಾ ಸಲಕರಣೆಗಳ ಮೇಲೆ ಎಲ್ಲ ದೇಶಗಳಿಗೂ ಸಮಾನ ಹಕ್ಕಿರಬೇಕು ಎಂಬುದಾಗಿ 37 ದೇಶಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ಮನವಿ ಮಾಡಿವೆ.

ಪೇಟೆಂಟ್ ಕಾನೂನುಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಈ ದೇಶಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ, ಮಹತ್ವದ ಔಷಧಗಳು ಮತ್ತು ಲಸಿಕೆಗಳನ್ನು ಪಡೆಯುವಲ್ಲಿ ಈ ಕಾನೂನುಗಳು ತಡೆಯಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿವೆ.

ಈಗಾಗಲೇ 100ಕ್ಕೂ ಅಧಿಕ ಲಸಿಕೆಗಳು ಮತ್ತು ಔಷಧಿಗಳು ವಿವಿಧ ಅಭಿವೃದ್ಧಿ ಹಂತಗಳಲ್ಲಿದ್ದು, ಶ್ರೀಮಂತ ದೇಶಗಳು ಅವುಗಳಲ್ಲಿ ಹಣವನ್ನು ಸುರಿಯುತ್ತಿವೆ. ಹಾಗಾಗಿ, ಯಾವುದಾದರೊಂದು ಲಸಿಕೆ ಅಥವಾ ಔಷಧಿ ಯಶಸ್ಸು ಕಂಡರೆ, ಅದನ್ನು ಪಡೆಯುವ ಸರದಿಯ ಮುಂಚೂಣಿಯಲ್ಲಿ ಈ ದೇಶಗಳು ಇರುತ್ತವೆ ಎಂಬ ಭಯವನ್ನು ಅಭಿವೃದ್ಧಿ ಹೊಂದುತ್ತಿರುವ ಮತ್ತು ಸಣ್ಣ ದೇಶಗಳು ವ್ಯಕ್ತಪಡಿಸಿವೆ.

ಕೊರೋನ ವೈರಸ್ ಸಂಬಂಧಿ ಲಸಿಕೆಗಳು, ಪರೀಕ್ಷಾ ಸಲಕರಣೆಗಳು, ಔಷಧಿಗಳು, ಔಷಧಾ ವಿಧಾನಗಳು ಹಾಗೂ ಇತರ ಪ್ರಮುಖ ಸಲಕರಣೆಗಳನ್ನು ಜಾಗತಿಕ ಸಾರ್ವಜನಿಕ ವಸ್ತುಗಳು ಎಂಬುದಾಗಿ ಪರಿಗಣಿಸಿ ಸಾರ್ವತ್ರಿಕವಾಗಿ ಎಲ್ಲರಿಗೂ ಲಭಿಸುವಂತೆ ನೋಡಿಕೊಳ್ಳಬೇಕು ಎಂದು ಕೋಸ್ಟರಿಕ ದೇಶದ ಅಧ್ಯಕ್ಷ ಕಾರ್ಲೋಸ್ ಅಲ್ವರಾಡೊ ಹೇಳಿದರು.

ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯು ಒಗ್ಗಟ್ಟಿನ ಕ್ರಮಕ್ಕಾಗಿ ಜಾಗತಿಕ ಮನವಿ ಮಾಡಿದೆ ಹಾಗೂ ಈ ಅಭಿಯಾನದಲ್ಲಿ ಸೇರ್ಪಡೆಗೊಳ್ಳುವಂತೆ ಇತರ ದೇಶಗಳಿಗೆ ಕರೆ ನೀಡಿದೆ.

ಇದು ಜನರಿಗೆ ಆದ್ಯತೆ ನೀಡುವ ಸಮಯ: ವಿಶ್ವಸಂಸ್ಥೆ ಮುಖ್ಯಸ್ಥ

ಹೊಸತನದ ಸಂಶೋಧನೆಗಳಲ್ಲಿ ಪೇಟೆಂಟ್‌ಗಳು ವಹಿಸುವ ಮಹತ್ವದ ಪಾತ್ರವನ್ನು ವಿಶ್ವ ಆರೋಗ್ಯ ಸಂಸ್ಥೆಯು ಗುರುತಿಸುತ್ತದೆ. ಆದರೆ ಇದು ಜನರಿಗೆ ಆದ್ಯತೆ ನೀಡಬೇಕಾದ ಸಮಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಶುಕ್ರವಾರ ನಡೆದ ಆನ್‌ಲೈನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News