ಭ್ರಷ್ಟಾಚಾರ ತನಿಖೆ ಮಾಡುವ ನಿರ್ಭಯ ವಾತಾವರಣ ಸೃಷ್ಟಿಸಿ: ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್

Update: 2020-05-30 17:07 GMT

ಬೆಂಗಳೂರು, ಮೇ 30: 'ಶಾಸನಸಭೆಯ ಸಮಿತಿಗಳ ಸಂವಿಧಾನಾತ್ಮಕ ಬಾಧ್ಯತೆಯನ್ನು ಪ್ರಶ್ನಿಸುವ, ವಿಧಾನ ಮಂಡಲದ ಸಮಿತಿಗಳ ಅಧಿಕಾರ ಮೊಟಕುಗೊಳಿಸುವ ಲಘು ಪ್ರಕಟಣೆ 104ನ್ನು ಹಿಂಪಡೆದು ಭ್ರಷ್ಟಾಚಾರವನ್ನು ತನಿಖೆ ಮಾಡುವ ನಿರ್ಭಯ, ನಿರ್ದಾಕ್ಷಿಣ್ಯ ವಾತಾವರಣ ಸೃಷ್ಟಿಸಿ' ಎಂದು ಸ್ಪೀಕರ್ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಚ್.ಕೆ.ಪಾಟೀಲ್ ಪತ್ರ ಬರೆದಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಔಷಧ ಮತ್ತು ಪರಿಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಲೆಕ್ಕಪತ್ರಗಳ ಸಮಿತಿ ದಾಖಲೆ ಪರಿಶೀಲನೆ ಮತ್ತು ಸ್ಥಳ ಪರಿಶೀಲನೆ ನಿರ್ಣಯವನ್ನು ಕೈಗೊಂಡಿತ್ತು. ಆದರೆ, ಸ್ಪೀಕರ್ ಅವರು, ಕೊರೋನ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಯಾವುದೇ ಅಧ್ಯಯನ, ಸ್ಥಳ ಭೇಟಿ, ಪರಿಶೀಲನೆ ಕೈಗೊಳ್ಳಬಾರದು ಎಂದು ಆದೇಶಿಸಿರುತ್ತಾರೆ. ಸರಕಾರ ಕೋವಿಡ್-19 ನಿರ್ವಹಣೆ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ. ಆದರೆ, ಮೂಲ ತತ್ವವನ್ನೇ ಗಾಳಿಗೆ ತೂರಿ ದೊಡ್ಡ ಪ್ರಮಾದಗಳನ್ನು ಎಸಗಿರುವ ಅನೇಕ ಉದಾಹರಣೆಗಳು ಗಮನಕ್ಕೆ ಬಂದಿರುವುದರಿಂದ ಈ ವಿಷಯಗಳಿಗೆ ಸಂಬಂಧಪಟ್ಟ ಎಲ್ಲ ಕಡಗಳನ್ನು ಮತ್ತು ಕಾಗದಗಳ ಸುರಕ್ಷತೆಯ ಬಗ್ಗೆ ಬಹುದೊಡ್ಡ ಆತಂಕ ಎದುರಾಗಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ಈ ಎಲ್ಲ ಕಡತಗಳು ಹಾಗೂ ಕಾಗದ ಪತ್ರಗಳನ್ನು ಸಂರಕ್ಷಿಸಬೇಕಾದುದು ರಾಜ್ಯ ಸರಕಾರ ಜವಾಬ್ದಾರಿ. ಮೇಲೆ ಕಾಣಿಸಿದ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಕೊರೋನ ಸೋಂಕು ನಿರ್ವಹಣೆಯಲ್ಲಿ ಮೇಲೆ ಕಾಣಿಸಿದ ದೂರುಗಳ ಕಡತಗಳನ್ನು ಹಾಗೂ ಕಾಗದ ಪತ್ರಗಳನ್ನು ಸುರಕ್ಷಿತಾ ಸುಪರ್ದಿಗೆ ಒಪ್ಪಿಸಿ ಹಿರಿಯ ಅಧಿಕಾರಿಯೊಬ್ಬರ ನೇರ ಮೇಲ್ವಿಚಾರಣೆಯಲ್ಲಿ ಈ ಕಡತಗಳನ್ನು ಇರಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News