ಕೆಂಪೇಗೌಡರ ಅವಹೇಳನ ಆರೋಪ: ಆರೆಸ್ಸೆಸ್ ಮುಖಂಡನಿಗೆ ಒಕ್ಕಲಿಗ ಸಂಘ, ಕನ್ನಡ ಪರ ಹೋರಾಟಗಾರರಿಂದ ಹಲ್ಲೆ

Update: 2020-05-31 13:03 GMT

ಬೆಂಗಳೂರು, ಮೇ.31: ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಕುರಿತು ಅವಹೇಳನಕಾರಿ ಆಗಿ ಮಾತನಾಡಿದ್ದಾರೆಂದು ಆರೋಪಿಸಿ ಆರೆಸ್ಸೆಸ್ ಮುಖಂಡ ಪುನೀತ್ ಕೆರೆಹಳ್ಳಿ ಸೇರಿದಂತೆ ಪ್ರಮುಖರ ಮೇಲೆ ಒಕ್ಕಲಿಗ ಸಂಘದ ಕಾರ್ಯಕರ್ತರು ಮತ್ತು ಕನ್ನಡ ಪರ ಹೋರಾಟಗಾರರು ಹಲ್ಲೆ ನಡೆಸಿ, ಪ್ರತಿಭಟನೆ ನಡೆಸಿದ್ದಾರೆ.

ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಒಕ್ಕಲಿಗ ಸಂಘದ ಕಾರ್ಯಕರ್ತರಾದ ಕವನ್ ಗೌಡ ಮತ್ತು ನವೀನ್ ಗೌಡ ಎಂಬುವರು ಹಲ್ಲೆ ನಡೆಸಿದ್ದು, ಕೆಂಪೇಗೌಡರ ಕುರಿತು ಅವಹೇಳನಕಾರಿ ಮಾತನಾಡಿರುವ ಪುನೀತ್ ಕೆರೆಹಳ್ಳಿ ಸೇರಿದಂತೆ ಪ್ರಮುಖರನ್ನು ಈ ಕೂಡಲೇ ಬಂಧಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ಏನಿದು ಘಟನೆ: ಯಲಹಂಕ ಮೇಲ್ಸೇತುವೆಗೆ ಸಾರ್ವಕರ್ ಹೆಸರು ನಾಮಕಾರಣ ಮಾಡಬೇಕೆಂದು ಒತ್ತಾಯಿಸಿ ಮೇ.29ರಂದು ಬಿಬಿಎಂಪಿ ಕಚೇರಿಯಲ್ಲಿ ಮೇಯರ್ ಅನ್ನು ಭೇಟಿಯಾಗಿ 'ದೇಶಪ್ರೇಮಿಗಳ ಸೇನೆ' ನೇತೃತ್ವದಲ್ಲಿ ಪುನೀತ್ ಕೆರೆಹಳ್ಳಿ, ಭರತ್ ಸೇರಿದಂತೆ ಪ್ರಮುಖರು ಮನವಿ ಪತ್ರ ಸಲ್ಲಿಸಿದ್ದರು.

ತದನಂತರ, ಇದೇ ವಿಚಾರವಾಗಿ ಪುನೀತ್ ಕೆರೆಹಳ್ಳಿ ಸೇರಿದಂತೆ ಬಲಪಂಥೀಯ ಮುಖಂಡರಾದ ಪ್ರಮುಖರು ಸಾರ್ವಕರ್ ಹೆಸರು ಏಕೆ ಇಡಬಾರದೆಂದು ಫೇಸ್ ಬುಕ್ ನಲ್ಲಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ವ್ಯಕ್ತಿಯೊರ್ವ ಮೈಸೂರು ಮಹಾರಾಜರು ಬೆಂಗಳೂರನ್ನು ಕೆಂಪೇಗೌಡರಿಗೆ ನೀಡದಿದ್ದರೆ ಅವರು ಎಲ್ಲಿ ಬರುತ್ತಿದ್ದರು ಎಂದು ಪ್ರಶ್ನಿಸಿದ್ದಾನೆ. ಮತ್ತೋರ್ವ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಇಲ್ಲದಿದ್ದರೆ ಬಿಳಿಗೌಡ ಬರುತ್ತಿದ್ದ ಎಂದು ಅವಹೇಳನಕಾರಿ ಆಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಬಂಧನಕ್ಕೆ ಪಟ್ಟು: ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಿಗಳನ್ನು ನಿಂದಿಸುವ ಮತ್ತು ಬೆದರಿಕೆ ಹಾಕುವ ಪುನೀತ್ ಕೆರೆಹಳ್ಳಿ ಸೇರಿದಂತೆ ಪ್ರಮುಖರನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ,ಬೃಹತ್ ಪ್ರತಿಭಟನೆ ನಡೆಸುವುದಾಗಿ ಕನ್ನಡ ಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News