ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪ: ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ವಿರುದ್ಧ ಪ್ರಕರಣ ದಾಖಲು

Update: 2020-05-31 13:56 GMT

ಬೆಂಗಳೂರು, ಮೇ.31: ಕೊರೋನ ಸೋಂಕು ದೃಢಪಟ್ಟಿದ್ದರೂ, ಆಸ್ಪತ್ರೆಗೆ ದಾಖಲಾಗಲು ಹಿಂದೇಟು ಹಾಕಿರುವ ಆರೋಪ ಹಿನ್ನೆಲೆ ಬಿಬಿಎಂಪಿ ಜೆಡಿಎಸ್ ಸದಸ್ಯ ಇಮ್ರಾನ್ ಪಾಷಾ ವಿರುದ್ಧ ಇಲ್ಲಿನ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಡಿ ಇಮ್ರಾನ್ ಪಾಷಾ ವಿರುದ್ಧ  ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188 (ಸರಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ), 270 (ವೈರಸ್ ಹಬ್ಬಿಸಲು ಯತ್ನ), 271 (ರೋಗ ನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸುವುದು)ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ಆರೋಗ್ಯಾಧಿಕಾರಿಗಳು, ಶನಿವಾರ ಇಲ್ಲಿನ ಪಾದರಾಯನಪುರದಲ್ಲಿ ಇಮ್ರಾನ್ ಪಾಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲು ಮುಂದಾಗಿದ್ದರು. ಆದರೆ, ಆಸ್ಪತ್ರೆಗೆ ದಾಖಲಾಗಲು ನಿರಾಕರಣೆ ಮಾಡಿದ ಆರೋಪದಡಿ ಆರೋಗ್ಯ ಅಧಿಕಾರಿಗಳು ಜೆಜೆ ನಗರ ಪೊಲೀಸರಿಗೆ ದೂರು ನೀಡಿದ್ದರು. ಆರೋಗ್ಯ ಅಧಿಕಾರಿಗಳ ದೂರಿನ ಆಧಾರದ ಮೇಲೆ ಮೊಕದ್ದಮೆ ದಾಖಲಾಗಿದೆ.

ವಾಸದ ಮನೆ ಸುತ್ತಲೂ ಸೀಲ್‍ಡೌನ್

ಇಮ್ರಾನ್ ಪಾಷಾ ಅವರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆ ಅವರು ವಾಸಿಸುತ್ತಿದ್ದ ಇಡೀ ಪ್ರದೇಶ ವನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಇತ್ತೀಚೆಗೆ ಕಂಟೈನ್‍ಮೆಂಟ್ ಝೋನ್ ಇದ್ದರೂ ಮುಂಜಾಗೃತಾ ಕ್ರಮವಹಿಸದೆ ಇಮ್ರಾನ್ ಪಾಷಾ ಓಡಾಡಿಕೊಂಡಿದ್ದರು ಎನ್ನಲಾಗಿದೆ. ನಂತರ ಶುಕ್ರವಾರ ಬೆಳಗ್ಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯರು ನೀಡಿದ ವರದಿಯಲ್ಲಿ ಸೋಂಕು ತಗಲಿರುವುದು ಪತ್ತೆಯಾಗಿದೆ. ಹೀಗಾಗಿ ಇಮ್ರಾನ್ ಪಾಷರ ಮನೆ ಇರುವ ಪಾದರಾಯನಪುರದ 13ನೇ ಕ್ರಾಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News