ಮೋದಿ ಸರಕಾರದ ಕೋವಿಡ್-19 ನಿರ್ವಹಣೆಗೆ ಆರೋಗ್ಯ ಪರಿಣಿತರ ಅಸಮಾಧಾನ

Update: 2020-05-31 17:37 GMT

ಹೊಸದಿಲ್ಲಿ, ಮೇ 31: ಭಾರತವು 5ನೇ ಹಂತದ ಲಾಕ್‌ಡೌನ್‌ಗೆ ಸಿದ್ಧವಾಗುತ್ತಿರುವಂತೆಯೇ, ಕೊರೋನ ವೈರಸ್ ಹಾವಳಿಯನ್ನು ನಿಭಾಯಿಸುವ ಕೇಂದ್ರ ಸರಕಾರವು ಸಾಂಕ್ರಾಮಿಕ ರೋಗ ತಜ್ಞರ ಬದಲಿಗೆ ಅಧಿಕಾರಿಗಳನ್ನೇ ಹೆಚ್ಚು ಅವಲಂಭಿಸುತ್ತಿದೆ ಎಂದು ದೇಶದ ಮೂರು ಪ್ರಮುಖ ವೈದ್ಯಕೀಯ ವೃತ್ತಿಪರರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಸಾರ್ವಜನಿಕ ಆರೋಗ್ಯ ಸಂಸ್ಥೆ, ಇಂಡಿಯನ್ ಅಸೋಸಿಯೇಶನ್ ಆಫ್ ಪ್ರಿವೆಂಟಿವ್ ಆ್ಯಂಡ್ ಸೋಶಿಯಲ್ ಮೆಡಿಸಿನ್ ಹಾಗೂ ಭಾರತೀಯ ಸಾಂಕ್ರಾಮಿಕ ರೋಗ ತಜ್ಞರ ಸಂಘದ ಸದಸ್ಯರು ಇತ್ತೀಚೆಗೆ ಬಿಡುಗಡೆಗೊಳಿಸಿದ ಜಂಟಿ ಹೇಳಿಕೆಯೊಂದರಲ್ಲಿ ಈ ಅಸಾಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೋವಿಡ್-19 ಸೋಂಕಿನ ಸಾಮುದಾಯಿಕ ಹರಡುವಿಕೆಯು ಆರಂಭಗೊಂಡಿದೆ ಎಂದವರು ಹೇಳಿದ್ದಾರೆ.

ಸಾಮುದಾಯಿಕ ಔಷಧಿ ಕೇಂದ್ರದ ಡಾ.ಶಶಿಕಾಂತ್, ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್), ಬನಾರಸ್ ಹಿಂದೂ ವಿವಿಯ ಮಾಜಿ ಪ್ರೊಫೆಸರ್ ಡಾ.ಡಿ.ಸಿ.ಎಸ್. ರೆಡ್ಡಿ ಈ ಹೇಳಿಕೆಗೆ ಸಹಿಹಾಕಿದ ಪ್ರಮುಖ ಆರೋಗ್ಯ ತಜ್ಞರಾಗಿದ್ದಾರೆ.

ಕೋವಿಡ್-19 ನಿಯಂತ್ರಣಕ್ಕಾಗಿ ಭಾರತವು ಹೇರಿರುವ ಲಾಕ್‌ಡೌನ್ ಅತ್ಯಂತ ಕರಾಳವೆಂದು ಅರೋಗ್ಯತಜ್ಞರು ಬಣ್ಣಿಸಿದ್ದಾರೆ. ಕೋವಿಡ್-19ನಿಂದ ತತ್ತರಿಸಿರುವ ಭಾರತಕ್ಕೆ ಲಾಕ್‌ಡೌನ್ ಹೇರಿಕೆಯು , ದುರಂತಕಾರಿ ಹೊರೆಯಾಗಿದೆ ಎಂದವರು ಹೇಳಿದ್ದಾರೆ.

ಕೋವಿಡ್-19 ನಿರ್ವಹಣೆಯಲ್ಲಿ ಸರಕಾರವು ಅತಿಯಾಗಿ ಸಾಮಾನ್ಯ ಆಡಳಿತಾತ್ಮಕ ಅಧಿಕಾರಿಗಳನ್ನು ಅವಲಂಭಿಸಿದೆಯೇ ಹೊರತು ವೈದ್ಯಕೀಯ ತಜ್ಞರನ್ನಲ್ಲವೆಂದು, ಆರೋಗ್ಯ ಪರಿಣತರು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಗೆ ಹೋಲಿಸಿದರೆ ರೋಗ ಹರಡುವಿಕೆಯ ಬಗ್ಗೆ ಉತ್ತಮವಾದ ಗ್ರಹಿಕೆಯುಳ್ಳ ಸೋಂಕುತಜ್ಞರ ಜೊತೆ ಸಮಾಲೋಚನೆ ನಡೆಸಿರುತ್ತಿದ್ದಲ್ಲಿ, ಫಲಿತಾಂಶ ಉತ್ತಮವಾಗಿರಬಹುದಾಗಿತ್ತು ಎಂದು ಹೇಳಿಕೆಯು ತಿಳಿಸಿದೆ.

ಸಾಂಕ್ರಾಮಿಕ ರೋಗ ಹಾವಳಿಯ ಆರಂಭದಲ್ಲೇ ವಲಸೆ ಕಾರ್ಮಿಕರನ್ನು ಅವರ ಊರಿಗೆ ವಾಪಾಸಾಗಲು ಅವಕಾಶ ನೀಡಿದ್ದಲ್ಲಿ, ಪರಿಸ್ಥಿತಿ ಇಂದು ಭಿನ್ನವಾಗಿರುತ್ತಿತ್ತು ಎಂದವರು ಹೇಳಿದ್ದಾರೆ.

ಕೋವಿಡ್-19 ಸೋಂಕಿನ ನಿಯಂತ್ರಣಕ್ಕಾಗಿ ತಾವು ರೂಪಿಸಿರುವ 11 ಅಂಶಗಳ ಕಾರ್ಯಸೂಚಿಯನ್ನು ತಜ್ಞರು ಮೋದಿ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಪರೀಕ್ಷಾ ಫಲಿತಾಂಶಗಳು ಸೇರಿದಂತೆ ಕೋವಿಡ್-19ಗೆ ಸಂಬಂಧಿಸಿದ ಎಲ್ಲಾ ದತ್ತಾಂಶಗಳನ್ನು ಬಹಿರಂಗಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ರಾಷ್ಟ್ರಾದ್ಯಂತ ಹೇರಿರುವ ಲಾಕ್‌ಡೌನ್‌ನ್ನು ರದ್ದುಪಡಿಸಬೇಕು ಹಾಗೂ ಅವುಗಳ ಬದಲಿಗೆ ಕೆಲವು ನಿರ್ದಿಷ್ಟ ನಿರ್ಬಂಧಗಳನ್ನು ಹೇರಬೇಕು ಎಂದು ಅದು ಸಲಹೆ ಮಾಡಿದೆ.

ವಾಡಿಕೆಯ ಆರೋಗ್ಯ ಸೇವೆಳ ಪುನಾರಂಭ, ರೋಗತಪಾಸಣೆ ವ್ಯವಸ್ಥೆಯನ್ನು ಹೆಚ್ಚಿಸುವುದು ಹಾಗೂ ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ಗರಿಷ್ಠ ಪ್ರಮಾಣದಲ್ಲಿ ಪಿಪಿಇ ಕಿಟ್ ಲಭ್ಯವಾಗುವಂತೆ ಮಾಡುವುದು ಇತ್ಯಾದಿ ಸಲಹೆಗಳನ್ನು ಆರೋಗ್ಯ ಪರಿಣಿತರು ಕೇಂದ್ರ ಸರಕಾರಕ್ಕೆ ನೀಡಿದ್ದಾರೆ.

ರವಿವಾರ ಭಾರತದಲ್ಲಿ ಕೋವಿಡ್ 19 ಪ್ರಕರಣಗಳು 1.83 ಲಕ್ಷವನ್ನು ದಾಟಿದೆ.

ಸಾಮುದಾಯಿಕ ಹರಡುವಿಕೆ ಆರಂಭ?

ಈಗಾಗಲೇ ಸೋಂಕಿನ ಸಾಮುದಾಯಿಕ ಹರಡುವಿಕೆಯು ದೇಶದ ವಿಶಾಲ ಜನವರ್ಗಗಳಲ್ಲಿ ಆರಂಭಗೊಂಡಿದ್ದು, ಕೋವಿಡ್-19 ಸೋಂಕನ್ನು ಈ ಹಂತದಲ್ಲಿ ತೊಲಗಿಸಬಹುದೆಂಬುದನ್ನು ನಿರೀಕ್ಷಿಸುವುದು ಅವಾಸ್ತವಿಕವಾದೀತು ಎಂದು ಆರೋಗ್ಯ ತಜ್ಞರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ಪರಿಣಿತರ ಈ ಹೇಳಿಕೆಯು ದೇಶದಲ್ಲಿ ಕೊರೋನದ ಸಾಮು ದಾಯಿಕವಾಗಿ ಹರಡುತ್ತಿಲ್ಲವೆಂಬ ಮೋದಿ ಸರಕಾರದ ಹೇಳಿಕೆಗೆ ತದ್ವಿರುದ್ಧವಾದುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News