ಮೋದಿ ಸರಕಾರಕ್ಕೆ ಒಂದು ವರ್ಷ: ವಿಕಾಸದ ಜೊತೆಗೆ ವಿಶ್ವಾಸಘಾತುಕತನ

Update: 2020-06-01 04:29 GMT

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಈ ಘೋಷಣೆಯ ಜೊತೆಗೆ ಎರಡನೇ ಬಾರಿ ಅಸ್ತಿತ್ವಕ್ಕೆ ಬಂದ ನರೇಂದ್ರ ಮೋದಿಯವರ ನೇತೃತ್ವದ ಸರಕಾರಕ್ಕೆ ಒಂದು ವರ್ಷ ಸಂದಿದೆ. ಹಿಂದಕ್ಕೆ ತಿರುಗಿ ನೋಡಿದರೆ ಮೋದಿಯವರ ಜೊತೆಗೆ ಸಾಥ್ ನೀಡಬೇಕಾದ ಆತ್ಮೀಯರೇ ಅವರ ಬಳಿಯಿಲ್ಲ. ಅಭಿವೃದ್ಧಿಯ ಕೊಂಡಿ ಕಳಚಿ, ಆರ್ಥಿಕವಾಗಿ ದೇಶ ಇಬ್ಭಾಗವಾಗಿದೆ. ವಲಸೆ ಕಾರ್ಮಿಕರ ಮೇಲೆಯೇ ಈ ದೇಶದ ‘ಸಬ್ ಕಾ ವಿಕಾಸ್’ ರೈಲು ಹರಿದು ಹೋಗಿದೆ. ಅಲ್ಪಸಂಖ್ಯಾತರು ಮತ್ತು ದಲಿತರು ಸರಕಾರದ ವಿಶ್ವಾಸ ದ್ರೋಹದಿಂದ ದಿಗ್ಭ್ರಾಂತರಾಗಿದ್ದಾರೆ. ತನ್ನದೇ ‘ಸಬ್ ಕಾ ವಿಶ್ವಾಸ್’ ಘೋಷಣೆಗೆ ಸ್ವತಃ ಮೋದಿ ಸರಕಾರವೇ ‘ವಿಶ್ವಾಸ ಘಾತುಕತನ’ ಎಸಗಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಭಾರೀ ಕಂದಕಗಳು ಬಿದ್ದಿವೆ. ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯುವಲ್ಲಿ ಸಿಕ್ಕಿದ ಎರಡನೇ ಅವಕಾಶವನ್ನು ನರೇಂದ್ರ ಮೋದಿಯವರು ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವ ನಿರೀಕ್ಷೆ ಬರೇ ಒಂದು ವರ್ಷದಲ್ಲೇ ಹುಸಿಯಾಗಿದೆ. ನರೇಂದ್ರ ಮೋದಿಯವರ ಸರಕಾರಕ್ಕೆ ತನ್ನ ಮಾನ ಉಳಿಸಲು ಸದ್ಯಕ್ಕಿರುವ ಒಂದೇ ಒಂದು ಭರವಸೆ ‘ಕೊರೋನ ವೈರಸ್’. ದೇಶದ ಇಂದಿನ ಸ್ಥಿತಿಗೆ ವಿಶ್ವವನ್ನು ಕಾಡಿರುವ ‘ಕೊರೋನ ವೈರಸ್’ ಸರಕಾರ ಜನರನ್ನು ಸಮಾಧಾನ ಪಡಿಸುತ್ತಿದೆ.

  

ಈ ಹಿಂದಿನ ಐದು ವರ್ಷವನ್ನು ನರೇಂದ್ರ ಮೋದಿಯವರ ‘ನೋಟು ನಿಷೇಧ’ ಬಲಿ ತೆಗೆದುಕೊಂಡಿತು. ಈ ಐದು ವರ್ಷದ ಅಧಿಕಾರಾವಧಿಯಲ್ಲಿ ತನ್ನನ್ನು ಕೆಲವು ಅಧಿಕಾರಿಗಳು ದಾರಿ ತಪ್ಪಿಸಿದರು ಎಂದು ಪ್ರಧಾನಿ ಮೋದಿಯವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಹಳಿತಪ್ಪಿರುವ ದೇಶದ ಅಭಿವೃದ್ಧಿಯ ಗತಿಯನ್ನು ಸರಿಪಡಿಸಲು ಬರೇ ಐದು ವರ್ಷ ಸಾಕಾಗುವುದಿಲ್ಲ ಎಂಬ ಅಸಹಾಯಕತೆಯನ್ನೂ ಅವರು ವ್ಯಕ್ತಪಡಿಸಿದ್ದರು. ಆದುದರಿಂದ ಸಿಕ್ಕ ಎರಡನೇಯ ಅವಕಾಶವನು ಅಭಿವೃದ್ಧಿಯೆಡೆಗೆ ದೇಶವನು ಕೊಂಡೊಯ್ಯಲು ಪರಿಣಾಮಕಾರಿಯಾಗಿ ಬಳಸಬಹುದು ಎನ್ನುವ ನಿರೀಕ್ಷೆಯನ್ನು ಜನರು ಹೊಂದಿದ್ದರು. ಮೊದಲನೆಯ ಐದು ವರ್ಷದ ಅನುಭವದ ಈ ನಿಟ್ಟಿನಲ್ಲಿ ಅವರಿಗೆ ನೆರವು ನೀಡಬಹುದು ಎಂದು ಜನರು ಭಾವಿಸಿದ್ದರು. ಇದೇ ಸಂದರ್ಭದಲ್ಲಿ ‘ಎಲ್ಲರ ವಿಶ್ವಾಸದ ಜೊತೆಗೆ ವಿಕಾಸ’ಎನ್ನುವ ಅವರ ಹೇಳಿಕೆಯೂ ಜನರಲ್ಲಿ ಸಾಕಷ್ಟು ಭರವಸೆಗಳನ್ನು ಹುಟ್ಟಿಸಿತ್ತು. ಆದರೆ ಕಳೆದ ಒಂದು ವರ್ಷದಲ್ಲಿ ನಡೆದಿರುವುದು ವಿಶ್ವಾಸದ ಜೊತೆಗೆ ವಿಕಾಸವಲ್ಲ, ವಿಕಾಸದ ಜೊತೆಗೆ ವಿಶ್ವಾಸಘಾತುಕತನ. ಎರಡನೆಯ ಅವಧಿಯಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ಮೋದಿಯವರು ಹಿಂದೆ ಸರಿದು, ಅಮಿತ್ ಶಾ ಮುನ್ನೆಲೆಗೆ ಬಂದರು. ‘ವಿಕಾಸ’ದ ಪದವನ್ನೇ ಕೈ ಬಿಟ್ಟು ಏಕಾಏಕಿ, ಕಾಶ್ಮೀರ, ರಾಮಮಂದಿರ, ಎನ್‌ಆರ್‌ಸಿಯಂತಹ ಭಾವನಾತ್ಮಕ ವಿಷಯಗಳಿಗೆ ಕೈ ಹಾಕಿದರು. ದೇಶ ಆರ್ಥಿಕವಾಗಿ ತೀವ್ರ ಹಿಂಜರಿಕೆಯನ್ನು ಅನುಭವಿಸುತ್ತಿರುವುದು ಮತ್ತು ಜನರು ನಾಲ್ಕೇ ತಿಂಗಳಲ್ಲಿ ನೂತನ ಸರಕಾರದ ಬಗ್ಗೆ ಭರವಸೆಗಳನ್ನು ಕಳೆದುಕೊಳ್ಳುತ್ತಿರುವುದನ್ನು ಮನಗಂಡು, ತನ್ನ ವೈಫಲ್ಯದ ಕಡೆಗೆ ಜನರ ಗಮನ ಹರಿಯದಂತೆ ನೋಡಿಕೊಳ್ಳುವುದಕ್ಕಾಗಿ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತಂದರು. ಕಾಶ್ಮೀರದ ಕುರಿತಂತೆ ಸರಕಾರ ಏಕಾಏಕಿ ತೆಗೆದುಕೊಂಡ ನಿರ್ಧಾರ ಸರಕಾರದ ಪಾಲಿಗೆ ಜೀರ್ಣಿಸಲು ಕಷ್ಟವಾಗಿದೆ. ಅಲ್ಲಿಯ ವಿಶೇಷ ಸ್ಥಾನಮಾನಗಳನ್ನು ಹಿಂದೆಗೆದುಕೊಂಡು ‘ಕಾಶ್ಮೀರವನ್ನು ಸಂಪೂರ್ಣವಾಗಿ’ ನಮ್ಮದಾಗಿಸಿಕೊಂಡೆವು ಎಂದು ಸರಕಾರ ಹೇಳುತ್ತಿದೆ. ಆದರೆ, ಅಲ್ಲಿನ ಜನರಿಂದ ಆರಿಸಲ್ಪಟ್ಟ ಜನ ನಾಯಕರು ಇನ್ನೂ ಗೃಹ ಬಂಧನದಲ್ಲೇ ಕೊಳೆಯುತ್ತಿದ್ದಾರೆ. ಭಾರೀ ಪ್ರಮಾಣದ ಸೇನೆ ಇಡೀ ಕಾಶ್ಮೀರವನ್ನು ಸುತ್ತುವರಿದಿದೆ. ಕಾಶ್ಮೀರವನ್ನು ಇನ್ನಷ್ಟು ಹತ್ತಿರವಾಗಿಸಿಕೊಂಡಿದ್ದೇವೆ ಎಂದಾದರೆ, ಕಾಶ್ಮೀರ ಯಾಕೆ ಇನ್ನೂ ದಿಗ್ಬಂಧನದಲ್ಲಿದೆ? ಈ ದೇಶದ ವಿರೋಧಪಕ್ಷದ ನಾಯಕರಿಗೆ ಯಾಕೆ ಇನ್ನೂ ಕಾಶ್ಮೀರದಲ್ಲಿ ಮುಕ್ತವಾಗಿ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿಲ್ಲ? ಕಾಶ್ಮೀರ ಕಳೆದ ಎಂಟು ತಿಂಗಳಿಂದ ಸಂಪೂರ್ಣ ದಿಗ್ಬಂಧನಕ್ಕೊಳಗಾಗಿ, ಅಲ್ಲಿನ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಕಾಶ್ಮೀರದ ಜನರನ್ನು ನಮ್ಮದಾಗಿಸದೆ, ಕೇವಲ ಕಾಶ್ಮೀರದ ನೆಲವನ್ನಷ್ಟೇ ನಮ್ಮದಾಗಿಸುವ ಸರಕಾರದ ಆತುರದ ನಿರ್ಧಾರ ಕಾಶ್ಮೀರದ ಮೇಲೆ, ಈ ದೇಶದ ಮೇಲೆ ಮಾತ್ರವಲ್ಲ, ನೆರೆಹೊರೆಯ ದೇಶಗಳ ಮೇಲೂ ದುಷ್ಪರಿಣಾಮ ಉಂಟು ಮಾಡಿದೆ. ನೇಪಾಳವನ್ನು ಮುಂದಿಟ್ಟುಕೊಂಡು ಚೀನಾ ಭುಸುಗುಡುತ್ತಿದೆ. ಸಂದರ್ಭವನ್ನು ಪಾಕಿಸ್ತಾನ ಕೂಡ ತನಗೆ ಪೂರಕವಾಗಿ ಬಳಸಲು ಯತ್ನಿಸುತ್ತಿದೆ. ಆರ್ಥಿಕವಾಗಿ ದೇಶ ತತ್ತರಿಸಿಕೂತಿದ್ದ ಹೊತ್ತಿನಲ್ಲಿ, ಕಾಶ್ಮೀರದಂತಹ ಸೂಕ್ಷ್ಮ ವಿಷಯಗಳಿಗೆ ಸರಕಾರ ಕೈ ಹಾಕಿದ್ದು ಎಷ್ಟು ಸರಿ? ಎನ್ನುವುದನ್ನು ಕಾಲವೇ ಹೇಳಬೇಕು. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಕಾಶ್ಮೀರ ಬಣಗುಡುತ್ತಿದೆ. ಸೇನೆಯ ಜೊತೆಗೆ ಕೊರೋನ ವೈರಸ್ ಕೂಡ ಕಾಶ್ಮೀರವನ್ನು ಸುತ್ತುವರಿದಿರುವುದರಿಂದ, ದಿಗ್ಬಂಧನ ದೊಳಗೊಂದು ದಿಗ್ಬಂಧನಕ್ಕೆ ಸಿಕ್ಕು ನರಳುತ್ತಿದೆ. ಕಾಶ್ಮೀರವನ್ನು ನಮ್ಮದಾಗಿಸಿಕೊಂಡಿದ್ದೇವೆ ಎಂದು ಮೋದಿ ಸರಕಾರ ಹೇಳಬಹುದು, ಆದರೆ ಅದನ್ನು ಕಾಶ್ಮೀರಿಗಳೂ ಕೂಡ ಘಂಟಾಘೋಷವಾಗಿ ಹೇಳುವವರೆಗೆ ಕಾಶ್ಮೀರ ಅಧಿಕೃತವಾಗಿ ನಮ್ಮದಾಗದು. ‘ರಾಮಮಂದಿರ’ ನಿರ್ಮಾಣಕ್ಕೆ ದಾರಿ ಸುಗಮ ಮಾಡಿಕೊಟ್ಟಿರುವುದು ತನ್ನ ಸಾಧನೆ ಎಂದು ಕೇಂದ್ರ ಸರಕಾರ ಕೊಚ್ಚಿಕೊಳ್ಳುತ್ತಿದೆ. ಆ ಮೂಲಕ, ತೀರ್ಪು ನೀಡಿರುವುದು ಸುಪ್ರೀಂಕೋರ್ಟ್ ಅಲ್ಲ, ತಾನು ಎಂದು ಪರೋಕ್ಷವಾಗಿ ಸರಕಾರ ಹೇಳಿಕೊಂಡಂತಾಗಿದೆ. ರಾಮಮಂದಿರ ವಿಷಯದಲ್ಲೂ ಸರಕಾರ ಸಂವಿಧಾನದ ಯಾವುದೇ ‘ನ್ಯಾಯ’ವನ್ನು ಪಾಲಿಸಲಿಲ್ಲ. ರಾಮಮಂದಿರ ಈ ದೇಶದ ವಿಕಾಸಕ್ಕೆ ಯಾವ ರೀತಿಯಲ್ಲೂ ತನ್ನ ಕೊಡುಗೆಯನ್ನು ಕೊಡಲಾರದು. ಆದರೂ ಅದನ್ನೇ ತನ್ನ ಸಾಧನೆಯಾಗಿ ಬಿಂಬಿಸುತ್ತಿದೆ. ಇದೇ ಸಂದರ್ಭದಲ್ಲಿ ಎನ್‌ಆರ್‌ಸಿಯ ಮೂಲಕ ಅಸ್ಸಾಮ್‌ನ ಸಹಸ್ರಾರು ಕಾರ್ಮಿಕರ ಬದುಕನ್ನು ಮೂರಾಬಟ್ಟೆ ಮಾಡಿತು. ಜನರನ್ನು ಇಬ್ಭಾಗಿಸುವುದಕ್ಕಾಗಿಯೇ ಎನ್‌ಆರ್‌ಸಿ ಹೆಸರಿನಲ್ಲಿ ಸಹಸ್ರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಅಂತಿಮವಾಗಿ ಸಾಧಿಸಿದ್ದೇನು? ಉತ್ತರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ. ‘ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸುತ್ತೇನೆ’ ಎಂದು ಘೋಷಿಸಿ, ದೇಶದೊಳಗೆ ಹೊಸತೊಂದು ಸ್ವಾತಂತ್ರ ಹೋರಾಟಕ್ಕೆ ಅಮಿತ್ ಶಾ ಕಾರಣವಾದರು. ಆದರೆ ಅವರು ಬಿತ್ತಿದ ವಿಷ ಬೀಜ ದೇಶಾದ್ಯಂತ ತನ್ನ ದುಷ್ಪರಿಣಾಮಗಳನ್ನು ಬೀರುತ್ತಲೇ ಇದೆ. ಸಿಎಎ ಕಾಯ್ದೆ ದೇಶವನ್ನು ಭಾಗಶಃ ಒಡೆಯಲು ಹವಣಿಸಿತು. ಆದರೆ ಅಷ್ಟರಲ್ಲೇ ದೇಶದೊಳಗೆ ಕಾಲಿಟ್ಟ ‘ಕೊರೋನ ವೈರಸ್’ ಒಡೆದ ದೇಶವನ್ನು, ಒಡೆದ ಮನಸ್ಸುಗಳನ್ನು ಒಂದಾಗಿಸಿತು. ಸಿಎಎ ವಿರುದ್ಧ ಸಿಡಿದೆದ್ದ ಜನರು ಅನಿವಾರ್ಯವಾಗಿ ತಮ್ಮ ಹೋರಾಟವನ್ನು ಕೊರೋನ ವಿರುದ್ಧ ತಿರುಗಿಸಬೇಕಾಯಿತು. ಆದರೆ ‘ವಿಕಾಸ’ದ ಮೇಲೆ ಮತ್ತೆ ವಿಶ್ವಾಸಘಾತವಾಯಿತು. ಆರ್ಥಿಕತೆಯ ಮೇಲೆ ಸಿಎಎ ಕಾಯ್ದೆಯೂ ತನ್ನ ದುಷ್ಪರಿಣಾಮಗಳನ್ನು ಬೀರಿತು. ತನ್ನದೇ ಜನರ ಮೇಲೆ ಲಾಠಿ ಬೀಸುವುದಕ್ಕೆ ಕಾನೂನು ವ್ಯವಸ್ಥೆಯನ್ನು ಬಳಸಲಾಯಿತು. ಸರಕಾರದ ಪ್ರಾಯೋಜಕತ್ವದಲ್ಲೇ ದಿಲ್ಲಿಯಲ್ಲಿ ದಂಗೆಯಾಯಿತು. 50ಕ್ಕೂ ಅಧಿಕ ಮಂದಿ ಬಲಿಯಾದರು. ಭಾರೀ ಪ್ರಮಾಣದ ನಾಶ ನಷ್ಟ ಸಂಭವಿಸಿತು. ದೇಶವನ್ನು ವಿಚ್ಛಿದ್ರಗೊಳಿಸಲು ತನ್ನ ಗರಿಷ್ಠ ಕೊಡುಗೆಗಳನ್ನು ನೀಡಿರುವ ಅಮಿತ್ ಶಾ ಇಂದು ಸರಕಾರದಿಂದ ನಿಗೂಢವಾಗಿ ಮರೆಗೆ ಸರಿದಿದ್ದಾರೆ. ಮೋದಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ಆರ್ಥಿಕವಾಗಿ ನೆಲಕಚ್ಚಿದ್ದ ಭಾರತ ಹೊಟ್ಟೆ ಎಳೆದುಕೊಂಡು ಚಲಿಸುತ್ತಿದ್ದ ಕಾಲದಲ್ಲೇ ಕೊರೋನ ಆಗಮನ ಅದರ ಅಳಿದುಳಿದ ಚಲನೆಗಳಿಗೂ ಚಪ್ಪಡಿಕಲ್ಲು ಎಳೆಯಿತು. ವಿದೇಶಗಳಲ್ಲಿ ಕೊರೋನ ಸಾವಿನ ಮೃದಂಗ ಬಾರಿಸುತ್ತಿದ್ದ ಸಂದರ್ಭದಲ್ಲಿ, ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸಿ, ಆಗಮಿಸುವ ಪ್ರಯಾಣಿಕರ ಮೇಲೆ ಕಣ್ಗಾವಲಿಟ್ಟಿದ್ದರೆ ಇಂದು ದೇಶದೊಳಗೆ ಕೊರೋನ ವೈರಸ್ ಈ ಪ್ರಮಾಣದಲ್ಲಿ ಹರಡುತ್ತಿರಲಿಲ್ಲ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ‘ನಮಸ್ತೆ ಟ್ರಂಪ್’ ಸಮಾವೇಶವೇ ದೇಶದೊಳಗೆ ಕೊರೋನ ಹರಡುವುದಕ್ಕೆ ಮುಖ್ಯ ಕಾರಣವಾಯಿತು. ವಿದೇಶಿ ಪ್ರಯಾಣಿಕರಿಗಷ್ಟೇ ಸೀಮಿತವಾಗಬೇಕಾಗಿದ್ದ ‘ಲಾಕ್ ಡೌನ್’ ಇಡೀ ದೇಶಕ್ಕೆ ಅನ್ವಯವಾಯಿತು. ದೇಶಕ್ಕೆ ‘ಲಾಕ್‌ಡೌನ್’ ವಿಧಿಸುವ ಸಂದರ್ಭದಲ್ಲೂ, ಮೋದಿಯವರ ‘ಸಬ್ ಕಾ ವಿಶ್ವಾಸ್’ ಕಾರ್ಯರೂಪಕ್ಕೆ ಬರಲಿಲ್ಲ. ಆದುದರಿಂದಲೇ ವಲಸೆ ಕಾರ್ಮಿಕರ ಸಮಸ್ಯೆ ತಲೆಯೆತ್ತಿತು. ತಮ್ಮದೇ ದೇಶದೊಳಗೆ ಅನ್ಯರಾಗಿ, ಕಾರ್ಮಿಕರು ಬೀದಿ ಹೆಣವಾದರು. ನರೇಂದ್ರ ಮೋದಿಯವರ ಒಂದು ವರ್ಷದ ಬಹುದೊಡ್ಡ ಸಾಧನೆಯೆಂದರೆ, ತಮ್ಮದೇ ಕನಸಿನ ಕೂಸು ‘ಸಬ್ ಕಾ ಸಾಥ್ ವಿಕಾಸ್’ಗೆ ವಿಶ್ವಾಸದ್ರೋಹವೆಸಗಿರುವುದು. ಮೋದಿಯವರ ವಿಕಾಸ್ ಹೆದ್ದಾರಿಗಳಲ್ಲಿ, ರೈಲ್ವೆ ಹಳಿಗಳಲ್ಲಿ ಛಿದ್ರವಾಗಿ ಬಿದ್ದಿದೆ. ಅಮಿತ್‌ಶಾನ ಹೆಗಲ ಮೇಲೆ ಕೂತು ಮುಂದೆ ಹೊರಟ ಮೋದಿ ಸರಕಾರದ ಸ್ಥಿತಿ ‘ಹೆಳವನ ಹೆಗಲಲ್ಲಿ ಕುರುಡ’ ಕೂತಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News