ಜನ ಸಾಮಾನ್ಯರಿಗೆ ಶಾಕ್: ಅಡುಗೆ ಅನಿಲ ಬೆಲೆಯಲ್ಲಿ ದಿಢೀರ್ ಏರಿಕೆ

Update: 2020-06-01 07:32 GMT

 ಹೊಸದಿಲ್ಲಿ, ಜೂ.1: ಕೇಂದ್ರ ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ಬಹುತೇಕ ಕಾರ್ಯ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ಈ ಮಧ್ಯೆ ಜನ ಸಾಮಾನ್ಯರಿಗೆ ಅಡುಗೆ ಅನಿಲ ಏರಿಕೆಯ ಬರೆ ಬಿದ್ದಿದೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜೂನ್‌ನಲ್ಲಿ ಬೆಲೆಗಳಲ್ಲಿ ಏರಿಕೆಯಾದ ಕಾರಣ ಭಾರತದಲ್ಲಿ ಎಲ್‌ಪಿಜಿ ದರವನ್ನು ಜೂನ್ 1ರಿಂದ ಜಾರಿಗೆ ಬರುವಂತೆ ಏರಿಕೆ ಮಾಡಲಾಗಿದೆ. ದಿಲ್ಲಿಯಲ್ಲಿ ಗ್ರಾಹಕರು ಪ್ರತಿ ಸಿಲಿಂಡರ್‌ಗೆ 11.50 ರೂ. ಹೆಚ್ಚಿಗೆ ನೀಡಬೇಕಾಗುತ್ತದೆ ಎಂದು ಐಒಸಿ ಪ್ರಕಟನೆಯಲ್ಲಿ ತಿಳಿಸಿದೆ.

 ಇಂದಿನ ಹೊಸ ಹೊಂದಾಣಿಕೆಯ ಬಳಿಕ ಸಬ್ಸಿಡಿರಹಿತ 14.2 ಕೆಜಿಯ ಅಡುಗೆ ಅನಿಲ ಸಿಲಿಂಡರ್ ಬೆಲೆ ದಿಲ್ಲಿಯಲ್ಲಿ 593,ಮುಂಬೈನಲ್ಲಿ 590.50 ರೂ.,ಚೆನ್ನೈನಲ್ಲಿ 606.50 ಹಾಗೂ ಕೋಲ್ಕತಾದಲ್ಲಿ 616 ರೂ. ಏರಿಕೆಯಾಗಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ದರ ಏರಿಕೆ ಅನ್ವಯವಾಗುವುದಿಲ್ಲ.ಇವರೆಲ್ಲರೂ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬರುತ್ತಾರೆ. ಅವರಿಗೆ ಜೂನ್ 30ರ ತನಕ ಉಚಿತ ಸಿಲಿಂಡರ್ ಲಭ್ಯವಿರುತ್ತದೆ ಎಂದು ಇಂಡಿಯನ್ ಆಯಿಲ್ ಕಂಪೆನಿ ತಿಳಿಸಿದೆ.

ಇಂಧನ ರಿಟೇಲರ್‌ಗಳು ಪ್ರತಿ ತಿಂಗಳ ಮೊದಲ ದಿನ ಎಲ್ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕೃರಣೆ ಮಾಡುತ್ತಾರೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ದರ ,ಅಮೆರಿಕ ಡಾಲರ್ ಹಾಗೂ ಭಾರತೀಯ ರೂಪಾಯಿ ವೌಲ್ಯಗಳನ್ನು ಆಧರಿಸಿ ಬೆಲೆ ನಿರ್ಧಾರ ಮಾಡಲಾಗುತ್ತದೆ.

 ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ಅನಿಲ ಬೆಲೆ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಎಲ್‌ಪಿಜಿ ದರ ಭಾರೀ ಇಳಿಕೆ ಕಂಡಿತ್ತು. 744 ರೂ. ಇದ್ದ ಸಿಲಿಂಡರ್ ದರ 581ರೂ. ಆಗಿತ್ತು. ಆದರೆ ಈ ತಿಂಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ದರ ಏರಿಕೆ ಕಂಡ ಹಿನ್ನೆಲೆಯಲ್ಲಿ ಸಿಲಿಂಡರ್‌ಗೆ 11 ರೂ. ಏರಿಕೆ ಮಾಡಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News