ಭಾರತ: ಕೊರೋನ ಪ್ರಕರಣ ಹೆಚ್ಚಳ; ಸಾವಿನ ಪ್ರಮಾಣ ಇಳಿಕೆ

Update: 2020-06-02 03:49 GMT

ಹೊಸದಿಲ್ಲಿ, ಜೂ.2: ದೇಶದಲ್ಲಿ ಒಂದೆಡೆ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇದ್ದರೂ, ಅಧಿಕ ಸಂಖ್ಯೆಯ ರೋಗಿಗಳು ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಸರ್ಕಾರ ಪ್ರಕಟಿಸಿದೆ.

45 ದಿನಗಳ ಹಿಂದೆ ದೇಶದಲ್ಲಿ 3.3% ಇದ್ದ ಸಾವಿನ ದರ ಇದೀಗ 2.83%ಗೆ ಇಳಿದಿದೆ. ಈ ಮಧ್ಯೆ ದೇಶದಲ್ಲಿ 230 ಮಂದಿ ಸೋಂಕಿತರು ಮೃತಪಟ್ಟಿದ್ದು, 8,392 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಇದರಿಂದ ದೇಶದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,934ಕ್ಕೇರಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,90,535 ಆಗಿದೆ. 93,322 ಸಕ್ರಿಯ ಪ್ರಕರಣಗಳಲ್ಲಿ ವೈದ್ಯಕೀಯ ನಿಗಾ ವಹಿಸಲಾಗುತ್ತಿದೆ. ದೇಶದಲ್ಲಿ 91,818 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 4,835 ಮಂದಿ ಚಿಕಿತ್ಸೆ ಬಳಿಕ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು ಕೋವಿಡ್-19 ಸೋಂಕಿತರ ಪೈಕಿ ಚೇತರಿಸಿಕೊಳ್ಳುತ್ತಿರುವ ಪ್ರಮಾಣ 48.18%ಗೆ ಹೆಚ್ಚಿದೆ. ಮೇ 18ರಂದು ಇದು 38.29% ಇದ್ದರೆ ಮೇ 3ರಂದು 26.59% ಆಗಿತ್ತು. ಎಪ್ರಿಲ್ 15ರ ವೇಳೆಗೆ ಇದು ಕೇವಲ 11.42% ಆಗಿತ್ತು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಈ ಪುನಶ್ಚೇತನ ದರ, ಸಕಾಲಿಕವಾಗಿ ಪ್ರಕರಣ ಪತ್ತೆ ಮಾಡಿ ಚಿಕಿತ್ಸೆ ನೀಡುತ್ತಿರುವುದು, ವೈದ್ಯಕೀಯ ಮೂಲ ಸೌಕರ್ಯ ಮತ್ತು ಆರೋಗ್ಯ ಶಿಷ್ಟಾಚಾರಗಳನ್ನು ಪಾಲಿಸುತ್ತಿರುವುದರ ಸೂಚಕವಾಗಿದೆ ಎಂದು ಸಚಿವಾಲಯ ವಿವರಿಸಿದೆ.

ಜಾಗತಿಕವಾಗಿ ಸೋಂಕಿತರ ಸಾವಿನ ಪ್ರಮಾಣ 6.19% ಇದ್ದು, ಫ್ರಾನ್ಸ್‌ನಲ್ಲಿ ಈ ಪ್ರಮಾಣ ಗರಿಷ್ಠ (19.35) ವಾಗಿದ್ದು, ಬೆಲ್ಜಿಯಂನಲ್ಲಿ 16.25%, ಇಟೆಲಿಯಲ್ಲಿ 14.33% ಮತ್ತು ಬ್ರಿಟನ್‌ನಲ್ಲಿ 14.07% ಇದೆ ಎಂದು ವಿವರ ನೀಡಿದೆ. ದೇಶದಲ್ಲಿ 472 ಸರ್ಕಾರಿ ಹಾಗೂ 204 ಖಾಸಗಿ ಪ್ರಯೋಗಾಲಯಗಳು ಒಟ್ಟು 676 ಪ್ರಯೋಗಾಲಯಗಳಲ್ಲಿ ಪರೀಕ್ಷಾ ಸೌಲಭ್ಯ ಕಲ್ಪಿಸಲಾಗಿದೆ. ಇದುವರೆಗೆ 38,37,207 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News