ಪುಟ್ಟೇನಹಳ್ಳಿ ಕೆರೆ ನಿರ್ವಹಣೆ ಬಿಬಿಎಂಪಿಗೆ ವಹಿಸಿದ ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-06-02 11:50 GMT

ಬೆಂಗಳೂರು, ಜೂ.2: ಯಲಹಂಕದ ಪುಟ್ಟೇನಹಳ್ಳಿ ಕೆರೆ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಿದ ನಗರಾಭಿವೃದ್ಧಿ ಇಲಾಖೆ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. 

ಯಲಹಂಕದ ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು, ಪ್ರತಿವಾದಿಯಾದ ರಾಜ್ಯ ಮುಖ್ಯ ವನ್ಯಜೀವಿ ಪರಿಪಾಲಕ, ವನ್ಯಜೀವಿ ಸಂರಕ್ಷಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತು. 

ಅರ್ಜಿಯಲ್ಲಿ ಯಲಹಂಕದ ಪುಟ್ಟೇನಹಳ್ಳಿ ಕೆರೆ ಮತ್ತು ಅಚ್ಚುಕಟ್ಟು ಪ್ರದೇಶದಲ್ಲಿ 175ಕ್ಕೂ ಅಧಿಕ ಪ್ರಭೇದದ ಪಕ್ಷಿ ಸಂಕುಲವಿದೆ. ಹೀಗಾಗಿ, ಈ ಪ್ರದೇಶವನ್ನು ಪಕ್ಷಿ ಸಂರಕ್ಷಿತ ವಲಯವೆಂದು ಘೋಷಿಸಿ ಅರಣ್ಯ ಇಲಾಖೆ 2015ರ ಸೆ.10ರಂದು ಅಧಿಸೂಚನೆ ಹೊರಡಿಸಿದೆ.
ಆದರೂ ನಗರಾಭಿವೃದ್ಧಿ ಇಲಾಖೆ 2019ರ ಡಿ.11ರಂದು ಕೆರೆಯನ್ನು ಬಿಬಿಎಂಪಿ ನಿರ್ವಹಣೆ ವಹಿಸಿ ಆದೇಶಿಸಿದೆ. ಪಕ್ಷಿ ಸಂರಕ್ಷಣಾ ವಲಯವನ್ನು ಕೇವಲ ಕೆರೆ ಎಂದಷ್ಟೇ ನಮೂದಿಸಿ ಬಿಬಿಎಂಪಿಗೆ ಹಸ್ತಾಂತರಿಸಿದೆ. ಈಗ ಬಿಬಿಎಂಪಿ ಇಂಜಿನಿಯರ್‍ಗಳು ಕೆರೆ ಅಭಿವೃದ್ಧಿ ಮತ್ತು ನಿರ್ವಹಣೆಗೆ ಟೆಂಡರ್ ಕರೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. 

ಪಕ್ಷಿ ಸಂರಕ್ಷಿತ ವಲಯವನ್ನು ನಿರ್ವಹಣೆ ಮಾಡುವ ಕೌಶಲ್ಯ ಬಿಬಿಎಂಪಿಗೆ ಇಲ್ಲ. ಕೆರೆ ನಿರ್ವಹಣೆಯನ್ನು ಟೆಂಡರ್ ಮೂಲಕ ಬೇರೆಯವರಿಗೆ ವಹಿಸಿದರೆ ಸಮಸ್ಯೆ ಆಗಲಿದೆ. ಪಾಲಿಕೆ, ಕೆರೆ ಅಭಿವೃದ್ಧಿ ಮತ್ತು ನಿರ್ವಹಣೆಗೆ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಪುಟ್ಟೇನಹಳ್ಳಿ ಕೆರೆಯನ್ನು ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕರ ವ್ಯಾಪ್ತಿಗೆ ನೀಡಬೇಕು. ಕೆರೆಗೆ ನಗರದ ತ್ಯಾಜ್ಯ ನೀರು ಹರಿಯದಂತೆ ತಡೆಯಲು ಜಲಮಂಡಳಿಗೆ ನಿರ್ದೇಶಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News