ಜನಾಕ್ರೋಶ: ಅಡಗಿ ಕುಳಿತ ಟ್ರಂಪ್

Update: 2020-06-03 06:01 GMT

ಕಳೆದ ಒಂದು ವಾರದಿಂದ ಅಮೆರಿಕ ಹೊತ್ತಿ ಉರಿಯುತ್ತಿದೆ. ಉಡಾಫೆ ಮಾತಿಗೆ ಹೆಸರಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮತ್ತು ಪುತ್ರನೊಂದಿಗೆ ಶ್ವೇತಭವನದ ಭೂಗತ ಬಂಕರ್‌ನೊಳಗೆ ಅಡಗಿ ಕುಳಿತುಕೊಳ್ಳಬೇಕಾಯಿತು. ಜನತೆಯ ಸಹನೆಯ ಕಟ್ಟೆಯೊಡೆದು ಆಕ್ರೋಶದ ಜ್ವಾಲೆ ದೇಶದ 140 ಕ್ಕೂ ಹೆಚ್ಚು ನಗರಗಳಿಗೆ ವ್ಯಾಪಿಸಿದೆ. ಹಿಂಸಾಚಾರದಲ್ಲಿ ಐದಕ್ಕೂ ಹೆಚ್ಚು ಮಂದಿ ಅಸು ನೀಗಿದ್ದಾರೆ. ಮೂರನೇ ಜಗತ್ತಿನ ದೇಶಗಳಿಗೆ ಬೆಂಕಿ ಹಚ್ಚಿ ಉರಿ ಕಾಯಿಸಿಕೊಳ್ಳುತ್ತ ಬಂದ ಕುಖ್ಯಾತಿ ಹೊಂದಿರುವ ಅಮೆರಿಕ ಈಗ ಸ್ವತಃ ಹಿಂಸೆಯ ದಳ್ಳುರಿಯ ಬಿಸಿಯನ್ನು ಅನುಭವಿಸುತ್ತಿದೆ. ಯಾವುದೇ ರಾಜಕೀಯ ತಿಳುವಳಿಕೆ ಇಲ್ಲದ, ಕಾರ್ಪೊರೇಟ್ ಜಗತ್ತಿನ ಚೇಲಾವೊಬ್ಬನ ಕೈಯಲ್ಲಿ ದೇಶವೊಂದು ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ ಅಮೆರಿಕ ಕಣ್ಣ ಮುಂದಿನ ಉದಾಹರಣೆಯಾಗಿದೆ. ಜನಾಕ್ರೋಶದ ಕಿಡಿ ದಳ್ಳುರಿಯಾಗಲು ಕಾರಣವಿಷ್ಟೆ, ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡಾ ಎಂಬವರನ್ನು ಮಿನಪೊಲಿಸ್ ನಗರದ ಶ್ವೇತವರ್ಣೀಯ ಪೊಲೀಸ್ ಅಧಿಕಾರಿಯೊಬ್ಬ ನೆಲಕ್ಕೆ ಕೆಡವಿ ಆತನ ಕತ್ತಿನ ಮೇಲೆ ಮಂಡಿಯಿಟ್ಟು ಉಸಿರುಗಟ್ಟಿ ಸಾಯುವಂತೆ ಮಾಡಿದ. ಇದು ಜನಾಂಗೀಯ ದೌರ್ಜನ್ಯ ಎಂದು ಅಮೆರಿಕದ ಜನ ಒಂದಾಗಿ ಬೀದಿಗಿಳಿದಿದ್ದಾರೆ. ಆರಂಭದಲ್ಲಿ ಸ್ಥಳೀಯವಾಗಿದ್ದ ಪ್ರತಿಭಟನೆ ಈಗ ಅಮೆರಿಕದಾದ್ಯಂತ ವ್ಯಾಪಿಸಿದೆ. ಲಾಸ್ ಏಂಜಲಿಸ್, ಷಿಕಾಗೊ, ನ್ಯೂಯಾರ್ಕ್, ಹ್ಯೂಸ್ಟನ್, ಫಿಲಡೆಲ್ಫಿಯಾ ಹಾಗೂ ವಾಶಿಂಗ್ಟನ್ ಡಿಸಿಗಳಲ್ಲೂ ಜನ ರಸ್ತೆಗೆ ಬಂದಿದ್ದಾರೆ, ಶ್ವೇತಭವನದ ಸುತ್ತಲೂ ಜಮಾಯಿಸಿದ್ದಾರೆ.

ಅಮೆರಿಕದ ಜನರ ಆಕ್ರೋಶಕ್ಕೆ ಈ ಘಟನೆ ನೆಪವಾಗಿದ್ದರೂ ಟ್ರಂಪ್ ಆಡಳಿತದ ವೈಫಲ್ಯದ ವಿರುದ್ಧ ಅವರು ಬಹುವರ್ಷಗಳಿಂದ ನುಂಗಿಕೊಂಡಿದ್ದ ಸಿಟ್ಟು ಹೊರಗೆ ಬಂದಿದೆ. ಕೋವಿಡ್‌_-19 ಎದುರಿಸುವಲ್ಲಿ ವೈಫಲ್ಯ, ಅಪಾರ ಸಾವು ನೋವುಗಳು, ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ದುರವಸ್ಥೆಯ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ.

ಅಮೆರಿಕದಲ್ಲಿ ಕೊರೋನ ವ್ಯಾಪಕವಾಗಿ ಹಬ್ಬುತ್ತಿರುವಾಗಲೂ ಅದನ್ನು ನಿಗ್ರಹಿಸಲು ಟ್ರಂಪ್ ಆಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಲಕ್ಷ ದಾಟಿದೆ. ಜನ ಈ ರೀತಿ ಸಾಯುತ್ತಿರುವಾಗಲೂ ಮುಂದಿನ ಚುನಾವಣೆ ಗೆಲ್ಲುವ ಆತುರದಲ್ಲಿ ಮುಳುಗಿದ ಟ್ರಂಪ್ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಚೀನಾದ ಮೇಲೆ ಗೂಬೆ ಕೂರಿಸುತ್ತಲೇ ಹೋದರು.

ಕೊರೋನದಿಂದ ಇಡೀ ಮಾನವಕುಲ ಸಂಕಷ್ಟದ ಉರಿಯಲ್ಲಿ ಬೆಂದು ಹೋಗುತ್ತಿರುವಾಗ ಟ್ರಂಪ್ ಎಂದೂ ಜವಾಬ್ದಾರಿಯಿಂದ ನಡೆದುಕೊಳ್ಳಲಿಲ್ಲ. ಅನಗತ್ಯವಾಗಿ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ವಿಷ ಕಾರುತ್ತ ಬಂದರು. ಈ ವರ್ಷ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಕೊರೋನ ವಿಷಯದಲ್ಲಿ ಚೀನಾವನ್ನು ತೆಗಳಿದರೆ ರಾಜಕೀಯವಾಗಿ ಲಾಭ ಮಾಡಿಕೊಳ್ಳಬಹುದೆಂಬುದು ಟ್ರಂಪ್ ಲೆಕ್ಕಾಚಾರವಾಗಿದೆ. ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯನ್ನು( ಡಬ್ಲುಎಚ್‌ಒ) ಬಳಸಿಕೊಂಡು ಚೀನಾದ ಮೇಲೆ ಗೂಬೆ ಕೂರಿಸಲು ನೋಡಿದರು ಆದರೆ ಅದು ಮಣಿಯಲಿಲ್ಲ. ಕೊನೆಗೆ ಅದಕ್ಕೆ ನೀಡುವ ಸಹಾಯ ಧನವನ್ನು ನಿಲ್ಲಿಸುವ ಬೆದರಿಕೆ ಹಾಕಿದರು. ಹೀಗೆ ಹೊಣೆ ಗೇಡಿತನದಿಂದ ವರ್ತಿಸುತ್ತ ಬಂದ ಟ್ರಂಪ್ ವಿರುದ್ಧ ಜನಾಕ್ರೋಶ ಮಡುಗಟ್ಟತೊಡಗಿತು. ಅದೀಗ ಕಟ್ಟೆಯೊಡೆದು ಶ್ವೇತ ಭವನವನ್ನು ಸುತ್ತುವರಿದಿದೆ.

 ಇಂತಹ ಟ್ರಂಪ್ ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ಆಪ್ತಮಿತ್ರ. ಇವರನ್ನು ಅಮೆರಿಕಕ್ಕೆ ಕರೆಯಿಸಿ ‘ಹೌಡಿ ಮೋದಿ’ ಜಾತ್ರೆ ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಟ್ರಂಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವವರು ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು. ಅಲ್ಲಿದ್ದುಕೊಂಡು ಮೋದಿ ಭಜನೆಯನ್ನು ಮಾಡುತ್ತ, ಜನಾಂಗ ದ್ವೇಷವನ್ನೇ ದೇಶಭಕ್ತಿ ಎಂದು ತಿಳಿದುಕೊಂಡ ಅನೇಕರು ಅಲ್ಲಿ ಟ್ರಂಪ್ ಗೆಲುವಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ನಮ್ಮ ಪ್ರಧಾನ ಮಂತ್ರಿ ಕೊರೋನ ಹಬ್ಬುವ ಭೀತಿ ಆವರಿಸುತ್ತಿರುವಾಗಲೇ ತಮ್ಮ ಮಿತ್ರ ಟ್ರಂಪ್‌ರನ್ನು ಗುಜರಾತ್‌ಗೆ ಕರೆಯಿಸಿ ‘ನಮಸ್ತೆ ಟ್ರಂಪ್’ ಜಾತ್ರೆ ಮಾಡಿ ಲಕ್ಷಾಂತರ ಜನರನ್ನು ಸೇರಿಸಿದ್ದರು. ಅಮೆರಿಕದ ಅಧ್ಯಕ್ಷರಿಗೆ ಅಹಮದಾಬಾದ್‌ನ ಕೊಳಚೆ ಪ್ರದೇಶಗಳು ಕಾಣಬಾರದೆಂದು ದಾರಿಯ ಎರಡೂ ಬದಿಗೆ ಗೋಡೆಗಳನ್ನು ನಿರ್ಮಿಸಿದ್ದರು. ಇಂತಹ ಸೂಕ್ಷ್ಮ ಸನ್ನಿವೇಶದಲ್ಲೂ ಬಾಯಿ ಬಡುಕ ಟ್ರಂಪ್ ನಾಲಿಗೆ ಹರಿಬಿಡುತ್ತಲೇ ಇದ್ದಾರೆ. ಇದರಿಂದಾಗಿ ರೋಸಿ ಹೋಗಿರುವ ಅಮೆರಿಕದ ಪೊಲೀಸ್ ಉನ್ನತಾಧಿಕಾರಿಯೊಬ್ಬರು ಏನಾದರೂ ರಚನಾತ್ಮಕವಾಗಿರುವುದನ್ನು ಮಾಡಿ ಇಲ್ಲವೇ ಬಾಯಿ ಮುಚ್ಚಿಕೊಂಡು ತೆಪ್ಪಗಿರಿ ಎಂದು ಹೇಳಿದ್ದಾರೆ. ಆದರೂ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಂಡ ಕಂಡವರ ಮೇಲೆ ಹರಿಹಾಯುತ್ತಿರುವ ಟ್ರಂಪ್ ಜನರ ಪ್ರತಿಭಟನೆಯ ಬಗ್ಗೆ ಸಹಾನುಭೂತಿ ತೋರಿಸುವ ಬದಲಿಗೆ ಪದೇ ಪದೇ ಟ್ವೀಟ್ ಮಾಡುತ್ತ ಮಾಧ್ಯಮಗಳ ಮೇಲೆ ಕಿಡಿ ಕಾರುತ್ತಿದ್ದಾರೆ.ದೇಶದಲ್ಲಿ ಅರಾಜಕತೆ,ಹಿಂಸಾಚಾರಕ್ಕೆ ಮಾಧ್ಯಮಗಳು ಕಾರಣ ಎಂದು ಹೇಳಿದ್ದಾರೆ.ಜನರ ಪ್ರತಿಭಟನೆಯ ನೇತೃತ್ವ ವಹಿಸಿರುವ ಎಡಪಂಥೀಯ ಆ್ಯಂಟಿಫಾ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರತಿಭಟನೆಯ ವರದಿ ಮಾಡಲು ಹೋಗಿದ್ದ ಪತ್ರಕರ್ತರಲ್ಲಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಜಗತ್ತಿನ ಸ್ವತಂತ್ರ ರಾಷ್ಟ್ರಗಳನ್ನು ಅಸ್ಥಿರಗೊಳಿಸುತ್ತ ಅಲ್ಲಿ ತನ್ನ ಚೇಲಾ ಸರಕಾರಗಳನ್ನು ಹೇರುತ್ತಾ ಆ ದೇಶಗಳ ಸಂಪನ್ಮೂಲಗಳನ್ನು ಲೂಟಿ ಮಾಡುತ್ತ ಬಂದ ಅಮೆರಿಕ ಈಗ ತಾನೇ ಅಸ್ಥಿರತೆಯ ಸುಳಿಗೆ ಸಿಲುಕಿದೆ. ಕೊರೋನ ಇಡೀ ದೇಶವನ್ನು ಹಿಂಡಿ ಹಿಪ್ಪೆ ಮಾಡಿದೆ. ತನ್ನ ಪ್ರಜೆಗಳು ನಿತ್ಯವೂ ಸಾವಿನ ಮನೆಗೆ ದೂಡಲ್ಪಡುತ್ತಿರುವಾಗ ಇದರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲದ ಲಾಭಕೋರ ಕಾರ್ಪೊರೇಟ್ ಬಂಡವಾಳಶಾಹಿ ದಲ್ಲಾಳಿ ಟ್ರಂಪ್ ಉಡಾಫೆಯ ಮಾತುಗಳನ್ನು ಆಡುತ್ತಾ ಜನರ ಆಕ್ರೋಶಕ್ಕೆ ತುತ್ತಾಗಿ ನೆಲದಾಳದ ಬಂಕರ್‌ನಲ್ಲಿ ಅಡಗಿ ಕುಳಿತುಕೊಳ್ಳಬೇಕಾಯಿತು.

ಅಮೆರಿಕದ ಇಂದಿನ ಪರಿಸ್ಥಿತಿ ಭಾರತ ಸೇರಿದಂತೆ ಜಗತ್ತಿನ ಎಲ್ಲ ದೇಶಗಳಿಗೂ ಒಂದು ಪಾಠವಾಗಬೇಕಾಗಿದೆ. ಅಲ್ಲಿ ಕಪ್ಪುಜನರ ಬಗ್ಗೆ ಬಣ್ಣದ ಆಧಾರದಲ್ಲಿ ಜನಾಂಗ ದ್ವೇಷವಿದ್ದರೆ, ಇಲ್ಲಿ ಜಾತಿಭೇದ, ಅಸ್ಪಶ್ಯತೆ ಹಾಗೂ ಅಲ್ಪಸಂಖ್ಯಾತರ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ಪೂರ್ವಾಗ್ರಹ ಭಾವನೆ ಇದೆ. ಇಂತಹ ಭಾವಾವೇಶವೇ ಈ ದೇಶದ ಇಂದಿನ ಆಳುವ ಪಕ್ಷದ ಗೆಲುವಿನ ಗುಟ್ಟಾಗಿದೆ. ಮಿತಿ ಮೀರಿದ ಮತಾಂಧತೆ, ವಿಪರೀತ ವ್ಯಕ್ತಿಪೂಜೆಗಳು ಕೊನೆಗೆ ಇಡೀ ದೇಶವನ್ನೇ ಮುಳುಗಿಸುತ್ತವೆ ಎಂಬ ಎಚ್ಚರ ಎಲ್ಲ ದೇಶಗಳಲ್ಲಿ ಮೂಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News