‘ಇಂಡಿಯಾ’ ಹೆಸರು ತೆಗೆದು ಹಾಕುವಂತೆ ಕೋರಿದ್ದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದು ಹೀಗೆ...

Update: 2020-06-03 15:39 GMT

ಹೊಸದಿಲ್ಲಿ : ದೇಶದ ಹೆಸರು ಕೇವಲ ‘ಭಾರತ್’ ಎಂದು ಮಾತ್ರ ಇರಬೇಕು ಹಾಗೂ ‘ಇಂಡಿಯಾ’ ಪದವನ್ನು ತೆಗೆಯಲು ಅನುವಾಗಲು ಸಂವಿಧಾನ ತಿದ್ದುಪಡಿ ಮಾಡಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‍ನಲ್ಲಿ ನಡೆದಿದೆ.

ಈ ಸಂದರ್ಭ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, “ಸಂವಿಧಾನದಲ್ಲಿ ಇಂಡಿಯಾ ಈಗಾಗಲೇ ಭಾರತ್  ಎಂದೇ ಕರೆಯಲ್ಪಡುವುದರಿಂದ ಸುಪ್ರೀಂ ಕೋರ್ಟ್‍ಗೆ  ಈ ಕುರಿತು ಏನೂ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.

ಸಂವಿಧಾನದ ಒಂದನೇ ವಿಧಿಗೆ ತಿದ್ದುಪಡಿ ತರಬೇಕೆಂದು  ದಿಲ್ಲಿ ಮೂಲದ ವ್ಯಕ್ತಿಯೊಬ್ಬರು  ತಮ್ಮ ಪಿಐಎಲ್‍ನಲ್ಲಿ  ಕೋರಿದ್ದರಲ್ಲದೆ ಇಂತಹ ಒಂದು ಕ್ರಮವು ದೇಶದ ವಸಾಹತುಶಾಹಿ  ನೆನಪನ್ನು ಅಳಿಸಲು ನಾಗರಿಕರಿಗೆ ಸಹಾಯ ಮಾಡುವುದು ಎಂದೂ ವಾದಿಸಿದ್ದರು.

“ಭಾರತದ ಹೆಸರಿನ ಆಂಗ್ಲ ಪದವನ್ನು ತೆಗೆದು ಹಾಕುವುದು ಕೇವಲ ಸಾಂಕೇತಿಕ ಎಂದು ಕಂಡರೂ ಅದು ನಮಗೆ ಹಾಗೂ ಭವಿಷ್ಯದ ಜನಾಂಗಗಳಿಗೆ ನಮ್ಮ ರಾಷ್ಟ್ರೀಯತೆಯ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುವುದು ಹಾಗೂ ನಮ್ಮ ಪೂರ್ವಜರು ಕಷ್ಟಪಟ್ಟು ದೊರಕಿಸಿ ಕೊಟ್ಟ ಸ್ವಾತಂತ್ರ್ಯವನ್ನು ಸಮರ್ಥಿಸಿದಂತಾಗುವುದು'' ಎಂದೂ ಅರ್ಜಿದಾರರು ಹೇಳಿದ್ದರು.

ಇಂಡಿಯಾ ಎಂಬ ಹೆಸರು ದೇಶಕ್ಕೆ ಸಂಬಂಧಿಸಿದ್ದಲ್ಲ. ಇದರ ಮೂಲ ಗ್ರೀಕ್‌ನ ಶಬ್ಧ ‘ಇಂಡಿಕಾ’ ಎಂಬುದಾಗಿದೆ. ಈಗ ಇಂಡಿಯಾದ ಬದಲು ಭಾರತ ಎಂದು ಹೆಸರಿಟ್ಟರೆ ಆಗ ದೇಶದ ನಿವಾಸಿಗಳಿಗೆ ವಸಾಹತುಶಾಹಿಯ ಕಹಿ ನೆನಪಿನಿಂದ ಮುಕ್ತಿ ದೊರಕಬಹುದು. ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಇದಕ್ಕೆ ಸೂಕ್ತ ಉದಾಹರಣೆ ಎಂದು ಅರ್ಜಿದಾರರು ವಾದಿಸಿದ್ದರು. ಇದೇ ರೀತಿಯ ಅರ್ಜಿಯನ್ನು 2016ರಲ್ಲೂ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕೂಲಂಕುಷವಾಗಿ ಚರ್ಚಿಸಿ ಸಂವಿಧಾನದಲ್ಲಿ ಇಂಡಿಯಾ ಮತ್ತು ಭಾರತ ಎಂಬ ಎರಡು ಹೆಸರನ್ನು ನಮೂದಿಸಲಾಗಿದೆ. ಬ್ರಿಟಿಷ್ ಇಂಡಿಯಾಕ್ಕೆ ಹಿಂದೂಸ್ತಾನ್ ಎಂದು ಹೆಸರಿತ್ತು. ಆದರೆ ಸಂವಿಧಾನ ಸಮಿತಿಯ ಹಲವು ಸದಸ್ಯರು ಈ ಹೆಸರನ್ನು ವಿರೋಧಿಸಿದ್ದರು. ದೇಶವನ್ನು ವಿಶ್ವದೆಲ್ಲೆಡೆ ಇಂಡಿಯಾ ಎಂದೇ ಕರೆಯುತ್ತಿರುವುದರಿಂದ ಈ ಹೆಸರೇ ಸೂಕ್ತ ಎಂದು ಸಂವಿಧಾನ ರಚಿಸಿದ ಬಿಆರ್ ಅಂಬೇಡ್ಕರ್ ಹೇಳಿದ್ದರು. ಬಳಿಕ ಸಂವಿಧಾನದ ಆರ್ಟಿಕಲ್ 1(1)ರ ಮಧ್ಯೆ ‘ಇಂಡಿಯಾ ಅಥವಾ ಭಾರತವು ರಾಜ್ಯಗಳ ಒಕ್ಕೂಟವಾಗಿರುತ್ತದೆ’ ಎಂದು ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News