ವಿಶ್ವ ಬೈಸಿಕಲ್ ದಿನದಂದೇ ಬಾಗಿಲು ಮುಚ್ಚಿದ ಅಟ್ಲಸ್ ಸೈಕಲ್ ಸಂಸ್ಥೆಯ ಘಟಕ !

Update: 2020-06-04 17:02 GMT

ಲಕ್ನೊ, ಜೂ.4: ಭಾರತದಲ್ಲಿ ಸೈಕಲ್ ಎಂಬ ಶಬ್ಧಕ್ಕೆ ಪರ್ಯಾಯವೆನಿಸಿರುವ ಅಟ್ಲಾಸ್ ಕಂಪೆನಿ ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿರುವ ತನ್ನ ಬೃಹತ್ ಕಾರ್ಖಾನೆಯನ್ನು ಬಂದ್ ಮಾಡಲು ನಿರ್ಧರಿಸಿದೆ. ವಿಶ್ವ ಬೈಸಿಕಲ್ ದಿನವಾದ ಜೂನ್ 3ರಂದೇ ಕೈಗೊಂಡಿರುವ ಈ ದಿಢೀರ್ ನಿರ್ಧಾರದಿಂದ ಸುಮಾರು 1 ಸಾವಿರ ನೌಕರರು ಕೆಲಸ ಕಳೆದುಕೊಳ್ಳುವಂತಾಗಿದೆ.

ಇದರೊಂದಿಗೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದ ಭಾರತದ ಸೈಕಲ್ ತಯಾರಿಕಾ ಕಂಪೆನಿಯ ಅಂತಿಮ ಘಟಕವೂ ಬಾಗಿಲು ಮುಚ್ಚಿದಂತಾಗಿದೆ. ಮಧ್ಯಪ್ರದೇಶದ ಮಲಾನ್‌ಪುರದಲ್ಲಿದ್ದ ಘಟಕವನ್ನು 2014ರ ಡಿಸೆಂಬರ್‌ನಲ್ಲಿ, ಹರ್ಯಾಣದ ಸೋನೆಪತ್‌ನಲ್ಲಿರುವ ಘಟಕವನ್ನು 2018ರ ಫೆಬ್ರವರಿಯಲ್ಲಿ ಬಂದ್ ಮಾಡಲಾಗಿದೆ. ಕಾರ್ಖಾನೆ ಮುಚ್ಚುವ ವಿಷಯದಲ್ಲಿ ಕಂಪೆನಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಹಾಗೂ ತಮಗೆ ಮಾಹಿತಿ ನೀಡದೆಯೇ ಮುಚ್ಚಲಾಗಿದೆ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಾದ ಸುದೀರ್ಘ ಲಾಕ್‌ಡೌನ್‌ನ ಬಳಿಕ ಜೂನ್ 1ರಂದು ಘಟಕ ಕಾರ್ಯಾರಂಭ ಮಾಡಿದ್ದು ನೌಕರರು ಖುಷಿಯಿಂದಲೇ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಜೂನ್ 3ರಂದು ಬಂದಾಗ ಸಂಸ್ಥೆಯ ಗೇಟಿಗೆ ಹಚ್ಚಲಾದ ನೋಟಿಸ್‌ನಲ್ಲಿ , ಆರ್ಥಿಕ ನಷ್ಟದ ಕಾರಣ ಘಟಕವನ್ನು ಮುಚ್ಚಿರುವ ಬಗ್ಗೆ ತಿಳಿಸಲಾಗಿದೆ ಎಂದು ನೌಕರರು ಹೇಳಿದ್ದಾರೆ. ಜೂನ್ 2ರಂದು ನಾವೆಲ್ಲಾ ಎಂದಿನಂತೆಯೇ ಕೆಲಸ ಮಾಡಿದ್ದೇವೆ. ಸಂಸ್ಥೆ ಮುಚ್ಚಲಿದೆ ಎಂಬ ಯಾವುದೇ ಸುಳಿವನ್ನು ಆಡಳಿತ ವರ್ಗ ನೀಡಿಲ್ಲ ಎಂದು ಕಾರ್ಮಿಕರ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್ ಹೇಳಿದ್ದಾರೆ. ಸುದೀರ್ಘಾವಧಿಯ ಲಾಕ್‌ಡೌನ್ ಬಳಿಕ ಏಕಾಏಕಿ ಹೀಗೆ ಮಾಡಿದ್ದು ನೌಕರರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಕಂಪೆನಿಯವರು ಕಾರ್ಖಾನೆಯನ್ನು ಮರು ಆರಂಭಿಸಬೇಕು ಅಥವಾ ನಮಗೆ ಆರ್ಥಿಕ ಪರಿಹಾರ ಒದಗಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು ಕಾರ್ಖಾನೆಯನ್ನು ಸಕ್ರಿಯವಾಗಿಡಲು ಗರಿಷ್ಟ ಪ್ರಯತ್ನ ನಡೆಸಿದ್ದರಿಂದ ತೀವ್ರ ನಷ್ಟವಾಗಿದೆ. ಇದೀಗ ಸಂಸ್ಥೆಯ ದೈನಂದಿನ ವ್ಯವಹಾರವನ್ನು ನಿರ್ವಹಿಸಲು ಆರ್ಥಿಕ ಮುಗ್ಗಟ್ಟು ಎದುರಾಗಿದ್ದು ಕಚ್ಛಾ ವಸ್ತುಗಳನ್ನು ಖರೀದಿಸಲೂ ಕಷ್ಟವಾಗುತ್ತಿದೆ. ಆದ್ದರಿಂದ ಕಾರ್ಖಾನೆಯನ್ನು ನಡೆಸುವ ಸ್ಥಿತಿಯಲ್ಲಿ ಆಡಳಿತ ವರ್ಗವಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ನೌಕರರು ರಜೆ ದಿನ ಹೊರತುಪಡಿಸಿ ಹಾಜರಿ ಹಾಕಬೇಕು. ಹಾಜರಿ ಹಾಕದವರಿಗೆ ಕೆಲಸದಿಂದ ತೆಗೆದ ಸಂದರ್ಭ ನೀಡುವ ಪರಿಹಾರ ಧನದ ಹಕ್ಕು ಇರುವುದಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. 1989ರಲ್ಲಿ ಆರಂಭವಾದ ಗಾಝಿಯಾಬಾದ್ ಘಟಕ ಅಟ್ಲಾಸ್ ಸಂಸ್ಥೆಯ ಅತ್ಯಂತ ದೊಡ್ಡ ಘಟಕವಾಗಿದ್ದು ಬಹುತೇಕ ಕಾರ್ಮಿಕರು ಆರಂಭದ ದಿನದಿಂದಲೂ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಸೈಕಲ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ.

ಆಡಳಿತ ವರ್ಗದ ದಿಢೀರ್ ನಿರ್ಧಾರವನ್ನು ಪ್ರಶ್ನಿಸಿ ಮಹೇಶ್ ಕುಮಾರ್ ಕಾರ್ಮಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು , ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನೌಕರರಿಗೆ ಮತ್ತು ಆಡಳಿತ ವರ್ಗಕ್ಕೆ ನ್ಯಾಯಾಲಯ ಸೂಚಿಸಿದೆ.

1951ರಲ್ಲಿ ಸ್ಥಾಪನೆ

ಜಾನಕಿದಾಸ್ ಕಪೂರ್ ಎಂಬವರು 1951ರಲ್ಲಿ ಸೋನೆಪತ್‌ನಲ್ಲಿ ತಗಡಿನ ಚಪ್ಪರದಲ್ಲಿ ಅಟ್ಲಾಸ್ ಸೈಕಲ್ ಇಂಡಸ್ಟ್ರೀಸ್ ಲಿ. ನ ಪ್ರಥಮ ಘಟಕವನ್ನು ಸ್ಥಾಪಿಸಿದರು. ಬಳಿಕ ದಾಖಲೆ 12 ತಿಂಗಳ ಅವಧಿಯಲ್ಲೇ ಅದೇ ಪ್ರದೇಶದಲ್ಲಿ 25 ಎಕರೆ ವಿಸ್ತಾರದ ಸ್ಥಳವನ್ನು ಖರೀದಿಸಿ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಲಾಯಿತು. ಪ್ರಥಮ ವರ್ಷದಲ್ಲೇ 12,000 ಸೈಕಲ್ ಉತ್ಪಾದಿಸಲಾಯಿತು. ಬಳಿಕ ಹಲವು ದೇಶಗಳಿಗೂ ಸೈಕಲ್ ರಫ್ತು ಮಾಡಲಾಯಿತು.

1965ರ ವೇಳೆಗೆ ಭಾರತದ ಅತ್ಯಧಿಕ ಸೈಕಲ್ ಉತ್ಪಾದಿಸುವ ಸಂಸ್ಥೆಯೆಂಬ ಹೆಗ್ಗಳಿಕೆ ಪಡೆಯಿತು. 1978ರಲ್ಲಿ ಭಾರತದ ಪ್ರಥಮ ರೇಸಿಂಗ್ ಬೈಸಿಕಲ್ ತಯಾರಿಸಿತು. 1982ರಲ್ಲಿ ದಿಲ್ಲಿಯಲ್ಲಿ ನಡೆದ ಏಶ್ಯಾಡ್ ಕ್ರೀಡಾಕೂಟಕ್ಕೆ ಅಧಿಕೃತ ಬೈಸಿಕಲ್ ಪೂರೈಕೆದಾರ ಎಂಬ ಹೆಗ್ಗಳಿಕೆ ಪಡೆಯಿತು. ಕಳೆದ ವರ್ಷವಷ್ಟೇ, ಸೈಕಲ್ ಉದ್ಯಮದಲ್ಲಿ ಏಶ್ಯಾದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಎಂಬ ಹಿರಿಮೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News