ವಿಡಿಯೋ ಕಾನ್ಫರೆನ್ಸ್ ಕೈಬಿಟ್ಟು, ಕೋರ್ಟ್ ಕಲಾಪ ಆರಂಭಿಸಲು ಒತ್ತಾಯಿಸಿ ವಕೀಲರಿಂದ ಧರಣಿ

Update: 2020-06-04 18:36 GMT

ಬೆಂಗಳೂರು, ಜೂ.4: ಕೊರೋನ ವೈರಸ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಕೂಡಲೇ ತಲಾ 1 ಲಕ್ಷ ರೂ.ಬಿಡುಗಡೆ ಮಾಡಲು ಸರಕಾರ ಮುಂದಾಗಬೇಕೆಂದು ಕೋ ಆರ್ಡಿನೇಟಿಂಗ್ ಕಮಿಟಿ ಫಾರ್ ಅಡ್ವೊಕೇಟ್ಸ್ ವೆಲ್‍ಫೇರ್ ಕೋವಿಡ್-19 ಒತ್ತಾಯಿಸಿದೆ.

ಗುರುವಾರ ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಜಮಾಯಿಸಿ ಧರಣಿ ನಡೆಸಿದ ವಕೀಲರು, ಮೂರು ತಿಂಗಳಿನಿಂದ ಲಾಕ್‍ಡೌನ್ ಆಗಿದ್ದು ಹಣಕಾಸಿನ ತೊಂದರೆಗೆ ಸಿಲುಕಿದ ಹಿನ್ನೆಲೆಯಲ್ಲಿ ಇಬ್ಬರು ಈಗಾಗಲೇ ವಕೀಲರು ಪ್ರಾಣ ಬಿಟ್ಟಿದ್ದಾರೆ. ಹೀಗಾಗಿ, ಈ ಕೂಡಲೇ ಕೋರ್ಟ್‍ಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಕಲಾಪ ನಡೆಸುವುದನ್ನು ಬಿಟ್ಟು ಭೌತಿಕವಾದ ಪೂರ್ಣ ಪ್ರಮಾಣದ ಕಲಾಪ ಆರಂಭಿಸಲು ಮುಖ್ಯ ನ್ಯಾಯಮೂರ್ತಿಗಳು ಮುಂದಾಗಬೇಕೆಂದು ಆಗ್ರಹಿಸಿದರು.

ಧರಣಿಯಲ್ಲಿ ಬಾಲನ್, ಭಕ್ತವತ್ಸಲ, ಮುನಿಯಪ್ಪ, ದೊರೆರಾಜು, ಭರತ್, ರಘು, ಮನೋರಂಜನಿ, ಸುಮನಾ ಹೆಗಡೆ, ನಿರ್ಮಲಾ, ವೀಣಾ ಸೇರಿ ನೂರಾರು ವಕೀಲರು ಹಾಜರಿದ್ದರು.

ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ನೀಡಲು ಭಕ್ತವತ್ಸಲ ಹಾಗೂ ಬಾಲನ್ ಅವರು ಪೊಲೀಸರ ಜೀಪಿನಲ್ಲಿ ತೆರಳಿದ್ದರು. ಆದರೆ, ಮನವಿ ನೀಡಲು ಆಸ್ಪದ ನೀಡಲಿಲ್ಲ. ಮುಂಚಿತವಾಗಿಯೇ ಭೇಟಿಗೆ ಅವಕಾಶ ಪಡೆದಿಲ್ಲ ಎಂಬ ಕಾರಣಕ್ಕೆ ಮನವಿ ಸ್ವೀಕರಿಸಲು ರಿಜಿಸ್ಟ್ರಾರ್ ಜನರಲ್ ಅವರು ಅನುಮತಿ ನೀಡಲಿಲ್ಲ ಎಂದು ಭಕ್ತವತ್ಸಲ ದೂರಿದರು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿರಂಕುಶಮತಿಯಂತೆ ವರ್ತಿಸುತ್ತಿದ್ದಾರೆ. ಬಡ ವಕೀಲರು ತೀರಾ ಕಷ್ಟದಲ್ಲಿದ್ದು ಅವರಿಗೆ ಸ್ಪಂದಿಸಬೇಕಾದ ರಾಜ್ಯ ವಕೀಲರ ಪರಿಷತ್ ಮತ್ತು ವಕೀಲರ ಸಂಘವೂ ಮೌನ ತಾಳಿದೆ ಎಂದು ಧರಣಿನಿರತರು ದೂರಿದರು.

ಬೇಡಿಕೆಗಳು: ರಾಜ್ಯಾದ್ಯಂತ ಕೋರ್ಟ್‍ಗಳನ್ನು ಕೂಡಲೇ ಪುನರಾಂಭಿಸಬೇಕು. ಮುಖ್ಯಮಂತ್ರಿಗಳು ಕೋವಿಡ್-19ರ ಪರಿಹಾರ ಘೋಷಿಸುವ ಮುಖಾಂತರ 100 ಕೋಟಿ ಪರಿಹಾರ ಬಿಡುಗಡೆ ಮಾಡಬೇಕು. ಇನ್ನು ಮುಂದೆ ನ್ಯಾಯಮಿತ್ರ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕುಗಳ ಮುಖಾಂತರ ಹಣಕಾಸಿನ ನೆರವು ಒದಗಿಸಲು ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘ ತಕ್ಷಣವೇ ಮುಂದಾಗಬೇಕು.

ರಾಜ್ಯದಲ್ಲಿರುವ 1,35,000 ವಕೀಲರಲ್ಲಿ ಶೇ.70ರಷ್ಟು ವಕೀಲರು ವೃತ್ತಿಯನ್ನೇ ಅವಲಂಬಿಸಿದ್ದು, ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಕೋರ್ಟ್ ಕಲಾಪ ಆರಂಭ ತಡೆಹಿಡಿಯುವ ಮೂಲಕ ಮುಖ್ಯ ನ್ಯಾಯಮೂತಿಗಳು ವಕೀಲರ ಹಿತಾಸಕ್ತಿ ಕಡೆಗಣಿಸಿದ್ದಾರೆ. ಇಂದಿನ ಪ್ರತಿಭಟನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಇದಕ್ಕಾಗಿ ವಕೀಲರ ಪರಿಷತ್ ಮತ್ತು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಕೀಲರ ಸಂಘಗಳು ಪ್ರತಿಭಟನೆಗೆ ಸಜ್ಜಾಗಬೇಕು ಎಂದು ಕರೆಕೊಡಲಾಗಿದೆ. ಜೂ.5ರಿಂದ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News