ಭಾರತದಲ್ಲಿ 2.22 ಲಕ್ಷ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

Update: 2020-06-05 03:57 GMT

ಹೊಸದಿಲ್ಲಿ, ಜೂ.5: ದೇಶದಲ್ಲಿ ಗುರುವಾರ 9,000ಕ್ಕೂ ಅಧಿಕ ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 2.22 ಲಕ್ಷದ ಗಡಿ ದಾಟಿದೆ. ಒಂದೇ ದಿನ ಇಷ್ಟೊಂದು ಸಂಖ್ಯೆಯ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ಸಾಂಕ್ರಾಮಿಕ ಹರಡುವಿಕೆ ತಡೆಯಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾದ ಆರ್ಥಿಕ ಹಾನಿ ಸರಿಪಡಿಸುವ ನಿಟ್ಟಿನಲ್ಲಿ ವಹಿವಾಟುಗಳ ಪುನರಾರಂಭ ವೇಗ ಪಡೆಯುತ್ತಿರುವ ನಡುವೆಯೇ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ.

ಸರ್ಕಾರ ಗುರುವಾರವಷ್ಟೇ ಕಚೇರಿ, ಹೋಟೆಲ್, ಶಾಪಿಂಗ್ ಮಾಲ್, ರೆಸ್ಟೋರೆಂಟ್ ಮತ್ತು ಧಾರ್ಮಿಕ ಸ್ಥಳಗಳನ್ನು ತೆರೆಯಲು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೋಮವಾರದಿಂದ ದೇಶದ ಆರ್ಥಿಕ ಚಟುವಟಿಕೆಗಳು ಬಹುತೇಕ ಪುನರಾರಂಭವಾಗಲಿವೆ.

ಬೆಳಗ್ಗೆ ಆರೋಗ್ಯ ಸಚಿವಾಲಯ ನೀಡಿದ ಅಪ್‌ಡೇಟ್‌ನಲ್ಲಿ 9,304 ಹೊಸ ಪ್ರಕರಣಗಳೊಂದಿಗೆ 2.16 ಲಕ್ಷ ಪ್ರಕರಣಗಳು ದಾಖಲಾದಂತಾಗಿವೆ ಎಂದು ಹೇಳಲಾಗಿತ್ತು. ದೇಶಾದ್ಯಂತ ಸಾವಿನ ಸಂಖ್ಯೆ 6,075ಕ್ಕೇರಿದೆ. ವಿವಿಧ ರಾಜ್ಯಗಳಿಂದ ಪಡೆದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 2,22,879ಕ್ಕೇರಿದೆ. ಅಮೆರಿಕ, ಬ್ರೆಝಿಲ್, ರಶ್ಯ, ಬ್ರಿಟನ್, ಸ್ಪೇನ್ ಮತ್ತು ಇಟೆಲಿಯ ಬಳಿಕ ಭಾರತ ಗರಿಷ್ಠ ಸೋಂಕಿತರನ್ನು ಹೊಂದಿದ ದೇಶಗಳ ಪೈಕಿ ಏಳನೇ ಸ್ಥಾನದಲ್ಲಿದೆ. ಒಟ್ಟು ಸಾವಿನ ಸಂಖ್ಯೆಯಲ್ಲಿ 12ನೇ ಸ್ಥಾನದಲ್ಲಿ ಹಾಗೂ ಚೇತರಿಕೆಯಲ್ಲಿ 8ನೇ ಸ್ಥಾನದಲ್ಲಿದೆ. ಆದಾಗ್ಯೂ, ಗರಿಷ್ಠ ಸಕ್ರಿಯ ಪ್ರಕರಣಗಳನ್ನು ಹೊಂದಿದ ದೇಶಗಳ ಪೈಕಿ ಭಾರತಕ್ಕೆ ಐದನೇ ಸ್ಥಾನ.

ಕಳೆದ 24 ಗಂಟೆಗಳಲ್ಲಿ 3,804 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1,04,107 ಆಗಿದೆ. 1,06,737 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ. ದೇಶದಲ್ಲಿ ಚೇತರಿಕೆ ಪ್ರಮಾಣ 47.99ರಷ್ಟಿದೆ ಎಂದು ಸಚಿವಾಲಯ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News